RCB: ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುನ್ನ ಆರ್‌ಸಿಬಿ ತಂಡಕ್ಕೆ ಬಂತು ಆನೆಬಲ!
ಐಪಿಎಲ್ 2025ರ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಆರ್ ಸಿಬಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗಾಗಲೆ ಪ್ಲೇಆಫ್ ತಲುಪುವ ತಂಡಗಳ ಯಾವುದು ಎನ್ನುವುದು ನಿರ್ಧಾರವಾಗುತ್ತಿತ್ತು. ಆರ್ ಸಿಬಿಗೆ ಎಲ್ಲವೂ ಕೂಡಿ ಬಂದಂತಾಗಿತ್ತು, ಒಂದು ತಂಡವಾಗಿ ಸಾಂಘಿಕ ಪ್ರದರ್ಶನ ನೀಡುವ ಮೂಲಕ ಹಲವು ಪಂದ್ಯಗಳಲ್ಲಿ ರೋಚಕ ಗೆಲುವು ಸಾಧಿಸಿತ್ತು. ಆದರೆ ಭಾರತ ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಐಪಿಎಲ್ ಪಂದ್ಯಾವಳಿಯನ್ನು ಒಂದು ವಾರ ಸ್ಥಗಿತಗೊಳಿಸಿದ್ದು, ಮೇ 17ರಂದು ಮತ್ತೆ ಆರಂಭವಾಗಲಿದೆ.
ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಆರ್ ಸಿಬಿ ಕೆಕೆಆರ್ ತಂಡಗಳೇ ಮರುನಿಗದಿಯಾದ ಪಂದ್ಯಾವಳಿಯ ಮೊದಲ ಪಂದ್ಯ ಆಡಲಿವೆ. ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದ್ದು ಇದರಿಂದ ಹಲವು ವಿದೇಶಿ ಆಟಗಾರರು ಐಪಿಎಲ್ ಪಂದ್ಯಗಳಿಗೆ ಲಭ್ಯವಿರುವುದು ಅನುಮಾನವಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಆಟಗಾರರು ತವರಿಗೆ ವಾಪಸ್ ತೆರಳಬೇಕಿರುವ ಕಾರಣ ಆಯ್ಕೆಯಾಗಿರುವ ಆಟಗಾರರು ಪ್ಲೇಆಫ್‌ನಲ್ಲಿ ಆಡುವುದು ಅನುಮಾನವಾಗಿದೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಏಕದಿನ ಸರಣಿ ಇರುವ ಕಾರಣ ತಂಡಕ್ಕೆ ಆಯ್ಕೆಯಾಗಿರುವ ಪ್ರಮುಖ ಆಟಗಾರರು ಕೂಡ ವಾಪಸ್ ತೆರಳುವ ಸಾಧ್ಯತೆ ಇದೆ.
ಆರ್ ಸಿಬಿಗೆ ಆತಂಕ!
ಆರ್ ಸಿಬಿ ತಂಡದಲ್ಲಿ ಇಂಗ್ಲೆಂಡ್‌ನ ಜೇಕಬ್ ಬೆಥೆಲ್, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಇದ್ದರೆ. ದಕ್ಷಿಣ ಆಫ್ರಿಕಾದ ಲುಂಗಿ ಎಂಗಿಡಿ, ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್, ಟಿಮ್ ಡೇವಿಡ್ ಇದ್ದಾರೆ. ವೆಸ್ಟ್ ಇಂಡೀಸ್‌ನ ರೊಮಾರಿಯೋ ಶೆಫರ್ಡ್ ಕೂಡ ಆರ್ ಸಿಬಿ ತಂಡದಲ್ಲಿದ್ದಾರೆ. ಈ ಎಲ್ಲಾ ಆಟಗಾರರು ಈಗಾಗಲೇ ಆರ್ ಸಿಬಿ ತಂಡದಲ್ಲಿ ಅವಕಾಶ ಪಡೆದಿದ್ದು ಮಿಂಚಿದ್ದಾರೆ.
ಪಂದ್ಯಾವಳಿ ಮುಂದೂಡಿದ ಬೆನ್ನಲ್ಲೇ ಜೋಶ್ ಹೇಜಲ್‌ವುಡ್ ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಲಿದ್ದು ಅವರು ಐಪಿಎಲ್‌ನ ಮುಂದಿನ ಪಂದ್ಯಗಳನ್ನು ಆಡಲು ಭಾರತಕ್ಕೆ ಬರುವುದಿಲ್ಲ ಎನ್ನಲಾಗಿತ್ತು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು, ಆದರೆ ಇತ್ತೀಚಿನ ವರದಿಯ ಪ್ರಕಾರ ಜೋಶ್ ಹೇಜಲ್‌ವುಡ್ ಐಪಿಎಲ್‌ನ ಮುಂದಿನ ಪಂದ್ಯಗಳನ್ನು ಆಡಲು ಸಜ್ಜಾಗಿದ್ದಾರೆ.
ಆರ್ ಸಿಬಿಯ ಆತಂಕ ದೂರ!
ಸದ್ಯ ಎಲ್ಲಾ ಆಟಗಾರರು ಲಭ್ಯವಿದ್ದರೂ ಪ್ಲೇಆಫ್‌ನಲ್ಲಿ ಯಾವ ಆಟಗಾರರು ಲಭ್ಯವಿರುತ್ತಾರೆ ಎನ್ನುವ ಪ್ರಶ್ನೆ ಕೂಡ ಇದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿರುವ ಜೇಕಬ್ ಬೆಥೆಲ್ ಪ್ಲೇಆಫ್‌ಗೆ ಲಭ್ಯವಿರುವುದು ಅನುಮಾನವಾಗಿದೆ. ರೊಮಾರಿಯೋ ಶೆಫರ್ಡ್ ಕೂಡ ವೆಸ್ಟ್ ಇಂಡೀಸ್ ತಂಡಕ್ಕೆ ಆಯ್ಕೆಯಾಗಿದ್ದು ಅವರ ಲಭ್ಯತೆ ಬಗ್ಗೆ ಕೂಡ ಪ್ರಶ್ನೆಗಳಿವೆ. ಬಿಸಿಸಿಐ ಇದಿಗ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಜೊತೆ ಚರ್ಚೆ ನಡೆಸುತ್ತಿದ್ದು ಪ್ರಯತ್ನ ಸಫಲವಾದರೆ ಶೆಫರ್ಡ್ ಫೈನಲ್‌ವರೆಗೂ ಆಡಲಿದ್ದಾರೆ. ಐಪಿಎಲ್ ಆಡುವ ಆಟಗಾರರು ಮೇ 26ಕ್ಕೆ ವಾಪಸ್ ಬರಬೇಕು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದ್ದು ಲುಂಗಿ ಎಂಗಿಡಿ ಪ್ಲೇಆಫ್‌ನಲ್ಲಿ ಆಡುವುದು ಅನುಮಾನ.
ಉಳಿದಂತೆ ಫಿಲ್ ಸಾಲ್ಟ್, ಟಿಮ್ ಡೇವಿಡ್, ನುವಾನ್ ತುಷಾರ ಪಂದ್ಯಾವಳಿಯ ಕೊನೆಯವರೆಗೂ ಲಭ್ಯವಿರಲಿದ್ದಾರೆ. ಉಳಿದ ಆಟಗಾರರ ಲಭ್ಯತೆ ಬಗ್ಗೆ ಕೆಲವು ದಿನಗಳಲ್ಲಿ ಸ್ಪಷ್ಟನೆ ಸಿಗಲಿದೆ.












Click it and Unblock the Notifications