ODI World Cup: ಸೆ.20ರಂದು ಭಾರತ ತಂಡದ ವಿಶ್ವಕಪ್ ಜೆರ್ಸಿ ಅನಾವರಣ
ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರಾದ ಅಡಿಡಾಸ್ ಬುಧವಾರ (ಸೆಪ್ಟೆಂಬರ್ 20) ಭಾರತ ಕ್ರಿಕೆಟ್ ವಿಶ್ವಕಪ್ ಜರ್ಸಿಯನ್ನು ಅನಾವರಣಗೊಳಿಸಲಿದೆ. ಜರ್ಸಿ ಬಿಡುಗಡೆ ಕಾರ್ಯಕ್ರಮವನ್ನು ಅಡಿಡಾಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ರಾತ್ರಿ 7:30 ರಿಂದ ನೇರಪ್ರಸಾರ ಮಾಡಲಾಗುತ್ತದೆ.
2023 ರ ವಿಶ್ವಕಪ್‌ಗೆ ತವರು ನೆಲದಲ್ಲಿ ಆತಿಥ್ಯ ವಹಿಸುವ ಸಂಭ್ರಮಾಚರಣೆಯಲ್ಲಿ, ಅಡಿಡಾಸ್ ಏಕದಿನ ಜರ್ಸಿಯನ್ನು ನವೀಕರಿಸಿದೆ. ಭುಜದ ಮೇಲೆ ಮೂರು ಬಿಳಿ ಪಟ್ಟಿಗಳನ್ನು ರೋಮಾಂಚಕ ತ್ರಿವರ್ಣದೊಂದಿಗೆ ಬದಲಾಯಿಸಿದೆ. 1983 ಮತ್ತು 2011 ರಲ್ಲಿ ಭಾರತದ ಐತಿಹಾಸಿಕ ಏಕದಿನ ವಿಶ್ವಕಪ್ ವಿಜಯಗಳನ್ನು ಸಂಕೇತಿಸುವ ಬಿಸಿಸಿಐ ಲೋಗೋದಲ್ಲಿ ಎರಡು ನಕ್ಷತ್ರಗಳನ್ನು ಹೊಂದಿರಲಿದೆ.
ಅಡೀಡಸ್ ತಮ್ಮ ವಿಶ್ವಕಪ್ ಅಭಿಯಾನವನ್ನು '3 ಕಾ ಡ್ರೀಮ್' ಎಂದು ಹೆಸರಿಸಿದೆ. ಅಧಿಕೃತ ಪ್ರಾಯೋಜಕರು ಈ ಅಭಿಯಾನವನ್ನು "ಭಾರತ ತಂಡಕ್ಕೆ ದೇಶದ ಅಚಲ ಬೆಂಬಲಕ್ಕೆ ಸಾಕ್ಷಿ" ಎಂದು ಕರೆದಿದೆ.

"3 ಕಾ ಡ್ರೀಮ್' ತಮ್ಮ ತಂಡವು ಮೂರನೇ ಏಕದಿನ ವಿಶ್ವಕಪ್ ಗೆಲ್ಲುವ ಶತಕೋಟಿ ಭಾರತೀಯ ಅಭಿಮಾನಿಗಳ ಕನಸಿಗೆ ಬಲ ನೀಡುತ್ತದೆ" ಎಂದು ಅಡಿಡಾಸ್ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಡೀಡಸ್‌ನ ವಿಶೇಷ ವಿಶ್ವಕಪ್ ಹಾಡನ್ನು ಭಾರತೀಯ ರಾಪರ್ ರಾಫ್ತಾರ್ ಹಾಡಿದ್ದಾರೆ. ಪ್ರಚಾರದ ವಿಡಿಯೋದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಭಾರತೀಯ ಕ್ರಿಕೆಟ್ ಅಭಿಮಾನಿಗಳೊಂದಿಗೆ ಇರುತ್ತಾರೆ.
ವಿಶ್ವಕಪ್‌ಗೆ ಮುನ್ನ ಏಕದಿನ ಸರಣಿ
ಮುಂಬರುವ ಏಕದಿನ ವಿಶ್ವಕಪ್‌ಗೆ ಮುನ್ನ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಪ್ರಮುಖ ಆಟಗಾರರಿಗೆ ಈ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದು, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್ ತಂಡವನ್ನು ಸೇರಿಕೊಂಡಿದ್ದಾರೆ. ಸೆಪ್ಟೆಂಬರ್ 22 ರಂದು ಸರಣಿಯ ಮೊದಲನೇ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 24 ಮತ್ತು 27ರಂದು ಎರಡು ಮತ್ತು ಮೂರನೇ ಏಕದಿನ ಪಂದ್ಯ ನಡೆಯಲಿದೆ.
ಇದಾದ ಬಳಿಕ ಸೆಪ್ಟೆಂಬರ್ 30ರಂದು ಭಾರತ ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 30ರಂದು ನೆದರ್ಲ್ಯಾಂಡ್ಸ್ ವಿರುದ್ಧ ಎರಡನೇ ಅಭ್ಯಾಸ ಪಂದ್ಯ ಆಡಲಿದೆ.
ಅಕ್ಟೋಬರ್ 8ರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಭಾರತ ತನ್ನ ಏಕದಿನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 14ರಂದು ಬಹುನಿರೀಕ್ಷಿತ ಭಾರತ ಪಾಕಿಸ್ತಾನ ಪಂದ್ಯ ನಡೆಯಲಿದೆ.












Click it and Unblock the Notifications