ಕೊಹ್ಲಿ ಅಲ್ಲ, ಗಿಲ್ ಅಲ್ಲ; ಐಪಿಎಲ್ 2023ರ ತನ್ನ ನೆಚ್ಚಿನ ಆಟಗಾರನನ್ನು ಹೆಸರಿಸಿ ಎಬಿ ಡಿವಿಲಿಯರ್ಸ್
ದಕ್ಷಿಣ ಆಫ್ರಿಕಾ ಹಾಗೂ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಐಪಿಎಲ್ 2023ರ ತಮ್ಮ ನೆಚ್ಚಿನ ಆಟಗಾರನನ್ನು ಆಯ್ಕೆ ಮಾಡಿದ್ದಾರೆ. ಎಲ್ಲರೂ ಕುತೂಹಲಭರಿತರಾಗಿ ಆರ್‌ಸಿಬಿಯ ವಿರಾಟ್ ಕೊಹ್ಲಿ ಅಥವಾ ಗುಜರಾತ್ ಟೈಟನ್ಸ್ ಶುಭ್ಮನ್ ಗಿಲ್ ಎಂದು ಎಲ್ಲರೂ ಅಂದುಕೊಂಡಿದ್ದರು.
ಆದರೆ, ಎಬಿ ಡಿವಿಲಿಯರ್ಸ್ ತನ್ನ ನೆಚ್ಚಿನ ಆಟಗಾರನನ್ನಾಗಿ ಆಯ್ಕೆ ಮಾಡಿಕೊಂಡಿರುವುದು ರಾಜಸ್ಥಾನ ರಾಯಲ್ಸ್‌ನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು.

ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಮ್ಮ ಟಿ20 ಶತಕದೊಂದಿಗೆ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ ಕಿರಿಯ ಕ್ರಿಕೆಟಿಗರಲ್ಲಿ ಶುಭ್ಮನ್ ಗಿಲ್ ಒಬ್ಬರಾಗಿದ್ದರೂ, ಇನ್ನೂ ಟಿ20 ಸ್ವರೂಪದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಬೇಕಿದೆ.
ಐಪಿಎಲ್ 2023ರಲ್ಲಿ ಶುಭ್ಮನ್ ಗಿಲ್ ಪ್ರತಿಯೊಂದು ಪಂದ್ಯದಲ್ಲೂ ಬೌಲರ್‌ಗಳನ್ನು ದಂಡಿಸಿದ್ದಾರೆ. ಈವರೆಗೆ ಆಡಿದ 16 ಪಂದ್ಯಗಳಲ್ಲಿ ಮೂರು ಶತಕಗಳು ಮತ್ತು 4 ಅರ್ಧಶತಕಗಳೊಂದಿಗೆ 60.79ರ ಸರಾಸರಿ ಮತ್ತು 156.43ರ ಸ್ಟ್ರೈಕ್-ರೇಟ್‌ನೊಂದಿಗೆ 851 ರನ್ ಬಾರಿಸಿ ಹೆಚ್ಚಿನ ರನ್‌ಗಳಿಂದ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಇದೇ ವೇಳೆ ಟೂರ್ನಿಯಲ್ಲಿ ಇದುವರೆಗೆ 78 ಬೌಂಡರಿ ಹಾಗೂ 33 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಶುಭ್ಮನ್ ಗಿಲ್ ಅವರು ಶಿಖರ್ ಧವನ್, ಜೋಸ್ ಬಟ್ಲರ್ ಮತ್ತು ವಿರಾಟ್ ಕೊಹ್ಲಿ ನಂತರ ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ನನ್ನ ಅತ್ಯುತ್ತಮ ಆಟಗಾರ ಯಶಸ್ವಿ ಜೈಸ್ವಾಲ್ ಎಂದ ಎಬಿ ಡಿವಿಲಿಯರ್ಸ್
ಇಷ್ಟಾಗಿಯೂ ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರು ಐಪಿಎಲ್ 2023ರ ಅತ್ಯುತ್ತಮ ಆಟಗಾರನಾಗಿ ಶುಭ್ಮನ್ ಗಿಲ್ ಅವರನ್ನು ಆಯ್ಕೆ ಮಾಡದಿರಲು ನಿರ್ಧರಿಸಿದ್ದಾರೆ. ಅವರ ಬದಲಿಗೆ ರಾಜಸ್ಥಾನ ರಾಯಲ್ಸ್‌ನ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರನ್ನು ಅತ್ಯುತ್ತಮ ಆಟಗಾರನನ್ನಾಗಿ ಹೆಸರಿಸಿದ್ದಾರೆ.
ತಮ್ಮ ನಿರಾಶಾದಾಯಕ ಅಭಿಯಾನದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಟಾರ್ ಬ್ಯಾಟರ್ ಆಗಿದ್ದ ಯಶಸ್ವಿ ಜೈಸ್ವಾಲ್ ತಮ್ಮ ತಂಡದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿ ತಮ್ಮ ಅಭಿಯಾನವನ್ನು ಮುಗಿಸಿದರು.
ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಯಶಸ್ವಿ ಜೈಸ್ವಾಲ್ ಈ ವರ್ಷ ಆಡಿದ 14 ಪಂದ್ಯಗಳಲ್ಲಿ 48.08ರ ಸರಾಸರಿ ಮತ್ತು 163.61 ಸ್ಟ್ರೈಕ್‌ರೇಟ್‌ನಲ್ಲಿ 625 ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ಯಶಸ್ವಿ ಜೈಸ್ವಾಲ್ ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಬಾರಿಸಿದ್ದು, ಅವರ ಗರಿಷ್ಠ ಸ್ಕೋರ್ 124 ರನ್ ಆಗಿದೆ.

ಯಶಸ್ವಿ ಜೈಸ್ವಾಲ್ 13 ಎಸೆತಗಳಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕದ ಮೈಲಿಗಲ್ಲು ದಾಖಲಿಸಿದರು.
ಜಿಯೋ ಸಿನಿಮಾದಲ್ಲಿ ಈ ಕುರಿತು ಮಾತನಾಡಿದ ಮಾಜಿ ಆರ್‌ಸಿಬಿ ಆಟಗಾರ ಎಬಿ ಡಿವಿಲಿಯರ್ಸ್, ಯಶಸ್ವಿ ಜೈಸ್ವಾಲ್ ಅವರನ್ನು ವಿಶೇಷವಾಗಿ ಹೊಗಳಿದರು ಮತ್ತು ಆತನನ್ನು ಐಪಿಎಲ್ 2023ರ ತಮ್ಮ ನೆಚ್ಚಿನ ಆಟಗಾರ ಎಂದು ಶ್ಲಾಘಿಸಿದರು.
"ನನಗೆ ಯಶಸ್ವಿ ಜೈಸ್ವಾಲ್ ಖಚಿತವಾಗಿ ಇಷ್ಟವಾಗಿದ್ದಾರೆ. ಈ ಯುವ ಆಟಗಾರ ಕ್ರಿಕೆಟ್‌ನ ಎಲ್ಲಾ ಹೊಡೆತಗಳನ್ನು ಆಡಿದ್ದಾರೆ. ಜೈಸ್ವಾಲ್ ವಿಕೆಟ್‌ನಲ್ಲಿ ಶಾಂತ ಮತ್ತು ಸಂಯೋಜಿತ ಮನೋಧರ್ಮವನ್ನು ಹೊಂದಿದ್ದಾರೆ ಮತ್ತು ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಲು ನೋಡುತ್ತಾರೆ".
"ಯಶಸ್ವಿ ಜೈಸ್ವಾಲ್ ಯಾವಾಗಲೂ ನಿಯಂತ್ರಣದಲ್ಲಿರುವಂತೆ ಕಾಣುತ್ತಾರೆ. ಕ್ರೀಸ್‌ನಲ್ಲಿ ಆತ ಏನು ಮಾಡುತ್ತಾನೆ ಎಂಬುದನ್ನು ನೋಡಲು ನಾನು ಇಷ್ಟಪಡುತ್ತೇನೆ,'' ಎಂದು ಎಬಿ ಡಿವಿಲಿಯರ್ಸ್ ತಿಳಿಸಿದರು.
ಯಶಸ್ವಿ ಜೈಸ್ವಾಲ್ ಅವರಿಗಿಂತ ಶುಭ್ಮನ್ ಗಿಲ್ ಸ್ವಲ್ಪ ವಯಸ್ಸಾದವರು. ಜೈಸ್ವಾಲ್ ಅವರು ಸಾಕಷ್ಟು ದೂರ ಕ್ರಮಿಸಬೇಕಿದೆ ಎಂದು ನಾನು ಭಾವಿಸುತ್ತೇನೆ. ಆತ ಶ್ರೇಷ್ಠರಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾನೆ ಎಂದು ಆರ್‌ಸಿಬಿ ಮಾಜಿ ಸ್ಟಾರ್ ಎಬಿ ಡಿವಿಲಿಯರ್ಸ್ ಹೇಳಿದರು.
ಯಶಸ್ವಿ ಜೈಸ್ವಾಲ್ ಅವರು ಐಪಿಎಲ್‌ನಲ್ಲಿ ಮತ್ತು ಇದಕ್ಕೂ ಮುನ್ನ ಇರಾನಿ ಕಪ್‌ನಲ್ಲಿ ಉತ್ತಮವಾಗಿ ಆಡಿದ್ದಕ್ಕಾಗಿ ರಾಷ್ಟ್ರೀಯ ತಂಡದಿಂದ ಕರೆ ಪಡೆದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023ರ ಫೈನಲ್‌ಗೆ ಭಾರತದ ತಂಡದ ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆಯಾಗಿದ್ದಾರೆ.












Click it and Unblock the Notifications