Siruguppa Elections : ಸಿರಗುಪ್ಪದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ
ಸಿರಗುಪ್ಪ, ಮಾರ್ಚ್ 24: ಗಣಿ ಜಿಲ್ಲೆ ಬಳ್ಳಾರಿ ಜಿಲ್ಲೆಯ ಮಹತ್ವದ ವಿಧಾನಸಭಾ ಕ್ಷೇತ್ರ ಸಿರಗುಪ್ಪ. ರಾಜಕೀಯವಾಗಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಸಿರಗುಪ್ಪದಲ್ಲಿ ಜೆಪಿ-ಕಾಂಗ್ರೆಸ್ ಸಮಬಲ ಸಂಘಟನೆ ಹೊಂದಿದೆ. ಈಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಆರಂಭಿಸಿರುವ ಜನಾರ್ಧನ ರೆಡ್ಡಿಯಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿದೆ.
ಭತ್ತದ ಕಣಜ ಎಂದೇ ಖ್ಯಾತವಾದ ಕ್ಷೇತ್ರ ಸಿರಗುಪ್ಪ. ಇದು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ವಿಧಾನಸಭಾ ಕ್ಷೇತ್ರ. ಈ ಪ್ರದೇಶದ ಇತಿಹಾಸವು ಮೌರ್ಯರ ಕಾಲಕ್ಕೆ ಸೇರಿದೆ. ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಅಶೋಕ ರಾಜನ ಶಾಸನಗಳು ಕಂಡುಬರುತ್ತವೆ. 2011 ರ ಜನಗಣತಿಯ ಪ್ರಕಾರ ಸಿರುಗುಪ್ಪ ಕ್ಷೇತ್ರದಲ್ಲಿ ಎಸ್‌ಸಿ ಮತದಾರರು ಸರಿಸುಮಾರು 44,523 ಇದ್ದಾರೆ. ಎಸ್‌ಟಿ ಮತದಾರರು ಸರಿಸುಮಾರು 38,662 ಇದ್ದಾರೆ ಎಂದು ಅಂಕಿ ಅಂಶಗಳು ತೋರಿಸಿವೆ.

ಈ ಬಾರಿ ಸಿರಗುಪ್ಪ ಬಿಜೆಪಿಯಿಂದ ಹಾಲಿ ಶಾಸಕರೂ ಆಗಿರುವ ಎಂ.ಎಸ್.ಸೋಮಲಿಂಗಪ್ಪ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಆದ್ದರಿಂದ ಬಿಜೆಪಿ ಪಕ್ಷದಿಂದ ಯಾರೂ ಆಕಾಂಕ್ಷಿತರು ಉತ್ಸಾಹ ತೋರಿಸಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಬಯಸಿ 9 ಜನರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾರಿಗೆ ಟಿಕೆಟ್ ಸಿಗುತ್ತದೆ ಕಾದು ನೋಡಬೇಕಿದೆ.
ಮಾಜಿ ಶಾಸಕರಾದ ಬಿ.ಎಂ.ನಾಗರಾಜ್, ಕಳೆದ ಬಾರಿ ಸ್ಪರ್ಧಿಸಿ ಸೋಲುಂಡಿರುವ ಮುರುಳಿಕೃಷ್ಣ, ತೆಕ್ಕಲಕೋಟೆಯ ಸ್ಥಳೀಯ ಮುಖಂಡ ಎಸ್. ನರೇಂದ್ರಸಿಂಹ, ಮಾಜಿ ಜಿಪಂ ಸದಸ್ಯಡಿ.ಕಗ್ಗಲ್ ವೀರೇಶಪ್ಪ ಅರ್ಜಿ ಸಲ್ಲಿಸಿರುವವರಲ್ಲಿ ಪ್ರಮುಖ ವ್ಯಕ್ತಿಗಳು. ತಾವು ಕ್ಷೇತ್ರದಲ್ಲಿ ಒಮ್ಮೆ ಗೆದಿದ್ದು ಈ ಬಾರಿಯೂ ನನಗೆ ಟಿಕೆಟ್ ಕೊಡಬೇಕು ಎಂದು ಮಾಜಿ ಶಾಸಕ ಬಿ.ಎಂ.ನಾಗರಾಜ್ ಅವರು ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರ ಬಳಿ ಲಾಭಿ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದು ಈ ಬಾರಿ ಗೆಲುವು ದಾಖಲಿಸಲು ನನಗೂ ಅವಕಾಶ ಕಲ್ಪಿಸಿ ಎಂದು ಮುರುಳಿಕೃಷ್ಣ ಕೂಡ ಟಿಕೆಟ್‌ಗೆ ಭರ್ಜರಿ ಲಾಭಿ ನಡೆಸಿದ್ದಾರೆ ಎಂದು ಮಾತುಗಳು ಕೇಳಿ ಬಂದಿವೆ.

ಮುರುಳಿಕೃಷ್ಣ ಅವರು ಟಿಕೆಟ್ ಆಕಾಂಕ್ಷಿ
ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಹತ್ತಿರದ ಸಂಬಂಧಿಯೂ ಆಗಿರುವ ಮುರುಳಿಕೃಷ್ಣ ಅವರು ಟಿಕೆಟ್ ಬೇಕೇ ಬೇಕು ಎಂದು ಹಠಹಿಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಬಂಡಾಯ ಏಳುವ ಸಾಧ್ಯತೆ ಇದೆ. ಕಾಂಗ್ರೆಸ್ ಹಾಗೂ ಜನತಾ ಪರಿವಾರದ ಸಂಘಟನೆ ಭದ್ರಕೋಟೆಯಂತಿದ್ದ ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 2004ರಿಂದ ಕಮಲ ಅರಳಲು ಶುರುವಾಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ದಾಖಲಿಸಿದರೆ, ಜನತಾ ಪಕ್ಷದ ಅಭ್ಯರ್ಥಿಗಳು ಸಮಬಲ ಹೋರಾಟ ನಡೆಸಿ, ಪಕ್ಷದ ಬಲವರ್ಧನೆ ಸಾಬೀತುಪಡಿಸಿದ್ದರು.
ಎಂ.ಎಸ್.ಸೋಮಲಿಂಗಪ್ಪ ಗೆಲುವು
ಸಿರಗುಪ್ಪ ಕ್ಷೇತ್ರದಲ್ಲಿ ಮೊದಲ ಬಾರಿಗೆ 2004ರಲ್ಲಿ ಅಧಿಕಾರ ಹಿಡಿಯುತ್ತಾ ಬಂದಿದೆ. 2008ರ ಚುನಾವಣೆಯಲ್ಲೂ ಎಂ.ಎಸ್.ಸೋಮಲಿಂಗಪ್ಪ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಬಿ.ಎಂ.ನಾಗರಾಜ್ ವಿರುದ್ಧ 4824 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2013ರಲ್ಲಿ ಮತ್ತೆ ಸಿರಗುಪ್ಪದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಎಂ.ನಾಗರಾಜ್‌ರನ್ನು ಚುನಾಯಿತರಾಗಿದ್ದರು. ಬಿಜೆಪಿ ಅಭ್ಯರ್ಥಿ ಸೋಮಲಿಂಗಪ್ಪ 21814 ಮತಗಳ ಭಾರೀ ಅಂತರದಿಂದ ಸೋತಿದ್ದರು. 2018ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸ್ಪರ್ಧಿಸುವ ಅವಕಾಶ ಪಡೆದ ಎಂ.ಎಸ್.ಸೋಮಲಿಂಗಪ್ಪ ಅವರು ಕಾಂಗ್ರೆಸ್‌ನ ಮುರುಳಿಕೃಷ್ಣ ವಿರುದ್ಧ ಗೆಲುವು ಸಾಧಿಸಿದ್ದರು.
ಬಿಜೆಪಿ ಸಂಕಲ್ಪ ಯಾತ್ರೆ
ಸಿರುಗುಪ್ಪ ಪಟ್ಟಣದಲ್ಲಿ ಕಳೆದ ಅಕ್ಟೋಬರ್ 13 ರಂದು ಜರುಗಿದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಎಂ.ಎಸ್.ಸೋಮಲಿಂಗಪ್ಪರನ್ನು 50 ಸಾವಿರ ಮತಗಳಿಂದ ಗೆಲ್ಲಿಸಿ ಕಳಿಸಿಕೊಡಿ ಎಂದು ಕ್ಷೇತ್ರದ ಮತದಾರರಿಗೆ ಕರೆ ನೀಡಿದ್ದರು. ಸೋಮಲಿಂಗಪ್ಪರ ಕಾರ್ಯವೈಖರಿಯನ್ನು ಕೊಂಡಾಡಿದ ಬೊಮ್ಮಾಯಿ ಅವರು ಈ ಬಾರಿ ಸೋಮಲಿಂಗಪ್ಪರಿಗೆ ಟಿಕೆಟ್ ನೀಡಿಕೆ ಪಕ್ಕಾ ಎಂಬುದನ್ನು ಪರೋಕ್ಷವಾಗಿ ಖಚಿತಪಡಿಸಿದ್ದರು.
Siruguppa Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎಂ ಎಸ್ ಸೋಮಲಿಂಗಪ್ಪ(ಬಿಜೆಪಿ) | 82,546 | ಮುರಳಿ ಕೃಷ್ಣ(ಕಾಂಗ್ರೆಸ್) | 61,275 |
| 2013 | ನಾಗರಾಜ್ ಬಿ ಎಂ (ಕಾಂಗ್ರೆಸ್) | 65,490 | ಸೋಮಲಿಂಗಪ್ಪ ಎಂ ಎಸ್(ಬಿಜೆಪಿ) | 43,676 |
| 2008 | ಸೋಮಲಿಂಗಪ್ಪ ಎಂ ಎಸ್(ಬಿಜೆಪಿ) | 43,359 | ನಾಗರಾಜ್ ಬಿ ಎಂ | 38,535 |
ಐವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಆದರೆ ಇಲ್ಲಿಗೆ ಆಟ ಮುಗಿದಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಿಸಿರುವ ಮಾಜಿ ಸಚಿವರೂ ಆದ ಜನಾರ್ದನ ರೆಡ್ಡಿ ಈ ಬಾರಿಯ ಚುನಾವಣೆಗೆ ಪಕ್ಷದ ಐವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಸಿರಗುಪ್ಪದಿಂದ ಧರೆಪ್ಪ ನಾಯಕ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಇರಲಿ ಬಿಜೆಪಿ ಇರಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಭಾರೀ ಪೈಪೋಟಿ ಒಡ್ಡುವುದು ಖಚಿತವಾಗಿದೆ.











Click it and Unblock the Notifications