ಕುಟುಂಬ ಸಮೇತರಾಗಿ ಪುನೀತ್ 'ಗಂಧದ ಗುಡಿ' ವೀಕ್ಷಿಸಿದ ಯಡಿಯೂರಪ್ಪ
ಶಿವಮೊಗ್ಗ, ನವೆಂಬರ್ 4: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶಿವಮೊಗ್ಗದಲ್ಲಿ ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಚಿತ್ರ 'ಗಂಧದ ಗುಡಿ' ಸಾಕ್ಷ್ಯಚಿತ್ರವನ್ನು ವೀಕ್ಷಿಸಿದರು.
ಶಿವಮೊಗ್ಗದ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಯಡಿಯೂರಪ್ಪ ಕುಟುಂಬ ಸಹಿತ ಗಂಧದ ಗುಡಿ ಸಾಕ್ಷ್ಯ ಚಿತ್ರ ವೀಕ್ಷಿಸಿದ್ದಾರೆ. ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಪತ್ನಿ ತೇಜಸ್ವಿನಿ, ಸೂಡಾ ಮಾಜಿ ಅಧ್ಯಕ್ಷ ಎಸ್. ಎಸ್. ಜ್ಯೋತಿ ಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪುನೀತ್ ರಾಜಕುಮಾರ್ ನಟನೆಯ ಗಂಧದ ಗುಡಿ ಸಾಕ್ಷ್ಯಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, "ನಟ ಪುನೀತ್ ರಾಜಕುಮಾರ್ ಅವರಿಗೆ ಪ್ರಕೃತಿ ಕುರಿತು ಆಸಕ್ತಿ ಇತ್ತು. ಅದ್ಭುತವಾದ ಸಿನಿಮಾ ಮಾಡಿದ್ದಾರೆ. ಇದು ಸಂತೋಷದ ಸಂಗತಿ. ಎಲ್ಲರೂ ಈ ಸಿನಿಮಾವನ್ನು ನೋಡಬೇಕು. ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿಕೊಳ್ಳಬೇಕು" ಎಂದು ಹೇಳಿದರು.

ಇನ್ನು ಯಡಿಯೂರಪ್ಪ ಅವರು ಸಿಟಿ ಸೆಂಟರ್ ಮಾಲ್‌ಗೆ ಬರುತ್ತಿದ್ದಂತೆ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು.
ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ 'ಗಂಧದ ಗುಡಿ' ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಅಕ್ಟೋಬರ್ 28ಕ್ಕೆ ತೆರೆಗೆ ಬಂದಿದ್ದ ಈ ಸಾಕ್ಷ್ಯಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿದೆ. ಪೇಯ್ಡ್ ಪ್ರೀಮಿಯರ್ ಶೋಗಳಿಂದ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಗಂಧದ ಗುಡಿ ಚಿತ್ರ, ಎರಡನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಕನ್ನಡನಾಡಿನ ಬಯಲುಸೀಮೆಯಿಂದ ಹಿಡಿದು ಕಡಲ ತೀರದವರೆಗೆ, ಬರಡು ಭೂಮಿಯಿಂದ ಪಶ್ಚಿಮಘಟ್ಟಗಳವರೆಗೆ ಸುತ್ತಾಡಿ ಅಪ್ಪು- ಅಮೋಘವರ್ಷ ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ. ಕರ್ನಾಟಕದ ಪ್ರಕೃತಿ ಸಂಪತ್ತನ್ನು ತೋರಿಸುವಂತಹ ಪ್ರಯತ್ನವನ್ನು ಗಂಧದ ಗುಡಿ ಚಿತ್ರತಂಡ ಮಾಡಿದೆ.

ಪುನೀತ್ ರಾಜ್‌ಕುಮಾರ್ ಜೊತೆಗೆ ಕರ್ನಾಟಕದ ಕಾಡು, ನದಿ, ಬೆಟ್ಟ, ಜಲಪಾತವನ್ನು ನೋಡಿ ಪ್ರೇಕ್ಷಕರು ಮನಸೋತಿದ್ದು, ಎಳೆಯರಿಂದ ಹಿರಿಯರವರೆಗೂ ಗಂಧದ ಗುಡಿ ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.
ಪ್ರೀಮಿಯರ್ ಶೋಗಳಿಂದಲೇ 18 ಲಕ್ಷ ರೂಪಾಯಿ ಗಳಿಕೆ ಮಾಡಿದ್ದ ಗಂಧದ ಗುಡಿ ಚಿತ್ರ ಮೊದಲ ದಿನ ಒಟ್ಟು 5 ಕೋಟಿ ಗಳಿಕೆ ಕಂಡಿತ್ತು. ಈ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 2ನೇ ದಿನ 4.50 ಕೋಟಿ ಗಳಿಕೆ ಮಾಡಿತ್ತು. ಸದ್ಯ ಎರಡನೇ ವಾರಕ್ಕೆ ಕಾಲಿಟ್ಟಿರುವ ಚಿತ್ರ ಒಂದು ವಾರಕ್ಕೆ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.












Click it and Unblock the Notifications