ಶಿವಮೊಗ್ಗ ಕೋಟೆಗಂಗೂರು ರೈಲ್ವೆ ಟರ್ಮಿನಲ್: ಕಾಮಗಾರಿ ಮುಗಿಸಲು ಗಡುವು ಕೊಟ್ಟ ವಿ. ಸೋಮಣ್ಣ
ಶಿವಮೊಗ್ಗ, ಸೆಪ್ಟೆಂಬರ್ 26: ಶಿವಮೊಗ್ಗ ನಗರದ ಹೊರವಲಯದ ಕೋಟೆಗಂಗೂರು ಎಂಬಲ್ಲಿ ರೈಲ್ವೆ ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27, 2023ರಂದು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈ ಯೋಜನೆಯ ಕಾಮಗಾರಿಯನ್ನು ಮುಗಿಸಲು ಈಗ ಗಡುವು ನೀಡಲಾಗಿದೆ. ವಂದೇ ಭಾರತ್ ರೈಲು ನಿರ್ವಹಣೆ ಮಾಡುವ ಸೌಕರ್ಯವೂ ಈ ಡಿಪೋದಲ್ಲಿ ಇರಲಿದೆ.
ಗುರುವಾರ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಅವರು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ರೈಲ್ವೆ ಇಲಾಖೆಯ ಅಧಿಕಾರಿಗಳ ಜೊತೆ ಕೋಟೆಗಂಗೂರಿನಲ್ಲಿ ನಿರ್ಮಿಸಲಾಗುತ್ತಿರುವ ರೈಲುಗಳನ್ನು ಸ್ವಚ್ಛಗೊಳಿಸುವ ಕೋಚಿಂಗ್ ಟರ್ಮಿನಲ್‌ಗೆ ಭೇಟಿ ನೀಡಿ, ಕಾಮಗಾರಿಗಳನ್ನು ವೀಕ್ಷಿಸಿದರು.

ಇದೊಂದು ಮಹತ್ವದ ಯೋಜನೆಯಾಗಿದೆ. ಈ ಟರ್ಮಿನಲ್ ನಿರ್ಮಾಣವಾದರೆ ಮೈಸೂರು ಮತ್ತು ಬೆಂಗಳೂರಿನ ಡಿಪೋಗಳ ಮೇಲೆ ಇರುವ ಒತ್ತಡ ಕಡಿಮೆಯಾಗಲಿದೆ. ಅಲ್ಲದೇ ಭವಿಷ್ಯದಲ್ಲಿ ಶಿವಮೊಗ್ಗದಿಂದ ಹೆಚ್ಚು ರೈಲುಗಳನ್ನು ಓಡಿಸಲು ಸಹ ಅನುಕೂಲವಾಗಲಿದೆ. ಕಾಮಗಾರಿಗಳು ಚುರುಕಿನಿಂದ ಸಾಗುತ್ತಿದೆ. ಸುಮಾರು 74 ಎಕರೆ ಜಾಗದಲ್ಲಿ 80 ಕೋಟಿ ರೂ.ಗಳ ವೆಚ್ಚದಲ್ಲಿ ಕೋಚಿಂಗ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ.
ಈ ಕಾಮಗಾರಿಯ ಟೆಂಡರ್ ಅನ್ನು ರೈಟ್ಸ್ ಎಂಬ ಸಂಸ್ಥೆಗೆ ನೀಡಲಾಗಿದೆ. ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಹಾಗೂ ಕಾಮಗಾರಿಯೂ ಸಹ ಗುಣಮಟ್ಟದಿಂದ ಕೂಡಿರುವಂತೆ ನಿರ್ವಹಿಸಬೇಕು ಎಂದು ಸಚಿವ ವಿ. ಸೋಮಣ್ಣ ಸೂಚನೆಗಳನ್ನು ನೀಡಿದ್ದಾರೆ.
ಕಾಮಗಾರಿ ಮುಗಿಸಲು ಗಡುವು: ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಸಚಿವ ವಿ. ಸೋಮಣ್ಣ, "ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಕೋಚಿಂಗ್ ಟರ್ಮಿನಲ್ ರಾಜ್ಯದಲ್ಲೇ ಮೊದಲನೆಯದಾಗಿದ್ದು, 2026ರೊಳಗೆ ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದ್ದೇನೆ" ಎಂದು ಹೇಳಿದರು.
"ಈ ಟರ್ಮಿನಲ್ ನಿರ್ಮಾಣದಿಂದ ರಾಜ್ಯದ ಎಲ್ಲಾ ರೈಲುಗಳು ಸ್ವಚ್ಛತೆಗಾಗಿ ಇಲ್ಲಿಗೆ ಬರಲಿವೆ. ಇಲ್ಲಿ ಡಿಪೋ ಆಗುವುದರಿಂದ ವಂದೇ ಭಾರತ್ ರೈಲು ಸಹ ಬರಲಿದೆ. ಟರ್ಮಿನಲ್ ನಿರ್ಮಾಣದಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಲಿವೆ" ಎಂದು ವಿ. ಸೋಮಣ್ಣ ತಿಳಿಸಿದರು.
"ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಮತ್ತು ಗುಣಮಟ್ಟವನ್ನು ಪರಿಶೀಲಿಸಲು ರೈಲ್ವೇ ಮುಖ್ಯ ಅಭಿಯಂತರರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಎಲ್ಲರೂ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲು ಸಹಕರಿಸಬೇಕು" ಎಂದು ಸಚಿವರು ಹೇಳಿದರು.
ಈ ರೈಲ್ವೆ ಕೋಚಿಂಗ್ ಡಿಪೋ ಮತ್ತು ರೈಲು ಟರ್ಮಿನಲ್ ಮುಖ್ಯ ಮಾರ್ಗದಲ್ಲಿ ಗಂಟೆಗೆ 130 ಕಿ. ಮೀ. ಮತ್ತು ಲೂಪ್ ಲೈನ್‌ಗಳಲ್ಲಿ ಗಂಟೆಗೆ 30 ಕಿ. ಮೀ. ವೇಗದಲ್ಲಿ ರೈಲು ಸಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ ಇಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಸದ್ಯದ ಯೋಜನಾ ವರದಿಯಂತೆ ಈ ಡಿಪೋದಲ್ಲಿ ಒಟ್ಟು 4 ಮಾರ್ಗ ನಿರ್ಮಾಣವಾಗಲಿದೆ. 1 ಸ್ಪೈರ್ ಲೈನ್, 1 ಟವರ್ ವ್ಯಾಗನ್ ಸೈಡಿಂಗ್, 1 ಟ್ರಾಕ್ ಯಂತ್ರ ಸೈಡಿಂಗ್, 1 ಸಿಕ್ ಲೈನ್ ಶೆಡ್, ಸಬ್ ವೇ, ಪ್ರಯಾಣಿಕರ ಓವರ್ ಬ್ರಿಡ್ಜ್ ಸಹ ಡಿಪೋದಲ್ಲಿ ನಿರ್ಮಾಣಗೊಳ್ಳುತ್ತಿದೆ.












Click it and Unblock the Notifications