ಮೊಬೈಲ್ ಅಲ್ಲ ಕಣ್ರೀ...ಟವರ್ ಅನ್ನೇ ಕದ್ದ ಕಳ್ಳರು!
ಸಾಮಾನ್ಯವಾಗಿ ಮೊಬೈಲ್ ಕಳ್ಳತನ, ಚಿನ್ನ ಕಳ್ಳತನ, ಸರಗಳ್ಳತನ, ಮನೆಗಳ್ಳತನ, ಹಣ ಕಳ್ಳತನ ಎನ್ನುವ ವಿಚಾರಗಳು ಎಲ್ಲರ ಕಿವಿಗೆ ಬಿದ್ದಿರುತ್ತೆ. ಜೇಬಲ್ಲಿದ್ರೂ, ಕೈಯಲ್ಲಿದ್ರೂ, ಬ್ಯಾಗಲ್ಲಿದ್ರೂ ಚಾಲಾಕಿ ಖದೀಮರು ಮೊಬೈಲ್ ಎಗರಿಸೋದು ಪ್ರತಿದಿನ ನಡೆಯುತ್ತಲೇ ಇರುತ್ತೆ. ಆದರೆ, ಮೊಬೈಲ್‌ಗೆ ಸಿಗ್ನಲ್ ಕೊಡೋ ಟವರ್ ಅನ್ನೇ ಕದ್ದಿರುವ ವಿಚಿತ್ರ ಘಟನೆಯೊಂದು ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ಕನ್ನಡದ ಕೆಜಿಎಫ್ ಸಿನಿಮಾದ ಮಾರ್ನಾಕೋ ಡೈನೋಸರ್ ಕೋ ಮಾರ್ನಾ ಎನ್ನುವ ಪ್ರೇರಣಾತ್ಮಕ ಡೈಲಾಗ್ ಇದೆ. ಬಹುಶಃ ಇದನ್ನೇ ಸೀರಿಯಸ್ ಆಗಿ ತೆಗೆದುಕೊಂಡಿರುವ ಕಳ್ಳರು ಸಣ್ ಪುಟ್ಟ ಮೊಬೈಲ್ ಯಾಕೆ, ಡೈರೆಕ್ಟಾಗಿ ಟವರ್ ಅನ್ನೇ ಎಗರಿಸೋಣ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗದ ಟಿಪ್ಪು ನಗರದಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ ಎನ್ನಲಾಗಿದೆ. ಖಾಸಗಿ ಕಂಪನಿಯೊಂದು 2008ರಲ್ಲಿ ಇಲ್ಲಿ ಮೊಬೈಲ್ ಟವರ್‌ವೊಂದನ್ನು ನಿಲ್ಲಿಸಿತ್ತು. ಇದಕ್ಕೆ ಆ ಜಾಗದ ಮಾಲೀಕರಿಗೆ ಬಾಡಿಗೆ ಕೂಡ ಕೊಡುತ್ತಿತ್ತು ಎಂದು ತಿಳಿದುಬಂದಿದೆ.
ಕೆಲವ ವರ್ಷಗಳವರೆಗೆ ಖಾಸಗಿ ಸಂಸ್ಥೆಯೇ ಟವರ್ ಮೇಂಟೇನೆನ್ಸ್ ಮಾಡ್ತಿತ್ತು. ಬಳಿಕ ಕೋವಿಡ್ ಪರಿಸ್ಥಿತಿ ಬಂದ ನಂತರ ನಿರ್ವಹಣೆ ಆಗುತ್ತಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಬಡವಾಗಿ ನಿಂತಿದ್ದ ಟವರ್ ನೋಡಲು ಖಾಸಗಿ ಸಂಸ್ಥೆಯವರು ಹಲವು ದಿನಗಳ ನಂತರ ಬಂದಿದ್ದರು. ಆದರೆ, ಅಲ್ಲಿ ಟವರ್ ನಾಪತ್ತೆಯಾಗಿದೆಯಂತೆ. ಮೊಬೈಲ್ ಟವರ್ ಹಾಗೂ ಅದಕ್ಕೆ ಅಳವಡಿಸಿದ್ದ ಬಿಡಿಭಾಗಗಳೂ ಮಿಸ್ಸಿಂಗ್ ಆಗಿದ್ದು, ಇದನ್ನು ಕಂಡು ಸಂಸ್ಥೆಯವರು ಶಾಕ್ ಆಗಿದ್ದಾರೆ.

ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಮೊಬೈಟ್ ಟವರ್ ಇತ್ತು. ಈಗ ಕಳವಾಗಿರುವ ಕಾರಣ ಖಾಸಗಿ ಸಂಸ್ಥೆಯವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಕಳವಾಗಿರುವ ಈ ಟವರ್ ಹಾಗೂ ಅದರೊಟ್ಟಿಗಿನ ಬಿಡಿಭಾಗಗಳ ಮೌಲ್ಯ ಸುಮಾರು 46 ಲಕ್ಷ ರೂಪಾಯಿ ಎಂದು ಹೇಳಿದ್ದಾರೆ. ಕೋರ್ಟ್ ನಿರ್ದೇಶನದ ಮೇರೆಗೆ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ.
ಆದರೆ, ಟ್ವಿಸ್ಟ್ ಏನೆಂದರೆ ಟವರ್ ಇದ್ದ ಜಾಗದ ಮಾಲೀಕರು ಕಳ್ಳತನವನ್ನು ನಿರಾಕರಿಸಿದ್ದಾರೆ. ಇಲ್ಲಿ ಟವರ್ ಕಳ್ಳತನವೇ ಆಗಿಲ್ಲ. ಆ ಖಾಸಗಿ ಕಂಪನಿಯವರೇ ಎಲ್ಲವನ್ನೂ ತಗೊಂಡು ಹೋಗಿದ್ದಾರೆ ಎಂದಿದ್ದಾರೆ.

ಈ ಟವರ್‌ಗೆ ಸುಮಾರು ಹತ್ತು ವರ್ಷಗಳವರೆಗೆ ಒಪ್ಪಂದವಾಗಿತ್ತು ಎನ್ನಲಾಗಿದೆ. ಅದರಂತೆ ಈ ಜಮೀನು ಮಾಲೀಕರು ಖಾಸಗಿ ಸಂಸ್ಥೆಯು ಪ್ರತಿ ತಿಂಗಳು 15 ಸಾವಿರ ರೂಪಾಯಿ ಬಾಡಿಗೆ ಕೊಡುವುದಾಗಿ ಒಪ್ಪಿಕೊಂಡಿತ್ತು. ಆದರೆ, ಕರಾರು ಆಗಿದ್ದರೂ ಸಂಸ್ಥೆಯು ಮಾಲೀಕನಿಗೆ ಬಾಡಿಗೆ ಹಣ ನೀಡುತ್ತಿರಲಿಲ್ಲ ಎಂದು ದೂರಲಾಗಿದೆ.
ಇದೇ ವಿಚಾರವಾಗಿ ಮಾಲೀಕರು ಹಾಗೂ ಕಂಪನಿಯವರು ಟವರ್ ಬಗ್ಗೆ ಕಡೆಗಣಿಸಿದ್ದರಂತೆ. ನಾಲ್ಕು ವರ್ಷಗಳ ಹಿಂದೆಯೇ ಟವರ್ ರಿಪೇರಿಗೆ ಬಂದಿತ್ತು, ಅದನ್ನು ದುರಸ್ತಿ ಮಾಡಲು ಖಾಸಗಿ ಕಂಪನಿಯವರು ಕೂಡ ಮುಂದಾಗಲಿಲ್ಲ ಎನ್ನಲಾಗಿದೆ.
ಈ ವೇಳೆ ಟವರ್ ರಿಪೇರಿಯಾಗಿ ಬಿದ್ದಿದ್ದು ಕಳ್ಳರ ಗಮನಕ್ಕೆ ಬಂದಿತ್ತು. ಒಂದೇ ಬಾರಿ ಕದಿಯಲು ಸಾಧ್ಯವಾಗದ ಕಾರಣ ಒಂದೊಂದೇ ಬಿಡಿಭಾಗಗಳನ್ನು ಕದ್ದು ಕೊನೆಗೆ ಜಾಗದಲ್ಲಿ ಟವರ್‌ನ ಕುರುಹೇ ಇಲ್ಲದಂತೆ ಮಾಡಿದ್ದಾರೆ. ಹಾಗಾಗಿ ದಿನಗಳು ಕಳೆದಂತೆ ಅಲ್ಲಿ ಟವರ್ ಇರಲೇ ಇಲ್ಲ ಎಂಬ ಚಿತ್ರಣ ಬದಲಾಗಿದೆ. ಕಂಪನಿಯವರು ಕೂಡ ಇದನ್ನೇ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ ಟವರ್ ಇದ್ದ ಜಾಗದ ಮಾಲೀಕರು ಕಳ್ಳತನವೇ ಆಗಿಲ್ಲ ಎಂದು ಹೇಳಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇವರಿಬ್ಬರ ಜಗಳದಲ್ಲಿ ಕಳ್ಳರಿಗೆ ಲಾಭವಾಯ್ತಾ? ಅಥವಾ ಟವರ್ ಕದ್ದಿದ್ದು ಯಾರು? ಎಂಬುವುದೇ ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ. ಈ ವಿಚಿತ್ರ ಕೇಸ್ ಬಗೆಹರಿಸುವುದು ಈಗ ಪೊಲೀಸರಿಗೂ ದೊಡ್ಡ ಸಮಸ್ಯೆಯಾಗಿದೆ.












Click it and Unblock the Notifications