ಶಿವಮೊಗ್ಗ: ಅಶ್ಲೀಲ ವಿಡಿಯೋ ಚಿತ್ರಿಸಿ, ಪ್ರಸಾರ ಮಾಡಿದವನಿಗೆ 20 ವರ್ಷ ಜೈಲು ಶಿಕ್ಷೆ
ಶಿವಮೊಗ್ಗ, ಸೆ.30: ಬಾಲಕರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆ, ಆಪರಾಧಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.
ಸೊರಬ ತಾಲೂಕಿನ 42 ವರ್ಷ ವಯಸ್ಸಿನ ತಿಮ್ಮಪ್ಪ ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ. ತಿಮ್ಮಪ್ಪನ ಅಪರಾಧ ಸಾಬೀತಾದ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಶುಕ್ರವಾರ ಶಿಕ್ಷೆ ಪ್ರಕಟಿಸಿದೆ.

ಏನಿದು ಪ್ರಕರಣ?
ಬಾಲಕರ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿರುವ ಕುರಿತು ಸೈಬರ್ ಟಿಪ್ ಲೈನ್‌ನಿಂದ ಎರಡು ವರ್ಷಗಳ ಹಿಂದೆ ದೂರು ಬಂದಿತ್ತು. ಈ ಹಿನ್ನೆಲೆ ಶಿವಮೊಗ್ಗ ಸೈಬರ್ ಕ್ರೈಮ್ ಠಾಣೆ ಪೊಲೀಸರು ತನಿಖೆ ನಡೆಸಿ 2020ರ ಜನವರಿ 12 ರಂದು ಸೊರಬದ ತಿಮ್ಮಪ್ಪನನ್ನು ಬಂಧಿಸಿದ್ದರು. ಆರೋಪಿ ವಿರುದ್ಧ ಪೋಕ್ಸೊ ಮತ್ತು ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು.
ಶಿವಮೊಗ್ಗ ಸೈಬರ್ ಕ್ರೈಮ್ ಠಾಣೆಯ ಆಗಿನ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್.ಟಿ.ಎಸ್.ಸಿ (ಪೋಕ್ಸೋ) ನ್ಯಾಯಾಲಯದ ನ್ಯಾಯಮೂರ್ತಿ ಲತಾ ಅವರು ವಿಚಾರಣೆ ನಡೆಸಿದರು. ಅಪರಾಧ ಸಾಬೀತಾದ ಹಿನ್ನೆಲೆ ತಿಮ್ಮಪ್ಪಗೆ ಇವತ್ತು 20 ವರ್ಷ ಜೈಲು ಶಿಕ್ಷೆ ಪ್ರಕಟ ಮಾಡಿದ್ದಾರೆ.
ತಿಮ್ಮಪ್ಪಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.44 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದರೆ 3 ವರ್ಷ ಸಾದಾ ಶಿಕ್ಷೆ ವಿಧಿಸಲಾಗಿದೆ. ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.












Click it and Unblock the Notifications