Shikaripura: ಇಷ್ಟು ದಿನ ತಂದೆಯ ಕೈ ಹಿಡಿದ ಶಿಕಾರಿಪುರದ ಮತದಾರ, ಬಿವೈ ವಿಜಯೇಂದ್ರರ ಕೈ ಬಿಡಲಿಲ್ಲ!
ಶಿವಮೊಗ್ಗ, ಮೇ 13: ಶಿವಮೊಗ್ಗ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಭರ್ಜರಿ ಗೆಲುವು ಸಾಧಿಸಿದ್ದಾರೆ. ತಮ್ಮ ಸಮೀಪದ ಪಕ್ಷೇತರ ಅಭ್ಯರ್ಥಿ ನಾಗರಾಜ ಗೌಡ ಅವರನ್ನು 11,000 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ಮತ್ತು ಪಕ್ಷೇತರರಾಗಿ ಸ್ಪರ್ಧಿಸಿರುವ ನಾಗರಾಜ ಗೌಡ ನಡುವೆ ಭಾರೀ ಪೈಪೋಟಿ ನಡೆಯುತ್ತಿತ್ತು. ಕೇವಲ ಒಂದೂವರೆ, ಎರಡು ಸಾವಿರ ಮತಗಳ ಅಂತರದಲ್ಲಿ ಮುನ್ನಡೆ, ಹಿನ್ನಡೆಯಲ್ಲಿ ಇದ್ದ ಇಬ್ಬರಲ್ಲಿ ಶಿಕಾರಿಪುರದ ಜನತೆ ಬಿಎಸ್ ಯಡಿಯೂರಪ್ಪ ಅವರನ್ನು ಕೈ ಬಿಡದಂತೆಯೇ ವಿಜಯೇಂದ್ರ ಅವರನ್ನು ಕೈ ಬಿಟ್ಟಿಲ್ಲ.

ಚುನಾವಣಾ ಆಯೋಗದ ಮಾಹಿತಿಯಂತೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ 81,015 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿರುವ ನಾಗರಾಜ ಗೌಡ 70,371 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಗೋಣಿ ಮಾಲತೇಶ್ 8038 ಮತಗಳನ್ನು ಪಡೆದಿದ್ದಾರೆ.
ಶಿವಶರಣರ ನಾಡು, ಹಲವು ಐತಿಹಾಸಿಕ ತಾಣಗಳ ಬೀಡು, ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠಿತ ಕ್ಷೇತ್ರವಾಗಿದ್ದ ಶಿಕಾರಿಪುರದಲ್ಲಿ ಒಟ್ಟು ಹತ್ತು ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿಯ ವಿಜಯೇಂದ್ರ ಮತ್ತು ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ ನಡುವೆ ತೀವ್ರ ಪೈಪೋಟಿ ಕಾಣಿಸುತ್ತಿತ್ತು. ಕೊನೆಗೂ ಬಿಜೆಪಿಯ ವಿಜಯೇಂದ್ರ ಗೆಲುವು ಪಡೆದಿದ್ದಾರೆ.

ಶಿಕಾರಿಪುರ 40 ವರ್ಷಗಳಲ್ಲಿ ಒಮ್ಮೆ ಹೊರತಾಗಿ ನಿರಂತರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬದ ಹಿಡಿತದಲ್ಲೇ ಇದೆ. ರಾಜ್ಯದಲ್ಲಿ ಅತಿಹೆಚ್ಚು ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕ್ಷೇತ್ರದ ಮತದಾರರು ಯಡಿಯೂರಪ್ಪರಿಗೆ ನೀಡಿದ್ದಾರೆ. ಎಂಟು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ ಪ್ರತಿಪಕ್ಷದ ನಾಯಕ, ನಾಲ್ಕು ಬಾರಿ ಮುಖ್ಯಮಂತ್ರಿ, ಹಣಕಾಸು ಸೇರಿದಂತೆ ವಿವಿಧ ಇಲಾಖೆಗಳ ಸಚಿವರೂ ಆಗಿದ್ದ ಯಡಿಯೂರಪ್ಪ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಹಿರಿಯ ಪುತ್ರ ಬಿ.ವೈ.ರಾಘವೇಂದ್ರರಿಗೆ ರಾಜಕೀಯ ಭದ್ರ ಅಡಿಪಾಯ ಹಾಕಿಕೊಟ್ಟ ಬಿಎಸ್‌ವೈ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರರನ್ನು ಶಾಸಕ ಮಾಡಬೇಕೆಂಬ ದೊಡ್ಡ ಆಕಾಂಕ್ಷೆ ಈಗ ಈಡೇರಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ವಿರುದ್ಧ 35,000 ಮತಗಳಿಂದ ಸೋತಿದ್ದ ಗೋಣಿ ಮಾಲತೇಶ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇನ್ನೂ ಹಿಂದಿನ ಚುನಾವಣೆಯ ಲೆಕ್ಕಾಚಾರಗಳನ್ನು ನೊಡುವುದಾದರೆ 2018ರಲ್ಲಿ ಬಿಜೆಪಿಯಿಂದ ಬಿಎಸ್ ಯಡಿಯೂರಪ್ಪ ಸ್ಪರ್ಧೆ ಮಾಡುವ ಮೂಲಕ 86,983 ಮತಗಳನ್ನು ಪಡೆಯುವ ಮೂಲಕ ಗೆದ್ದು ಬೀಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಜಿ ಬಿ ಮಾಲತೇಶ್ ಅವರು 51,586 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕಿಳಿದರು.












Click it and Unblock the Notifications