ಶಿವಮೊಗ್ಗ; ಡಿ.9ರ ತನಕ ನಿಷೇಧಾಜ್ಞೆ ಮುಂದುವರಿಕೆ
ಶಿವಮೊಗ್ಗ, ಡಿಸೆಂಬರ್ 07: ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144 ಅನ್ವಯ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಡಿಸೆಂಬರ್ 9ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಬಜರಂಗ ದಳದ ಮುಖಂಡ ನಾಗೇಶ್ ಮೇಲೆ ನಾಲ್ವರು ಹಲ್ಲೆ ನಡೆಸಿದ ಘಟನೆ ಬಳಿಕ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಡಿಸೆಂಬರ್ 3ರ ಮಧ್ಯಾಹ್ನ 3 ಗಂಟೆಯಿಂದ ಸೋಮವಾರ ಬೆಳಗ್ಗೆ 10 ಗಂಟೆಯ ತನಕ ಭಾರತೀಯ ದಂಡ ಪ್ರಕಿಯಾ ಸಂಹಿತೆ 1973ರ ಕಲಂ 144ರ ಅನ್ವಯ ತಹಶೀಲ್ದಾರ್ ಎನ್. ಜೆ. ನಾಗರಾಜ್ ನಗರದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿದ್ದರು.
ಸೋಮವಾರ ಅದನ್ನು ಡಿಸೆಂಬರ್ 9ರ ಬೆಳಗ್ಗೆ 10 ಗಂಟೆಯ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿರುವ ಸಂದರ್ಭದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

ಯಾವುದೇ ಮೆರವಣಿಗೆ, ಸಭೆ, ಸಮಾರಂಭ, ವಿಜಯೋತ್ಸವ, ಸಮಾವೇಶಗಳನ್ನು ನಡೆಸುವಂತಿಲ್ಲ. ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ. ಯಾವುದೇ ಸ್ಪೋಟಕ, ಪಟಾಕಿಗಳನ್ನು ಸಿಡಿಸುವಂತಿಲ್ಲ. ಸರ್ಕಾರಿ ಕಾರ್ಯಕ್ರಮ/ಮದುವೆ/ಖಾಸಗಿ ಕಾರ್ಯಕ್ರಮಗಳು ನಿಗದಿಯಾಗಿದ್ದಲ್ಲಿ ಪ್ರಾಧಿಕಾರದ ಅನುಮತಿ ಪಡೆಯಬೇಕು.
ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಬಳಿಕ ನಗರದ ವಿವಿಧ ಪ್ರದೇಶಗಳಲ್ಲಿ ಕಾರುಗಳನ್ನು ಜಖಂಗೊಳಿಸಲಾಗಿತ್ತು.
ನಗರದ ಬಡಾವಣೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಡಿಸೆಂಬರ್ 3ರ ಮಧ್ಯಾಹ್ನ 3ಗಂಟೆಯಿಂದ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.












Click it and Unblock the Notifications