Shivamogga Airport : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ ಬೊಮ್ಮಾಯಿ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡಲು ಸಚಿವ ಸಂಪುಟ ನಿರ್ಧರಿಸಿದ್ದು, ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶಿವಮೊಗ್ಗ ಫೆಬ್ರವರಿ 08: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡಲು ಸಚಿವ ಸಂಪುಟ ನಿರ್ಧರಿಸಿದ್ದು, ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶಿವಮೊಗ್ಗ ನಗರದ ಎನ್‍ಇಎಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮಾತು ಮುಂದುವರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ "2006ರ ಹಿಂದಿನ ಶಿವಮೊಗ್ಗ ಹಾಗೂ ಇಂದಿನ ಶಿವಮೊಗ್ಗದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ದಿಯನ್ನು ನಾವು ಕಾಣುತ್ತಿದ್ದೇವೆ. ಇಂದು ಸುಮಾರು 1000 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ವಸತಿ ಯೋಜನೆಗಳಡಿ ಮನೆಗಳನ್ನು ನೀಡುವುದು, ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ, ಶಿಕ್ಷಣ, ರಸ್ತೆ, ನೀರು, ನಗರಾಭಿವೃದ್ದಿ, ತಂತ್ರಜ್ಞಾನ ಹೀಗೆ ಹತ್ತು ಹಲವು ಪುಣ್ಯದ ಕೆಲಸಗಳು ಜನೋಪಯೋಗಿ ನಾಯಕರಿಂದ ಇಂದು ಸಾಧ್ಯವಾಗಿದೆ. ಕೇವಲ 18 ತಿಂಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ವಿಮಾನ ನಿಲ್ದಾಣದಿಂದಾಗಿ ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ವಲಯದಲ್ಲಿ ಜಿಲ್ಲೆಯು ಅಭಿವೃದ್ದಿ ಹೊಂದಲಿದೆ" ಎಂದರು.

"ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿಗೆ ಶಾಶ್ವತವಾಗಿ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರದ ಅನುಮತಿ ಪಡೆದ ಬಳಿಕ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ರೂಪಾಯಿ 500 ಕೋಟಿ ಮಂಜೂರು ಮಾಡಿದೆ" ಎಂದು ತಿಳಿಸಿದರು.
ಅಭಿವೃದ್ಧಿ ನಿರಂತರ ಪ್ರಕ್ರಿಯೆಯಾಗಿದೆಯಾಗಿದೆ. 7 ಸ್ಲಂಗಳಲ್ಲಿ ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಸುಮಾರು 3,000 ಬಡವರ ಮನೆಗೆ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಹಕ್ಕುಪತ್ರ ನೀಡಲಾಗುತ್ತಿದೆ. ಸಮುದಾಯಭವನಗಳ ನಿರ್ಮಾಣಕ್ಕೆ ಸಹಾಯ, ಒಳಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆ, ಮಕ್ಕಳ ಶಿಕ್ಷಣ, ಕೊಠಡಿಗಳ ನಿರ್ಮಾಣಗಳನ್ನು ಮಾಡಲಾಗಿದೆ. ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪನವರು ಜನೋಪಯೋಗಿ ನಾಯಕರಾಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಅಭಿವೃದ್ಧಿಯ ಪರಿಚಯ ಮಾಡಿಕೊಟ್ಟವರು. ಮೊದಲು ಎನ್ನುವಂಥ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ಜಿಲ್ಲಾ ಬಿಜೆಪಿ ನಾಯಕರನ್ನು ಹೊಗಳಿದರು.












Click it and Unblock the Notifications