ಶಿವಮೊಗ್ಗ; ರಾತ್ರೋರಾತ್ರಿ ಕಾಣೆಯಾಗುತ್ತಿದ್ದ ಮಹಿಳೆಯರ ಒಳ ಉಡುಪು; ಕದ್ದಿದ್ದು ಬೇರಾರೂ ಅಲ್ಲ...
ಶಿವಮೊಗ್ಗ, ನವೆಂಬರ್ 30: ಮನೆ ಮುಂದೆ ಬೆಳಿಗ್ಗೆ ಒಣ ಹಾಕಿದ್ದ ಬಟ್ಟೆಗಳನ್ನು ರಾತ್ರಿ ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ವಿಚಿತ್ರ ಸಂಗತಿಯೊಂದು ಗಮನಕ್ಕೆ ಬರುತ್ತಿತ್ತು. ಬೇರೆಲ್ಲಾ ಬಟ್ಟೆಗಳು ಇದ್ದ ಜಾಗದಲ್ಲೇ ಇದ್ದರೂ ಮಹಿಳೆಯರ ಒಳ ಉಡುಪುಗಳು ಮಾತ್ರ ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟಿರುತ್ತಿದ್ದವು. ಒಂದು ಬಾರಿ ಆಯ್ತು, ಎರಡು ಸರಿಯೂ ಆಯ್ತು, ಇದು ನಿಲ್ಲುವಂತೆಯೇ ಕಾಣಲಿಲ್ಲ. ಹೀಗೆ ಒಳ ಉಡುಪುಗಳು ಮಾಯವಾಗುತ್ತಿದ್ದ ಹಿಂದಿನ ರಹಸ್ಯವನ್ನು ತಿಳಿಯುವುದೇ ದೊಡ್ಡ ತಲೆನೋವಾಯ್ತು.
ಈ ಅನುಮಾನ, ಸಮಸ್ಯೆ ಪರಿಹಾರಕ್ಕೆ ಚಿಂತಿಸಿದ ಮನೆ ಯಜಮಾನ ಸಿಸಿ ಟಿವಿಯನ್ನು ಅಳವಡಿಸಿದ್ದರು. ಕೊನೆಗೂ ಒಳ ಉಡುಪುಗಳು ಕಾಣೆಯಾಗುತ್ತಿದ್ದುದರ ಹಿಂದಿನ ರಹಸ್ಯವನ್ನೂ ಬೇಧಿಸಿದ್ದಾಯ್ತು. ಅದರ ಹಿಂದಿನ ಕೈ ಚಳಕ ಕೊನೆಗೂ ಹೊರಗೆ ಬಿತ್ತು.
ಈ ಘಟನೆ ನಡೆದಿರುವುದು ಶಿವಮೊಗ್ಗದ ಜಿಲ್ಲೆ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ. ಗ್ರಾಮದ ಸತೀಶ್ ಎಂಬ ಶಿಕ್ಷಕರ ಮನೆಯಲ್ಲಿ ಬಟ್ಟೆಯನ್ನು ತೊಳೆದು ಒಣಗಿ ಹಾಕಿದರೆ ಸಾಕು, ರಾತ್ರಿಯಾಗುವಷ್ಟರಲ್ಲಿ ಒಳ ಉಡುಪುಗಳು ಮಾತ್ರ ಮಾಯವಾಗುತ್ತಿದ್ದವು. ಇದು ಬಟ್ಟೆ ಒಣಗಲು ಹಾಕಿದ ಪ್ರತಿ ಸಮಯದಲ್ಲೂ ಮುಂದುವರೆಯಿತು. ಹೀಗಾಗಿ ಮನೆ ಮಾಲೀಕ ಸತೀಶ್ ತಮ್ಮ ಮನೆಗೆ ಸಿಸಿಟಿವಿ ಕ್ಯಾಮೆರಾ ಹಾಕಿಸಿದ್ದರು.

ಕೊನೆಗೂ ಸತ್ಯ ಹೊರತೆ ಬಿತ್ತು. ಅವರ ಮನೆಯ ಪಕ್ಕದವನೇ ಉಡುಪು ಕದಿಯುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಆ ವ್ಯಕ್ತಿಯನ್ನು ವಿಚಾರಿಸಿದರೆ ನಾನು ಯಾವುದೇ ಒಳ ಉಡುಪು ಕದ್ದಿಲ್ಲ ಎಂದು ವಾದಿಸಿದ್ದಾನೆ. ನಂತರ ಆತನಿಗೆ ಸಿಸಿ ಟಿವಿ ದೃಶ್ಯಗಳನ್ನು ತೋರಿಸಿದಾಗ ಬೇರೆ ದಾರಿ ಕಾಣದೇ ಅದು ತಾನೇ ಎಂದು ಒಪ್ಪಿಕೊಂಡಿದ್ದಾನೆ.
ಆದರೆ ಈ ಘಟನೆ ಬಳಿಕ ಸೈಕೋ ಮನುಕುಮಾರ್ ಕುಟುಂಬಸ್ಥರು ಮನೆ ಮಾಲೀಕ ಸತೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ತೀವ್ರ ಗಾಯಗೊಂಡಿರುವ ಸತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications