Mahakumbh Mela 2025: ಶಿವಮೊಗ್ಗ-ಬನಾರಸ್ ರೈಲು ವೇಳಾಪಟ್ಟಿ, ನಿಲ್ದಾಣಗಳು
ಶಿವಮೊಗ್ಗ, ಫೆಬ್ರವರಿ 18: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ-2025 ನಡೆಯುತ್ತದೆ. ಜನವರಿ 13ರಂದು ಚಾಲನೆ ಸಿಕ್ಕಿದ್ದು, ಫೆಬ್ರುವರಿ 26ರ ತನಕ ನಡೆಯಲಿದೆ. ಮಹಾಕುಂಭ ಮೇಳಕ್ಕೆ ಮಲೆನಾಡು ಕಡೆಯಿಂದ ಸಾಗುವ ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲನ್ನು ಓಡಿಸಲಾಗುತ್ತಿದೆ. ಶಿವಮೊಗ್ಗ ಟೌನ್ ಮತ್ತು ಬನಾರಸ್ ನಡುವೆ ಒಂದು ಟ್ರಿಪ್‌ಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ರೈಲಿನ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿ ನೀಡಲಾಗಿದೆ.
ಮಹಾಕುಂಭ ಮೇಳ-2025ಕ್ಕೆ ತೆರಳುವ ಜನರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಉಡುಪಿಯಿಂದ ವಿಶೇಷ ರೈಲು ಓಡಿಸುತ್ತಿತ್ತು. ಈಗ ಶಿವಮೊಗ್ಗದಿಂದಲೂ ಒಂದು ಟ್ರಿಪ್ ಸಂಚಾರ ನಡೆಸುವ ರೈಲು ಘೋಷಣೆ ಮಾಡಲಾಗಿದೆ. ಈಗಾಗಲೇ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ಫೆಬ್ರವರಿ 25ರಂದು ಬೆಳಗ್ಗೆ 5.40ಕ್ಕೆ ಪ್ರಯಾಗರಾಜ್‍ನಿಂದ (ರೈಲು ಸಂಖ್ಯೆ 06224) ಫೆಬ್ರವರಿ 27ರ ಬೆಳಗ್ಗೆ 6:45ಕ್ಕೆ ಶಿವಮೊಗ್ಗ ತಲುಪಲಿರುವ ವಿಶೇಷ ರೈಲಿನ ಬುಕ್ಕಿಂಗ್ ಸೇವೆ ಆರಂಭವಾಗಿದ್ದು, ಯಾತ್ರಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರುತ್ತೇನೆ' ಎಂದು ಹೇಳಿದ್ದಾರೆ.
ವಿಶೇಷ ರೈಲಿನ ವೇಳಾಪಟ್ಟಿ, ನಿಲ್ದಾಣ ಮಾಹಿತಿ: ಮಹಾಕುಂಭ ಮೇಳ-2025ರ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ರೈಲ್ವೆ ಮಂಡಳಿಯು ಶಿವಮೊಗ್ಗ ಟೌನ್ ಮತ್ತು ಬನಾರಸ್ ನಡುವೆ ಒಂದು ಟ್ರಿಪ್‌ಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ರೈಲು ಸಂಖ್ಯೆ 06223 ಶಿವಮೊಗ್ಗ ಟೌನ್ ಬನಾರಸ್ ವಿಶೇಷ ಎಕ್ಸ್‌ಪ್ರೆಸ್ ರೈಲು ಶಿವಮೊಗ್ಗ ಟೌನ್‌ನಿಂದ ಫೆಬ್ರವರಿ 22 ರಂದು ಸಂಜೆ 4:40ಕ್ಕೆ ಹೊರಟು, ಫೆಬ್ರವರಿ 24ರಂದು ಮಧ್ಯಾಹ್ನ 3ಗಂಟೆಗೆ ಬನಾರಸ್ ತಲುಪಲಿದೆ.
ವಾಪಸ್ ಆಗುವ ಮಾರ್ಗದಲ್ಲಿ ರೈಲು ಸಂಖ್ಯೆ 06224 ಬನಾರಸ್-ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಬನಾರಸ್‌ನಿಂದ ಫೆಬ್ರವರಿ 25ರಂದು ಬೆಳಗಿನ ಜಾವ 1:30 ಕ್ಕೆ ಹೊರಟು, ಫೆಬ್ರವರಿ 27ರಂದು ಬೆಳಗ್ಗೆ 6:45ಕ್ಕೆ ಶಿವಮೊಗ್ಗ ಟೌನ್ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಭದ್ರಾವತಿ, ಬಿರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕ್ಯಾಂಟ್, ಹೊಸಪೇಟೆ, ಕೊಪ್ಪಳ, ಗದಗ, ಹೋಳೆ ಆಲೂರು, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್, ವಿಜಯಪುರ, ಇಂಡಿ ರೋಡ್, ಸೋಲಾಪುರ, ದೌಂಡ್, ಕೊಪರಗಾಂವ್, ಮನ್ಮಾಡ್, ಭುಸಾವಲ್, ಇಟಾರ್ಸಿ, ಪಿಪರಿಯಾ, ನರಸಿಂಗ್‌ಪುರ್, ಜಬಲ್‌ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್‌ಪುರ್, ಪ್ರಯಾಗ್‌ರಾಜ್ ಚಿಯೋಕಿ ಮತ್ತು ಮಿರ್ಜಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ವಿಶೇಷ ರೈಲು 11 ಎಸಿ ತ್ರಿ-ಟೈರ್ ಬೋಗಿಗಳು, 4 ಸ್ಲೀಪರ್ ಕ್ಲಾಸ್ ಬೋಗಿಗಳು, 2 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಲಗೇಜ್/ ಜನರೇಟರ್/ ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡಿರುತ್ತವೆ.
ಈ ರೈಲುಗಳ ಪ್ರತಿ ನಿಲ್ದಾಣದ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ಕುರಿತು ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡಬಹುದು.












Click it and Unblock the Notifications