Annamalai: ಯಡಿಯೂರಪ್ಪ ದತ್ತು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಮತಬೇಟೆ: ಅಣ್ಣಾಮಲೈ ಭಾಗಿ
ಉಡುಪಿ, ಮೇ 04: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ದತ್ತು ಕ್ಷೇತ್ರ ಎಂದೇ ಗುರುತಿಸಿಕೊಂಡಿರುವ ಬೈಂದೂರಿನಲ್ಲಿ ಬಿಜೆಪಿ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಬೈಂದೂರಿನಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ರೋಡ್ ಶೋ ಮಾಡುವ ಮೂಲಕ ಮತದಾರರನ್ನು ಸೆಳೆದರು. ಬಿರು ಬಿಸಿಲಿನ ನಡುವೆಯೂ ಸಾವಿರಾರು ಕಾರ್ಯಕರ್ತರು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.

ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಂದಾದ ಬೈಂದೂರು ವಿಧಾನಸಭಾ ಕ್ಷೇತ್ರ ಜಿಲ್ಲೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವಂತ ಕ್ಷೇತ್ರ. ಜಿಲ್ಲೆಯ ಉಳಿದ ನಾಲ್ಕು ಕ್ಷೇತ್ರಗಳು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬಂದರೆ ಬೈಂದೂರು ವಿಧಾನಸಭಾ ಕ್ಷೇತ್ರ ಮಾತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ರಾಜ್ಯದಲ್ಲಿಯೇ ಉಡುಪಿ ಜಿಲ್ಲೆಯಲ್ಲಿ ಮಾತ್ರ ಎರಡು ಹಂತದ ಚುನಾವಣೆಯನ್ನ ನೋಡಬಹುದಾಗಿದೆ.
ಸದ್ಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದು ಮೇ 7ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗಾಗಿ ಬೈಂದೂರು ಸಿದ್ಧಗೊಂಡಿದೆ. ಹಾಲಿ ಸಂಸದ ಬಿ.ವೈ ರಾಘವೇಂದ್ರ ಈ ಬಾರಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹಾಗೂ ಮತ್ತಿತರ ಬಿಜೆಪಿ ಮುಖಂಡರ ಜೊತೆಗೆ ಮತದಾರರನ್ನು ಸೆಳೆಯುವುದಕ್ಕಾಗಿ ಇಂದು ರೋಡ್ ಶೋ ನಡೆಸಿದರು.

ಹುಬ್ಬಳ್ಳಿಯಿಂದ ನೇರವಾಗಿ ಬೈಂದೂರಿಗೆ ಆಗಮಿಸಿದ ಬಿ.ಎಸ್ ಯಡಿಯೂರಪ್ಪ ಹಾಗೂ ಅಣ್ಣಾಮಲೈ, ಬೈಂದೂರಿನ ಕ್ರಾಸ್ ಬಳಿ ರೋಡ್ ಶೋಗಾಗಿ ಸಿದ್ಧಪಡಿಸಿದ್ದ ರಥವೇರಿ ಬೈಂದೂರು ನಗರದಾದ್ಯಂತ ರೋಡ್ ಶೋ ನಡೆಸಿದರು. ಕಾರ್ಯಕರ್ತರಿಂದ ಮತ ಪ್ರಚಾರ ನಡೆದಿದೆ ಇವತ್ತಿನ ರೋಡ್ ಶೋ ಕೇವಲ ಬೈಂದೂರು ಪ್ರಚಾರದ ಫೈನಲ್ ಟಚ್ ಅಪ್ ಎಂದು ಪುತ್ರ ಬಿ.ವೈ ರಾಘವೇಂದ್ರ ಹೇಳಿದರೆ, ಬಿ.ಎಸ್ ಯಡಿಯೂರಪ್ಪ ಮಾತನಾಡಿ ದೇಶದಲ್ಲಿ ಏನ್‌ಡಿಎ ಮಿತ್ರಕೂಟ 400 ಸೀಟುಗಳನ್ನು ಗೆಲ್ಲುತ್ತದೆ. ನರೇಂದ್ರ ಮೋದಿಯವರ ಅಭಿವೃದ್ಧಿ ಕೆಲಸ ಕೈ ಹಿಡಿಯುತ್ತದೆ. ಮೋದಿ ಮತ್ತೆ ಮೂರನೇ ಬಾರಿಗೆ ಪ್ರಧಾನಿಯಾಗುತ್ತಾರೆ ಹಾಗೂ ರಾಜ್ಯದಲ್ಲಿ ನಾವು ಈ ಬಾರಿ 28ಕ್ಕೆ 28 ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದರು.
ಇನ್ನು ರೋಡ್ ಶೋನಲ್ಲಿ ಭಾಗಿಯಾಗಿದ್ದ ಅಣ್ಣಾಮಲೈ ಮಾತನಾಡಿ, ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಹತಾಶಗೊಂಡಿದೆ ಕಾಂಗ್ರೆಸ್ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಿ ವೈ ರಾಘವೇಂದ್ರ ಭಾರೀ ಅಂತರದಲ್ಲಿ ಗೆಲ್ಲುತ್ತಾರೆ ಎಂದಿದ್ದಾರೆ.

ಬೈಂದೂರಿನಲ್ಲಿ ಹಾಲಿ ಸಂಸದ ಬಿವೈ ರಾಘವೇಂದ್ರ ಪರವಾಗಿ ಬಿಜೆಪಿ ಭರ್ಜರಿ ರೋಡ್ ಶೋ ನಡೆದಿದೆ. ತಮ್ಮ ನಾಯಕನ ರೋಡ್ ಶೋನಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗಿಯಾಗುವ ಮೂಲಕ ಬಿಜೆಪಿ ಪಕ್ಷವನ್ನ ಬೆಂಬಲಿಸಿದ್ದಾರೆ. ಇನ್ನು ಮೇ 7ರಂದು ನಡೆಯಲಿರುವ ಮತದಾನದಲ್ಲಿ ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications