ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಮೇಲೆ ಮಾರಣಾಂತಿಕ ಹಲ್ಲೆ
ಶಿವಮೊಗ್ಗ, ಆಗಸ್ಟ್.29: ಪರಿಸರ ಪ್ರೇಮಿ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಪತ್ರಿಕಾ ಛಾಯಾಗ್ರಾಹಕ ಹಾಗೂ ಶಿವಮೊಗ್ಗ ಪಾಲಿಕೆ 11ನೆಯ ವಾರ್ಡ್ ಪಕ್ಷೇತರ ಅಭ್ಯರ್ಥಿ ಶಿವಮೊಗ್ಗ ನಂದನ್ ಮೇಲೆ ನಿನ್ನೆ ಮಂಗಳವಾರ ರಾತ್ರಿ ಮಾರಣಾಂತಿಕ ಹಲ್ಲೆ ನಡೆದಿದೆ.
ನಗರದ ಹೊರವಲಯದ ಹರಿಗೆ ಬಳಿ ನಂದನ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ, ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ನಂದನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ.
ಇದರಿಂದ ತೀವ್ರ ಗಾಯಗೊಂಡ ನಂದನ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರ ಸೊಂಟ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪರಿಸರ ಸಂಘಟನೆಗಳು, ಇದೊಂದು ಉದ್ದೇಶಪೂರ್ವಕ ವ್ಯವಸ್ಥಿತ ಸಂಚು ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಪ್ರಕರಣ ಕುರಿತಂತೆ ಪೊಲೀಸರು ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿವೆ. ಈ ಘಟನೆಯನ್ನು ಪತ್ರಕರ್ತರ ಸಂಘ ಹಾಗೂ ಅನೇಕ ಸಂಘಟನೆಗಳು ವಿರೋಧಿಸಿದ್ದು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.












Click it and Unblock the Notifications