ನಮ್ಮ ಮೇಲೆ ಲಾರಿ ಹತ್ತಿಸಿ ಅಂದ್ರು: ಎಂಎಲ್‌ಎ ಮಗನ ಬಗ್ಗೆ ಮಹಿಳಾಧಿಕಾರಿ ಶಾಕಿಂಗ್ ಮಾಹಿತಿ
ಅಕ್ರಮ ಮರಳು ಗಣಿಗಾರಿಕೆ ತಡೆಯಲು ಮಹಿಳಾ ಅಧಿಕಾರಿಗೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ ಅವಾಚ್ಯ ಪದಗಳನ್ನು ಬಳಸಿ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ಈ ಘಟನೆ ಬಗ್ಗೆ ವಿವರ ನೀಡಿರುವ ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಶಾಸಕನ ಪುತ್ರನ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ಮೇಲೆ ನಾವು ದಾಳಿ ಮಾಡಿದ ಸಂದರ್ಭದಲ್ಲಿ ನಮ್ಮ ಮೇಲೆ ಲಾರಿ ಹತ್ತಿಸುವಂತೆ ಜೋರಾಗಿ ಕೂಗಿದ್ರು. ಏಯ್ ಇವರ ಮೇಲೆ ಗಾಡಿ ಬಿಡ್ರೋ ಎಂದು ಸೂಚನೆ ಕೊಟ್ಟಿದ್ರು. ಆಗ ನಮಗೆ ಸ್ವಲ್ಪ ಭಯ ಕೂಡ ಆಯ್ತು. ಬೇರೆ ಕಡೆಯಿಂದ ನಮಗೆ ಫೋನ್ ಕಾಲ್ ಕೂಡ ಬಂತು. ಕೊನೆಗೆ ನಾವು ಅಲ್ಲಿಂದ ವಾಪಸ್ ಹೊರಟೆವು ಎಂದು ಮಹಿಳಾಧಿಕಾರಿ ಘಟನೆ ಬಗ್ಗೆ ವಿವರಿಸಿದ್ದಾರೆ.

ಈ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಅಧಿಕಾರಿಗಳ ಹತ್ಯೆಗೆ ಸದಾ ಸಿದ್ದ ಕಾಂಗ್ರೆಸ್ ಸರ್ಕಾರ ಎಂದು ಕುಟುಕಿದೆ. ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಬಸವೇಶ್ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆ ಜೊತೆಗೆ, ಅವರ ಮೇಲೆ ಲಾರಿ ಹತ್ತಿಸಿ ಕೊಲ್ಲಲು ಪ್ರಚೋದನೆ ನೀಡಿದ್ದ ಎಂಬ ಆಘಾತಕಾರಿ ಅಂಶವನ್ನು ಮಹಿಳಾ ಅಧಿಕಾರಿಯೇ ಬಹಿರಂಗಗೊಳಿಸಿದ್ದಾರೆ ಎಂದು ಗುಡುಗಿದೆ. ಸಿದ್ದರಾಮಯ್ಯ ಅವರೆ, ಇದೇನಾ ನಿಮ್ಮ ಅಸಲಿ ಕರ್ನಾಟಕ ಮಾಡೆಲ್? ಕೂಡಲೇ ರೌಡಿ ಬಸವೇಶ್ ಹಾಗೂ ಶಾಸಕ ಸಂಗಮೇಶ್ ಅವರನ್ನು ಬಂಧಿಸಿ ಎಂದು ಆಗ್ರಹಿಸಿದೆ.
ಭದ್ರಾವತಿಯ ಘಟನೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಕರ್ತವ್ಯ ನಿರತ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಶಾಸಕರ ಪುತ್ರನೆಂಬ ಅಹಂಕಾರದಿಂದ ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಿರುವುದು ಭದ್ರಾವತಿ ಗೂಂಡಾಗಿರಿಯಲ್ಲಿ ನಲುಗುತ್ತಿರುವುದನ್ನು ಸಾಕ್ಷೀಕರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸ್ತ್ರೀಕುಲದ ಮೇಲೆ ನಡೆಯುತ್ತಿರುವ ದೌರ್ಜನ್ಯ ಒಂದು ಕಡೆಯಾದರೆ, ಸರ್ಕಾರದ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೂ ಯಾವ ರಕ್ಷಣೆ ಇಲ್ಲ ಎನ್ನುವುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಭದ್ರಾವತಿಯ ಗುಂಡಾಗಿರಿ ಆಡಳಿತ ಸಮರ್ಥಿಸುವ ರೀತಿಯಲ್ಲಿ ಸರ್ಕಾರ ಈವರೆಗೂ ಶಾಸಕರ ಪುತ್ರನ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರುವುದನ್ನು ಗಮನಿಸಿದರೆ ಈ ಸರ್ಕಾರ ಯಾರ ರಕ್ಷಕ ಎಂಬುದು ಜನರಿಗೆ ಮನವರಿಕೆಯಾಗುತ್ತದೆ ಎಂದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಅಪಮಾನವಾಯಿತೆಂದು ನಮ್ಮ ಪಕ್ಷದ ಶಾಸಕರ ವಿರುದ್ಧ ಕ್ಷಣಮಾತ್ರದಲ್ಲಿ ನಿಯಮ ಮೀರಿ ಕ್ರಮ ಜರುಗಿಸಲು ಮುಂದಾದ ಸರ್ಕಾರ, ಸರ್ಕಾರದ ಮಹಿಳಾ ಅಧಿಕಾರಿಯ ಮೇಲೆ ನೇರಾನೇರ ದುಶ್ಯಾಸನ ದಾಳಿ ನಡೆದಿರುವಾಗ ಕಣ್ಣು ಮುಚ್ಚಿ ಕುಳಿತಿರುವುದೇಕೆ? ಎಂದು ಪ್ರಶ್ನಿಸಿರುವ ವಿಜಯೇಂದ್ರ, ಈ ಸಂಬಂಧ ಮಹಿಳಾ ಆಯೋಗ ಕೂಡ ಈ ಕ್ಷಣದವರೆಗೂ ಮೌನ ವಹಿಸಿ ಕುಳಿತಿರುವುದೇಕೆ? ಎಂದು ಗುಡುಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಮಹಿಳಾ ಆಯೋಗದಿಂದ ಈ ವಿಚಾರವಾಗಿ ಸಮನ್ಸ್ ನೋಟಿಸ್ ಕಳುಹಿಸಿದ್ದೇವೆ. ಯಾವ ಶಾಸಕನ ಮಗನಾದರೂ ನನಗೆ ಕೌಂಟ್ ಆಗಲ್ಲ, ಅಲ್ಲಿ ಮಹಿಳೆಗೆ ಕೆಟ್ಟ ಪದಗಳಿಂದ ನಿಂದಿಸಿರುವುದು ಪ್ರಮುಖ ಆರೋಪ ಎಂದು ಹೇಳಿದ್ದಾರೆ. ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ್ ಅವರ ನಿಂದನೆ ವಿಚಾರವಾಗಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಅದರಲ್ಲಿ ಬಸವೇಶ್ ಹೆಸರೇ ಇಲ್ಲ ಎಂದೂ ಹೇಳಲಾಗುತ್ತಿದೆ.












Click it and Unblock the Notifications