Shivamogga: ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದ ಈಶ್ವರಪ್ಪ: ಬೆಳ್ಳಂಬೆಳಗ್ಗೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ
ಶಿವಮೊಗ್ಗ, ಏಪ್ರಿಲ್ 03: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಜಿದ್ದಾಜಿದ್ದಿಯ ನಡುವೆ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಕೂಡ ಅಬ್ಬರ ಪ್ರಚಾರ ಆರಂಭಿಸಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರೋಧದ ಮಧ್ಯೆಯೂ ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಪುರಲೆಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸು ಮೂಲಕ ಪ್ರಚಾರ ಆರಂಭಿಸಿದ್ದ ಕೆ.ಎಸ್ ಈಶ್ವರಪ್ಪ ಇಂದು ಕೂಡ ಬೆಳ್ಳಂಬೆಳಗ್ಗೆಯಿಂದಲೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಪ್ರಚಾರಕ್ಕೆ ಇಳಿದ ಕೆ.ಎಸ್. ಈಶ್ವರಪ್ಪ ನಗರ ಹೊರವಲಯದ ತ್ಯಾವರೆ ಚಟ್ನಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿದ್ದಾರೆ. ತಾನು ಈ ಬಾರಿ ಚುನಾವಣೆಗೆ ನಿಲ್ಲುವುದಾಗಿ, ತನಗೆ ಮತನೀಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಪುತ್ರ ಕಾಂತೇಶ್ ಕೂಡ ಪ್ರಚಾರದಲ್ಲಿ ತಂದೆಗೆ ಸಾಥ್ ನೀಡಿದ್ದಾರೆ.
ಬಂಡಾಯ ಸ್ಪರ್ಧೆ ಘೋಷಣೆ ಮಾಡಿದ ಕ್ಷಣದಿಂದಲೂ ಕೆ.ಎಸ್ ಈಶ್ವರಪ್ಪ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತುದ್ದು, ಪಕ್ಷದ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಈಶ್ವರಪ್ಪ ಮನವೊಲಿಸಲು ರಾಷ್ಟ್ರೀಯ ನಾಯಕರು ಕೂಡ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಕೆ.ಎಸ್ ಈಶ್ವರಪ್ಪಗೆ ಬುಲಾವ್ ನೀಡಿದ್ದು, ಇಂದು ಸಂಜೆ ಅವರ ದೆಹಲಿಗೆ ತೆರಳಲಿದ್ದಾರೆ.

ಕೆ.ಎಸ್ ಈಶ್ವರಪ್ಪ ವಿರುದ್ಧ ದೂರು ದಾಖಲು
ಧಾರ್ಮಿಕ ಕೇಂದ್ರದಲ್ಲಿ ಚುನಾವಣಾ ಪ್ರಚಾರ ಆರೋಪ ಹಿನ್ನೆಲೆ ಬಿಜೆಪಿ ಬಂಡಾಯ ನಾಯಕ ಕೆ.ಎಸ್ ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗದ ಗೋಪಾಳದ ರಂಗನಾಥಸ್ವಾಮಿ ದೇವಾಲಯಕ್ಕೆ ತೆರಳಿದ್ದ ಈಶ್ವರಪ್ಪ ಈ ವೇಳೆ ಮತಪ್ರಚಾರ ಮಾಡಿದ್ದಾರೆ. ಧಾರ್ಮಿಕ ಕೇಂದ್ರದಲ್ಲಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಚುನಾವಣಾ ಅಧಿಕಾರಿಗಳಿಂದ ತುಂಗಾನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.












Click it and Unblock the Notifications