ಕಾಂಗ್ರೆಸ್ ಶಾಸಕನ ಪುತ್ರನಿಂದ ಮಹಿಳಾ ಅಧಿಕಾರಿಗೆ ಕೆಟ್ಟ ಪದಗಳಿಂದ ಅವಾಜ್?
ಅಕ್ರಮ ಗಣಿಗಾರಿಕೆ ತಡೆಯುತ್ತಿದ್ದ ಮಹಿಳಾ ಅಧಿಕಾರಿಗೆ ಶಾಸಕರೊಬ್ಬರ ಪುತ್ರ ಅವಾಚ್ಯ ಪದಗಳನ್ನು ಬಳಸಿ ಅವಾಜ್ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಶಾಸಕನ ಪುತ್ರ ಈ ರೀತಿ ಮಹಿಳಾಧಿಕಾರಿಗೆ ಕೆಟ್ಟ ಪದಗಳಿಂದ ಬೈದು ನಿಂದಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದೆ.
ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರ ಪುತ್ರ ಅವಾಜ್ ಹಾಕಿದ್ದಾನೆ ಎಂದು ಆರೋಪ ಮಾಡಲಾಗಿದೆ. ವಿಡಿಯೋದಲ್ಲಿ ಮಹಿಳಾ ಅಧಿಕಾರಿ ಅಕ್ರಮ ಗಣಿಗಾರಿಕೆ ತಡೆಯುತ್ತಿದ್ದು, ಈ ವೇಳೆ ಅಲ್ಲಿಗೆ ಫೋನ್ ಮಾಡಿರುವ ಶಾಸಕನ ಪುತ್ರ ಸ್ಪೀಕರ್ ಹಾಕಿದ್ದಾಗಲೇ ಕೆಟ್ಟ ಪದಗಳಿಂದ ಬೈದಿದ್ದಾರೆ. ಇದರಿಂದ ಗರಂ ಆದ ಅಧಿಕಾರಿ, ಯಾರ ಹತ್ರ ಮಾತನಾಡ್ತಿದ್ದೀರಿ, ಸರಿಯಾಗಿ ಮಾತಾಡಿ ಎಂದು ಸಿಡಿದಿದ್ದಾರೆ.

ಇದಕ್ಕೆ ಮತ್ತೆ ಫೋನ್‌ನಲ್ಲಿದ್ದ ವ್ಯಕ್ತಿ ಕೆಟ್ಟದಾಗಿ ಬೈಯುತ್ತಲೇ ಇರುವುದು ವಿಡಿಯೋದಲ್ಲಿದೆ. ಈ ಬಗ್ಗೆ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ಪಕ್ಷವು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರ ಪುತ್ರ, ಕಾಂಗ್ರೆಸ್ ಪಕ್ಷದ ನೀಚ ಸಂಸ್ಕೃತಿ ಎಂಥದ್ದು, ಮಹಿಳೆಯರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಇರುವ ಧೋರಣೆ ಎಂಥದ್ದು ಎನ್ನುವುದನ್ನ ಮತ್ತೊಮ್ಮೆ ಪ್ರದರ್ಶನ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗುಡುಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ, ತಮ್ಮ ಭ್ರಷ್ಟ ಸರ್ಕಾರದ ಕಿರುಕುಳಕ್ಕೆ ಈಗಾಗಲೇ ರಾಜ್ಯದಲ್ಲಿ ನಾಲ್ಕೈದು ಪ್ರಾಮಾಣಿಕ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಮ್ಮ ಭ್ರಷ್ಟಾಚಾರದ ದಾಹಕ್ಕೆ ರಾಜ್ಯದಲ್ಲಿ ಇನ್ನೆಷ್ಟು ಬಲಿಯಾಗಬೇಕು? ಇಷ್ಟಕ್ಕೂ ಶಾಸಕರ ಪುತ್ರನಿಗೆ ಅಧಿಕಾರಿಯೊಂದಿಗೆ ಮಾತನಾಡಲು ಯಾವ ಹಕ್ಕಿದೆ? ಭದ್ರಾವತಿ ಕ್ಷೇತ್ರಕ್ಕೆ ಸಂಗಮೇಶ್ ಅವರು ಶಾಸಕರೋ ಅಥವಾ ಪಾಳೆಗಾರರೋ? ಅಥವಾ ರಾಹುಲ್ ಗಾಂಧಿ ಅವರು ತೋರಿಸುವ ಸಂವಿಧಾನದ ಪುಸ್ತಕದಲ್ಲಿ ಶಾಸಕರ ಮಕ್ಕಳಿಗೆ, ಕುಟುಂಬಸ್ಥರಿಗೂ ಅಧಿಕಾರವಿದೆಯೋ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಿಳೆಯರಿಗೆ ರಕ್ಷಣೆಯಿಲ್ಲ-ಮಹಿಳಾ ಅಧಿಕಾರಿಗಳಿಗೆ ಗೌರವವಿಲ್ಲ. ಇದು ಕರ್ನಾಟಕ ಸರ್ಕಾರದ ಮಹಿಳಾ ನೀತಿ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ. ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಸ್ಥಳಕ್ಕೆ ಹೋದಾಗ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ ಬಳಸಿದ ಭಾಷೆ ಅತ್ಯಂತ ಖಂಡನೀಯ ಎಂದು ದೂರಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೆ, ಮಹಿಳಾ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸುವುದು ನಿಮ್ಮ ಕಾಂಗ್ರೆಸ್ ಸಂಸ್ಕೃತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭದ್ರಾವತಿಯನ್ನು ರಿಪಬ್ಲಿಕ್ ಮಾಡಿ ಆಟಾಟೋಪ ಮೆರೆಯುತ್ತಿರುವ ಶಾಸಕರ ಪುತ್ರ ಬಸವೇಶ್‌ರನ್ನು ಬಂಧಿಸಿ, ಗಡಿಪಾರು ಮಾಡಿ ಎಂದು ಆಗ್ರಹಿಸಿದೆ.
ಜೆಡಿಎಸ್ ಆಕ್ರೋಶ: ಮಹಿಳೆಯರ ಮೇಲೆ ಕಾಂಗ್ರೆಸ್ ಪಕ್ಷದ ಈ ದಬ್ಬಾಳಿಕೆ, ದೌರ್ಜನ್ಯವನ್ನ ನಾಡಿನ ಜನತೆ ಗಮನಿಸುತ್ತಿದ್ದಾರೆ. ಇದಕ್ಕೆಲ್ಲ ನಾಡಿನ ಮಹಿಳೆಯರು ತಕ್ಕ ಉತ್ತರ ಕೊಡುವ ದಿನ ಬಹಳ ದೂರವಿಲ್ಲ. ಕರ್ನಾಟಕ ಸರ್ಕಾರದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲವಾಗಿದೆ. ಭದ್ರಾವತಿಯಲ್ಲಿ ಒಂದು ಪೈಸೆ ಅಭಿವೃದ್ಧಿ ಕೆಲಸ ಮಾಡದ ನಾಲಾಯಕ್ ಕಾಂಗ್ರೆಸ್ ಶಾಸಕ ಸಂಗಮೇಶ್ ಹಾಗೂ ಅವರ ಮಗ ಬಿ.ಎಸ್.ಬಸವೇಶ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ, ಗೂಂಡಾಗಿರಿ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷ ಎಕ್ಸ್‌ನಲ್ಲಿ ಕಿಡಿಕಾರಿದೆ.












Click it and Unblock the Notifications