ಸಹಜ ಸ್ಥಿತಿಗೆ ಮರಳಿದ ಶಿವಮೊಗ್ಗ: 10 ತಾಸು ಸಡಿಲಿಕೆ ಬಳಿಕ ಮತ್ತೆ ನಿಷೇಧಾಜ್ಞೆ ಜಾರಿ
ಶಿವಮೊಗ್ಗ, ಫೆ. 25: ನಿಷೇಧಾಜ್ಞೆ ಸಡಿಲಗೊಳಿಸಿದ್ದರಿಂದ ಶಿವಮೊಗ್ಗ ನಗರ ಇವತ್ತು ಸಹಜ ಸ್ಥಿತಿಗೆ ಮರಳಿದೆ. ಹತ್ತು ಗಂಟೆ ನಿಷೇಧಾಜ್ಞೆ ಸಡಿಲಗೊಳಿಸಲಾಗಿತ್ತು. ಹಾಗಾಗಿ ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶಿವಮೊಗ್ಗ ನಗರದಲ್ಲಿ ಶನಿವಾರ ಬೆಳಗ್ಗೆಯಿಂದ ನಿಷೇಧಾಜ್ಞೆ ಸಡಿಲಗೊಳಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೆ ವ್ಯಾಪಾರ, ವಹಿವಾಟು ಆರಂಭವಾಗಿತ್ತು. ತರಕಾರಿ, ಹಣ್ಣು, ಹೂವು, ದಿನಸಿ ವ್ಯಾಪಾರ ಬಿರುಸಾಗಿತ್ತು.

ಗಾಂಧಿ ಬಜಾರ್ ಪುನರಾರಂಭ
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದಿನಿಂದ ಗಾಂಧಿ ಬಜಾರ್ ಸಂಪೂರ್ಣ ಬಂದ್ ಆಗಿತ್ತು. ಇವತ್ತು ಗಾಂಧಿ ಬಜಾರ್'ಗೆ ಜೀವ ಕಳೆ ಬಂದಿದೆ. ಅಗತ್ಯ ವಸ್ತುಗಳ ಖರೀದಿಗೆ ಜನರು ಗಾಂಧಿ ಬಜಾರ್ ಕಡೆಗೆ ಬರುತ್ತಿದ್ದಾರೆ. ಇಲ್ಲಿನ ದಿನಸಿ ಅಂಗಡಿಗಳು, ತರಕಾರಿ ಮಾರುಕಟ್ಟೆ ಬಳಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದಾರೆ. ಅಹಿತಕರ ಘಟನೆಗಳನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ದೊಡ್ಡ ಸಂಖ್ಯೆಯಲ್ಲಿ ಜನ ಭೇಟಿ
ನೆಹರೂ ರಸ್ತೆ, ಬಿ.ಹೆಚ್.ರಸ್ತೆ, ದುರ್ಗಿಗುಡಿ ಸೇರಿದಂತೆ ನಗರದ ಬಹುಭಾಗದ ಅಂಗಡಿಗಳಲ್ಲಿ ವ್ಯಾಪಾರ ಗರಿಗೆದರಿದೆ. ಗ್ರಾಹಕರು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ದಿನಸಿ ಖರೀದಿ ಮಾಡುತ್ತಿದ್ದಾರೆ. ಶಿವಮೊಗ್ಗದ ಸಿಟಿ ಸೆಂಟರ್ ಮಾಲ್'ಗೂ ದೊಡ್ಡ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.

ಮುಚ್ಚಿದ್ದ ಅಂಗಡಿಗಳು ಓಪನ್
ನಿಷೇಧಾಜ್ಞೆ ಸಡಿಲಗೊಳಿಸಿದ್ದರಿಂದ ಎಲ್ಲಾ ವರ್ಗದ ವ್ಯಾಪಾರಿಗಳು ಅಂಗಡಿ ಬಾಗಿಲು ತೆಗೆದಿದ್ದಾರೆ. ಕೆಲವು ಕಡೆ ಪೊಲೀಸರು ದಿನಸಿ, ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಹೊರತು ಉಳಿದ ಅಂಗಡಿಗಳ ಬಾಗಿಲು ಬಂದ್ ಮಾಡಿಸಿದರು. ಆದರೆ ವ್ಯಾಪಾರವಿಲ್ಲದೆ ಕೈ ಸುಟ್ಟುಕೊಂಡಿರುವ ವ್ಯಾಪಾರಿಗಳು ಪೊಲೀಸರು ಬರುವವರೆಗೆ ಅಂಗಡಿ ಬಾಗಿಲು ತೆಗೆಯುತ್ತಿದ್ದಾರೆ. ಪೊಲೀಸರು ತೆರಳುವವರೆಗೆ ಬಾಗಿಲು ಬಂದ್ ಮಾಡಿಸುತ್ತಿದ್ದಾರೆ.
‘ಮದುವೆ, ಜಾತ್ರೆಗಳಿಗೆ ಖರೀದಿ ಮಾಡಲು ಜನರು ಬರುತ್ತಿದ್ದಾರೆ. ವ್ಯಾಪಾರವಿಲ್ಲದೆ ಈಗಾಗಲೆ ಬಹಳ ನಷ್ಟ ಅನುಭವಿಸಿದ್ದೇವೆ. ಈಗ ಅಂಗಡಿ ತೆಗೆಯಲು ಅವಕಾಶ ಕೊಡುತ್ತಿಲ್ಲ. ಪೊಲೀಸರು ಬಂದಾಗ ಅಂಗಡಿ ಮುಚ್ಚುತ್ತೇವೆ. ಆ ಬಳಿಕ ಸ್ವಲ್ಪ ವ್ಯಾಪಾರ ಮಾಡಿಕೊಳ್ಳುತ್ತಿದ್ದೇವೆ' ಎಂದು ಹೆಸರು ಹೇಳಲು ಬಯಸದ ಜವಳಿ ವ್ಯಾಪಾರಿ ತಿಳಿಸಿದರು.

ಮತ್ತೆ ಬಂದ ಪ್ರಯಾಣಿಕರು
ಕರ್ಫ್ಯೂ ಸಡಿಲಗೊಳಿಸಿದ ಬೆನ್ನಿಗೆ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹಳಿಗೆ ಬಂದಿದೆ. ನಗರ ಸಾರಿಗೆ ಬಸ್ಸುಗಳು ಸಂಚಾರ ಆರಂಭಿಸಿವೆ. KSRTC ಮತ್ತು ಖಾಸಗಿ ಬಸ್ಸುಗಳಲ್ಲಿ ಹೆಚ್ಚು ಪ್ರಯಾಣಿಕರು ಕಾಣಿಸುತ್ತಿದ್ದಾರೆ.
ಸೋಮವಾರದಿಂದ ಶಿವಮೊಗ್ಗ ನಗರ ಸಾರಿಗೆ ಬಸ್ಸುಗಳು ಸಂಚಾರ ನಿಲ್ಲಿಸಿದ್ದವು. ಇವತ್ತು ಬೆಳಗ್ಗೆಯಿಂದ ಬಸ್ ಸಂಚಾರ ಪುನಾರಂಭವಾಗಿದೆ. ನಗರದ ವಿವಿಧೆಡೆ ಬಸ್ಸುಗಳು ಸಂಚರಿಸಿದವರು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಖಾಸಗಿ ಬಸ್‌ಗಳ ಸಂಚಾರ ಆರಂಭ
ದೂರದ ಊರುಗಳಿಗೆ ತೆರಳುವ ಖಾಸಗಿ ಬಸ್ಸುಗಳಲ್ಲಿಯು ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿತ್ತು. ಕರ್ಫ್ಯೂ ಜಾರಿಯಾದ ಬಳಿಕ ಸರ್ಕಾರಿ ಉದ್ಯೋಗಿಗಳು, ವಿವಿಧ ಸಂಸ್ಥೆಯ ಉದ್ಯೋಗಿಗಳು ಮಾತ್ರ ಬಸ್ಸು ಹತ್ತುತ್ತಿದ್ದರು. ನಿಷೇಧಾಜ್ಞೆ ಸಡಿಲಗೊಂಡ ಹಿನ್ನೆಲೆ ಬಸ್ಸುಗಳಲ್ಲಿ ಪ್ರಯಾಣಿಕರು ಹೆಚ್ಚಳವಾಗಿದ್ದಾರೆ. ಇತ್ತ ಸರ್ಕಾರಿ ಬಸ್ ನಿಲ್ದಾಣದಲ್ಲಿಯು ಪ್ರಯಾಣಿಕರ ಸಂಖ್ಯೆ ಸಹಜ ಸ್ಥಿತಿಗೆ ಮರಳಿದೆ. ವಿವಿಧೆಡೆಗೆ ತೆರಳುವ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಇತ್ತು.

ಸಂಜೆ ಬಳಿಕ ವಹಿವಾಟಿಗೆ ನಿರ್ಬಂಧ
ನಿಷೇಧಾಜ್ಞೆ ಸಡಿಲಿಕೆ ಅವಧಿ ಪೂರ್ಣಗೊಂಡ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಅಂಗಡಿಗಳ ಬಾಗಿಲು ಬಂದ್ ಮಾಡಿಸಲಾಯಿತು. ಸಂಜೆ 4 ಗಂಟೆ ಬಳಿಕ ಎಲ್ಲಾ ವ್ಯಾಪಾರ, ವಹಿವಾಟಿಗೆ ನಿರ್ಬಂಧ ವಿಧಿಸಲಾಯಿತು.
ಗಾಂಧಿ ಬಜಾರ್, ಬಿ.ಹೆಚ್.ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ ಸೇರಿದಂತೆ ವಿವಿಧೆಡೆ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು. ಅಂಗಡಿಗಳನ್ನು ಬಂದ್ ಮಾಡುವಂತೆ ಪೊಲೀಸರು ಮೈಕ್ ಮೂಲ ಮಾಹಿತಿ ನೀಡಿದರು. ಶಿವಮೊಗ್ಗದಲ್ಲಿ ಇವತ್ತು ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಿಷೇಧಾಜ್ಞೆ ಸಡಿಲಿಕೆ ಮಾಡಲಾಗಿತ್ತು. ಭಾನುವಾರವು ಅಗತ್ಯ ವಸ್ತುಗಳ ಖರೀದಿಗೆ ಇದೆ ಸಮಯ ನಿಗದಿ ಮಾಡಲಾಗಿದೆ.












Click it and Unblock the Notifications