ಕರೆಂಟ್ ಬಿಲ್ ಕಟ್ಟಿ ಎಂದು ಬಂದ ಮೆಸೇಜ್, ಆ ನಂಬರ್‌ಗೆ ಕರೆ ಮಾಡಿದಕ್ಕೆ 5 ಲಕ್ಷ ರೂ ಮಂಗಮಾಯ
ಶಿವಮೊಗ್ಗ, ನವೆಂಬರ್ 20: ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಬಂದ ಒಂದು ಮೆಸೇಜು, ವ್ಯಕ್ತಿಯೊಬ್ಬರ ಮೂರು ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷ ಲಕ್ಷ ಹಣ ಕಳೆದುಕೊಳ್ಳುವಂತೆ ಮಾಡಿದೆ.
ಇತ್ತೀಚೆಗೆ ವಿದ್ಯುತ್ ಬಿಲ್ ಪಾವತಿಸಿ ಎಂದು ಬರುವ ಸಂದೇಶಗಳಿಂದ ಹಣ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗತೊಡಗಿವೆ. ಬಿಲ್ ಪಾವತಿಸದಿದ್ದರೆ ಪವರ್ ಕಟ್ ಮಾಡುವ ಬೆದರಿಕೆ ಎದರಿ ಮನೆ ಮಾಲಿಕರು ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಅದೇ ರೀತಿ ಶಿವಮೊಗ್ಗದ ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ವಿದ್ಯುತ್ ಬಿಲ್ ಪಾವತಿಸುವಂತೆ ಬಂದ ಮೆಸೇಜಿನಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ, 5.36 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಶಿವಮೊಗ್ಗದ ವ್ಯಕ್ತಿ, ತಮ್ಮ ಸಹೋದರನ ಮನೆಯ ವಿದ್ಯುತ್ ಬಿಲ್ ಅನ್ನು ಪ್ರತಿ ತಿಂಗಳು ಆನ್ ಲೈನ್ ಮೂಲಕ ಪಾವತಿ ಮಾಡುತ್ತಿದ್ದರು. ಈಚೆಗೆ ಸಹೋದರನ ಮೊಬೈಲ್‌ಗೆ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಮೆಸೇಜ್ ಬಂದಿದೆ. ಇದನ್ನು ಸಹೋದರ, ಶಿವಮೊಗ್ಗದ ವ್ಯಕ್ತಿಯ ಮೊಬೈಲ್‌ಗೆ ಕಳುಹಿಸಿದ್ದಾರೆ. ವಿಚಾರಿಸೋಣ ಎಂದು ಶಿವಮೊಗ್ಗದ ವ್ಯಕ್ತಿ ಮೆಸೇಜ್ ಕಳುಹಿಸಿದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾರೆ.

ತಲಾ 2 ರೂ. ಟ್ರಾನ್ಸ್ ಫರ್ ಮಾಡುವಂತೆ ಸಲಹೆ
ಮೆಸೇಜ್ ಕಳುಹಿಸಿದ ವ್ಯಕ್ತಿಗೆ ಕರೆ ಮಾಡುತ್ತಿದ್ದಂತೆ ಆತ ಎನಿ ಡೆಸ್ಕ್ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾನೆ. ಅದರಲ್ಲಿರುವ 9 ರೆಫರೆನ್ಸ್ ನಂಬರ್ ಪಡೆದುಕೊಂಡಿದ್ದಾನೆ. ಶಿವಮೊಗ್ಗದ ವ್ಯಕ್ತಿ ಬಳಿ ಇದ್ದ ಮೂರು ಬ್ಯಾಂಕ್ ಖಾತೆಯಿಂದ ತಲಾ 2 ರೂ.ಗಳನ್ನು ಕಳುಹಿಸುವಂತೆ ತಿಳಿಸಿದ್ದಾನೆ. ಕರೆ ಮಾಡಿದ ವ್ಯಕ್ತಿ ಹೇಳಿದಂತೆಯೇ ಶಿವಮೊಗ್ಗದ ವ್ಯಕ್ತಿ ಮಾಡಿದ್ದಾರೆ.

3 ಬ್ಯಾಂಕ್‌ಗಳ ಹಣ ಕೆಲ ಹೊತ್ತಿನಲ್ಲೇ ಮಾಯ
ಇದಾಗಿ ಕೆಲವೇ ಹೊತ್ತಿನಲ್ಲಿ ಶಿವಮೊಗ್ಗದ ವ್ಯಕ್ತಿಯ ಮೊಬೈಲ್ ಹ್ಯಾಕ್ ಆಗಿದೆ. ಕರೆ ಮಾಡಿದ್ದ ವ್ಯಕ್ತಿಯು ಶಿವಮೊಗ್ಗದ ವ್ಯಕ್ತಿಯ ಮೊಬೈಲನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದ್ದಾನೆ. ಬಳಿಕ ಬ್ಯಾಂಕ್ ಖಾತೆಯಿಂದ ಲಕ್ಷ ಲಕ್ಷ ರೂ. ಮಾಯವಾಗಿದೆ. ಎಸ್.ಬಿ.ಐ ಬ್ಯಾಂಕ್ ಖಾತೆಯಿಂದ 2.47 ಲಕ್ಷ ರೂ. ಯೂನಿಯನ್ ಬ್ಯಾಂಕ್ ಖಾತೆಯಿಂದ 1.48 ಲಕ್ಷ ರೂ. ಇಂಡಿಯನ್ ಬ್ಯಾಂಕ್ ಖಾತೆಯಿಂದ 1.41 ಲಕ್ಷ ರೂ. ಕಡಿತವಾಗಿದೆ. ಒಟ್ಟು 5.36 ಲಕ್ಷ ರೂ. ಹಣವನ್ನು ಖಾತೆಯಿಂದ ಲಪಟಾಯಿಸಲಾಗಿದೆ ಎಂದು ಶಿವಮೊಗ್ಗದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಅಜಯ್ ಕುಮಾರ್ ಶ್ರೀವಾತ್ಸವ ಎಂಬಾತನ ವಿರುದ್ಧ ಶಿವಮೊಗ್ಗದ ವ್ಯಕ್ತಿ ದೂರು ನೀಡಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್ ಖದೀಮರ ಮೋಸಕ್ಕೆ ಬಲಿಯಾಗದಿರಿ
ಬಿಲ್ ಪಾವತಿ, ಬ್ಯಾಂಕ್ ಖಾತೆ ಮುಚ್ಚಲಾಗುತ್ತದೆ, ಎಟಿಎಂ ಅವಧಿ ಮುಗಿಯಿತು ಸೇರಿದಂತೆ ನಾನಾ ನೆಪಗಳನ್ನು ಇಟ್ಟುಕೊಂಡು, ವಂಚಕರು ಅಮಾಯಕರಿಗೆ ಬಲೆ ಬೀಸುತ್ತಿದ್ದಾರೆ. ಯಾವುದೊ ಆ್ಯಪ್ ಡೌನ್ ಲೌಡ್ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಕೆಲವೊಂದು ಸಲ ಒಟಿಪಿ ಪಡೆದು ಅವುಗಳನ್ನು ಬಳಸಿಕೊಂಡು ಹಣ, ಮೊಬೈಲ್ ನಲ್ಲಿರುವ ಡೇಟಾ ಕದಿಯುತ್ತಾರೆ. ಅನಾಮಧೇಯ ಆ್ಯಪ್ ಡೌನ್ ಲೋಡ್ ಮಾಡುವ ಮೊದಲು ಎಚ್ಚರ ವಹಿಸಬೇಕಾಗುತ್ತದೆ.

2.5 ಲಕ್ಷ ಕಳೆದುಕೊಂಡಿದ್ದ ಬೆಂಗಳೂರು ವ್ಯಕ್ತಿ
ಇದೇ ರೀತಿಯ ಪ್ರಕರಣ ಬೆಂಗಳೂರಿನಲ್ಲೂ ನಡೆದಿದ್ದು, ವ್ಯಕ್ತಿಯೊಬ್ಬ ಅಕೌಂಟೆಂಟ್‌ಗೆ ಕರೆ ಮಾಡಿ ವಿದ್ಯುತ್ ಬಿಲ್‌ನಲ್ಲಿ 11 ರೂ. ಬಾಕಿ ಹಣ ಕಟ್ಟಬೇಕಿದ್ದು, ತಾನೂ ಕಳಿಸಿರುವ ಲಿಂಗ್ ಕ್ಲಿಕ್ ಮಾಡದಿದ್ದರೆ ವಿದ್ಯುತ್ ಸಂಪರ್ಕ್ ಕಡಿತ ಮಾಡುವುದಾಗಿ ಬೆದರಿಕೆಯಾಕಿದ್ದಾನೆ. ಆನ್‌ಲೈನ್ ಮೂಲಕ ವಿದ್ಯುತ್ ಪಾವತಿ ಮಾಡುವುದಕ್ಕೆ ಅಕೌಂಟೆಂಟ್ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಮೊಬೈಲ್ ಹ್ಯಾಕ್ ಮಾಡಿದ ಆರೋಪಿ 2.5 ಲಕ್ಷ ರೂ ಎಗರಿಸಿದ್ದಾನೆ.
ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಸ್ಕಾಂ ಅಧಿಕಾರಿಗಳು ಸಂಸ್ಥೆಯಿಂದ ಗ್ರಾಹಕರಿಗೆ ಬಿಲ್ ಪಾವತಿಸಿ ಎಂದು ಯಾವುದೇ ಲಿಂಕ್ ಕಳಿಹಿಸುವುದಿಲ್ಲ. ಇಂತಹ ಮೋಸದ ಜಾಲಕ್ಕೆ ಬೀಳದಿರಿ ಎಂದು ಎಚ್ಚರಿಸಿದ್ದಾರೆ.












Click it and Unblock the Notifications