ಡಿಕೆಶಿ, ಎಚ್ಡಿಕೆ ಪ್ರಾಬಲ್ಯ ಮುರಿಯಲು ಬಿಎಸ್ ವೈ ಅಸ್ತ್ರ ಪ್ರಯೋಗ
ರಾಮನಗರ, ಡಿಸೆಂಬರ್ 12: ರಾಮನಗರ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸೈಡ್ ಲೈನ್ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಜ್ಜಾಗಿದ್ದಾರೆ.
ರಾಮನಗರ ಜಿಲ್ಲೆಗೆ ಮಂಜೂರಾಗಿದ್ದ ಹಲವು ಯೋಜನೆಗಳನ್ನು ರದ್ದುಗೊಳಿಸಲಾಗಿದೆ. ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಡಾ.ಸುಧಾಕರ್ ಅವರ ಒತ್ತಡಕ್ಕೆ ಮಣಿದು ಯಡಿಯೂರಪ್ಪ ಸರ್ಕಾರ ಅಲ್ಲಿಂದ ಸ್ಥಳಾಂತರಗೊಳಿಸಿ ಚಿಕ್ಕಬಳ್ಳಾಪುರಕ್ಕೆ ನೀಡಲಾಗಿದೆ.
ರಾಮನಗರ ಜಿಲ್ಲೆಯಿಂದ ಸಮ್ಮಿಶ್ರ ಸರ್ಕಾರದ ಯೋಜನೆಗಳು ಒಂದೊಂದಾಗಿ ಕೈತಪ್ಪಿ ಹೋಗುತ್ತಿವೆ. ಯಾವುದೇ ಸರ್ಕಾರವಿರಲಿ ತಮ್ಮ ಕೆಲಸಗಳನ್ನು ಸದ್ದಿಲ್ಲದೆ ಮಾಡಿಸಿಕೊಳ್ಳುತ್ತಿದ ಡಿ.ಕೆ.ಶಿವಕುಮಾರ್ ಆಟ ಈಗ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿಲ್ಲ. ಅವರಿಗೆ ಅಡ್ಡಗಾಲಾಗಿ ಅವರದೇ ಸಮುದಾಯದ ನಾಯಕ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಇದ್ದಾರೆ.

ರಾಮನಗರ ಯೋಜನೆಗಳಿಗೆ ಬ್ರೇಕ್
ಈ ಎಲ್ಲ ಅಂಶಗಳನ್ನು ನೋಡಿದಾಗ ಡಿ.ಕೆ.ಶಿವಕುಮಾರ್ ಜೊತೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಟ್ಟಿಹಾಕುವುದು ಯಡಿಯೂರಪ್ಪ ಅವರ ಉದ್ದೇಶವಾಗಿದೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುತ್ತಿರುವುದು ಕಂಡುಬರುತ್ತಿರುವ ಸಂಗತಿ.
ಕುಮಾರಸ್ವಾಮಿ ಅವರ ಕನಸಿನ ಯೋಜನೆಗಳಿಗೂ ಬ್ರೇಕ್ ನೀಡಲಾಗಿದೆ. ಚಿತ್ರನಗರಿ, ರಾಜೀವ್ ಗಾಂಧಿ ವಿವಿ, ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಯೋಜನೆಗಳನ್ನು ತಾವು ಮುಖ್ಯಮಂತ್ರಿಗಳಾಗಿದ್ದಾಗ ರಾಮನಗರಕ್ಕೆ ನೀಡಿದ್ದರು.

ಬಿಜೆಪಿ ಸರಕಾರದಲ್ಲಿ ನಡೆಯದ ಡಿಕೆಶಿ ಆಟ
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹೆಚ್ಚು ಪ್ರಾಬಲ್ಯ ಹೊಂದಿದೆ. ಈಗಾಗಲೇ ಮಂಡ್ಯದಲ್ಲಿ ಖಾತೆ ತೆಗೆದಿರುವ ಬಿಜೆಪಿ ರಾಮನಗರಕ್ಕೂ ಪ್ರವೇಶ ಮಾಡಲು ತುದಿ ಗಾಲಲ್ಲಿ ನಿಂತಿದೆ. ಕುಮಾರಸ್ವಾಮಿಗೆ ಟಾಂಗ್ ಕೊಡಲೆಂದೇ ರಾಮನಗರಕ್ಕೆ ನೀಡಿರುವ ಯೋಜನೆಗಳನ್ನು ಒಂದೊಂದಾಗಿ ಹಿಂಪಡೆದು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸುವುದಕ್ಕೂ ಮುನ್ನ ಗೌಡರ ಕುಟುಂಬ ಮತ್ತು ಶಿವಕುಮಾರ್ ಅವರು ಬದ್ಧ ವೈರಿಗಳಾಗಿದ್ದರು. ಆದರೆ ಮೈತ್ರಿ ಸರ್ಕಾರ ರಚನೆಯಾದ ನಂತರ ಆಪ್ತವಾಗಿಬಿಟ್ಟಿದ್ದರು. ಇದು ಬಿಜೆಪಿಗೆ ಸಹಿಸಲು ಆಗಲಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಯಡಿಯೂರಪ್ಪನವರ ಜೊತೆ ಸರಾಗವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್ ಗೂ ಈಗ ಕೈಕಟ್ಟಿ ಹಾಕಿದಂತಿದೆ.

ಆಗ ಕೊಟ್ಟರು, ಈಗ ಕಸಿದುಕೊಂಡರು
ಮೆಡಿಕಲ್ ಕಾಲೇಜು ಸ್ಥಳಾಂತರಗೊಳ್ಳುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಅವರು ಸಿಡಿದು ನಿಂತಿದ್ದಾರೆ. ಸರ್ಕಾರದ ವಿರುದ್ದ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಮೈತ್ರಿ ಸರ್ಕಾರ ಮುರಿದು ಬಿದ್ದು ನಾಲ್ಕು ತಿಂಗಳು ಕಳೆದರೂ ರಾಮನಗರದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ.
ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕನಕಪುರ ಎಂ.ಜಿ ರಸ್ತೆ ಅಭಿವೃದ್ದಿಪೈಪ್ ಲೈನ್ ಗಳಲ್ಲಿ ಪಾರ್ಕ್ ಗಳ ನಿರ್ಮಾಣ, ಸಾತನೂರಿಗೆ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಕೆಎಚ್ ಬಿಯಿಂದ 2 ಸಾವಿರ ಉಚಿತ ನಿವೇಶನ ಮಂಜೂರಾಗಿದ್ದ ಯೋಜನೆಗಳು.

ಆರೋಗ್ಯ ವಿವಿ ಶ್ರೀರಾಮುಲು ಕ್ಷೇತ್ರಕ್ಕೆ ಸ್ಥಳಾಂತರ
ಈ ಬಾರಿ ಬಿಜೆಪಿ ಸರ್ಕಾರವಿದ್ದಾಗ ಬ್ರೇಕ್ ನೀಡಲಾದ ಯೋಜನೆಗಳೆಂದರೆ, ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು, ರಾಮನಗರದಲ್ಲಿ ಚಿತ್ರನಗರಿ, ಆರೋಗ್ಯ ವಿವಿ, ಅರ್ಕಾವತಿ ಶುದ್ದೀಕರಣಕ್ಕೆ ಮಂಜೂರಾದ ಹಣ, ರಾಮನಗರಕ್ಕೆ ನೀರು ಪೂರೈಸುವ ಯೋಜನೆ, ಬಿಡದಿಗೆ ನೀರು ಪೂರೈಸುವ ನಲ್ಲಿಗುಡ್ಡೆ ಯೋಜನೆಗಳು ಕೈ ತಪ್ಪಿ ಹೋಗಿವೆ.
ಈ ಮೂಲಕ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಮನಗರದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಬಲವನ್ನು ಕುಗ್ಗಿಸುವುದು ಮತ್ತು ರಾಮನಗರದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸುವುದಾಗಿದೆ.












Click it and Unblock the Notifications