ನಿಖಿಲ್ ಕುಮಾರಸ್ವಾಮಿ ಇನ್ನೂ ಹುಡುಗ, ನಾನ್ಯಾಕೆ ಪ್ರತಿಕ್ರಿಯೆ ನೀಡಲಿ: ಡಿಕೆಶಿ
ರಾಮನಗರ, ಮಾರ್ಚ್ 26: "ನಿಖಿಲ್ ಕುಮಾರಸ್ವಾಮಿ ಇನ್ನೂ ಹುಡುಗ, ಅವರ ಮಾತಿಗೆಲ್ಲಾ ಪ್ರತಿಕ್ರಿಯೆ ನೀಡುವುದಕ್ಕೆ ಆಗುತ್ತಾ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ರಾಮನಗರ ಜಿಲ್ಲಾ ವ್ಯಾಪ್ತಿಯ ಮರಳವಾಡಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, "ನಿಖಿಲ್ ಇನ್ನೂ ಹುಡುಗ, ಅವರಿಗೆ ಆಲ್ ದಿ ಬೆಸ್ಟ್"ಎಂದು ಡಿಕೆಶಿ ಹೇಳಿದರು.
"ಹುಡುಗರು ಮಾತನಾಡುತ್ತಾರೆ ಅಂತ ನಾನು ತಲೆಕೆಡಿಸಿಕೊಳ್ಳಲು ಆಗುವುದಿಲ್ಲ. ನಾನು ರಾಮನಗರ ಜಿಲ್ಲೆಗೆ ಏನು ಮಾಡಿದ್ದೇನೆ ಎನ್ನುವುದು ಜನರಿಗೆ ತಿಳಿದಿದೆ. ಕಿವಿಯಲ್ಲಿ ಕೇಳುವುದು ಸುಳ್ಳು, ಕಣ್ಣಲ್ಲಿ ನೋಡುವುದು ಮಾತ್ರ ಸತ್ಯ" ಎಂದು ಡಿಕೆಶಿ ಹೇಳಿದರು.

"ನಾನು ಅಭಿವೃದ್ದಿ ಕೆಲಸ ಮಾಡಿದ್ದೇನೋ, ಇಲ್ಲವೋ ಅದನ್ನು ಆ ಜಿಲ್ಲೆಯ ಜನತೆ ಹೇಳುತ್ತಾರೆ. ಪಾಪ, ನಾನ್ಯಾಕೆ ಹುಡುಗರ (ನಿಖಿಲ್) ಬಗ್ಗೆ ಮಾತನಾಡಲಿ, ಆ ವಿಷ್ ಹಿಮ್ ಆಲ್ ದಿ ಬೆಸ್ಟ್"ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
"ಭಾನುವಾರ ಸಾಯಂಕಾಲ ಬೆಳಗಾವಿಗೆ ತಲುಪುತ್ತೇನೆ. ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ, ನಾನು ಮತ್ತು ಸಿದ್ದರಾಮಯ್ಯನವರು ಅಲ್ಲಿ ಹಾಜರಿರುತ್ತೇವೆ"ಎಂದು ಡಿಕೆಶಿ ಈ ಸಂದರ್ಭದಲ್ಲಿ ಹೇಳಿದರು.
"ಎಂತೆಂತಹ ಪ್ರಚೋದನಾಕಾರಿ ಹೇಳಿಕೆಯನ್ನು/ಭಾಷಣಗಳನ್ನು ಬಿಜೆಪಿ ನಾಯಕರು ನೀಡಿದ್ದಾರೆ. ಆಗ ಇಲ್ಲದ ನ್ಯಾಯ, ಈಗ ಯಾಕೆ. ಹೋರಾಟಗಾರರನ್ನು ಹತ್ತಿಕ್ಕುವ ಕೆಲಸಕ್ಕೆ ಬಿಜೆಪಿ ಸರಕಾರ ಮುಂದಾಗಿದೆ. ಟಿಕಾಯತ್ ಮೇಲೆ ಹಾಕಲಾಗಿರುವ FIR ಅನ್ನು ರದ್ದು ಪಡಿಸಬೇಕು"ಎಂದು ಡಿಕೆಶಿ ಅಭಿಪ್ರಾಯ ಪಟ್ಟರು.











Click it and Unblock the Notifications