ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪುಕೋಟೆ ಮೇಲೆ ಭಾಷಣ ಮಾಡುವ ಪ್ರಧಾನಿಗೆ ಕರ್ನಾಟಕದ 40% ಭ್ರಷ್ಟಾಚಾರ ಕಾಣಿಸುತ್ತಿಲ್ಲವೇ?: ಎಚ್‌ಡಿಕೆ

By ಚನ್ನಪಟ್ಟಣ ಪ್ರತಿನಿಧಿ
|
Google Oneindia Kannada News

ಚನ್ನಪಟ್ಟಣ, ಆಗಸ್ಟ್‌, 25: ಗುತ್ತಿಗೆದಾರರ ಸಂಘ ಸಚಿವ ಮುನಿರತ್ನ ಮೇಲೆ ಕಮಿಷನ್ ಆರೋಪ ಮಾಡಿರುವುದು ಹೊಸದೇನಲ್ಲ. ಇಡೀ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

"ಭ್ರಷ್ಟಾಚಾರವನ್ನು ಸಂಪೂರ್ಣ ನಿರ್ಮೂಲನೆ ಮಾಡುತ್ತೇನೆ ಎಂದು ಪ್ರಧಾನಿಗಳು ಕೆಂಪುಕೋಟೆ ಮೇಲೆ ಭಾಷಣ ಮಾಡುತ್ತಾರೆ. ರಾಜ್ಯದಲ್ಲಿ ಪ್ರತಿನಿತ್ಯ ಬೀದಿ ಬೀದಿಗಳಲ್ಲಿ 40 ಪರ್ಸೆಂಟ್‌ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದ 40% ಕಮಿಷನ್ ಭ್ರಷ್ಟಾಚಾರ ಪ್ರಧಾನಿಗಳ ಗಮನಕ್ಕೆ ಹೋಗಿಲ್ವಾ? ಅವರ ಸರ್ಕಾರದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪ್ರಧಾನಿಗಳಿಗೆ ಯಾಕೆ ಸಾಧ್ಯವಾಗಿಲ್ಲ?" ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

 ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಹೆಚ್‌ಡಿಕೆ ಕಿಡಿ

ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಹೆಚ್‌ಡಿಕೆ ಕಿಡಿ

"ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನರ ಬಗ್ಗೆ ಚಿಂತೆ ಇಲ್ಲ. ರಾಜ್ಯದಲ್ಲಿ ಮಳೆ ಬಂದು ರೈತರ ಬೆಳೆಗಳು ನಾಶವಾಗಿವೆ. ಹಲವರ ಮನೆಗಳು ಬಿದ್ದಿವೆ. ಬೆಳೆಗಳನ್ನು ಕಳೆದುಕೊಂಡ ರೈತರು ಬೀದಿಗೆ ಬಂದಿದ್ದಾರೆ. ಅವರ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳು ಚಿಂತೆ ಮಾಡುತ್ತಿಲ್ಲ. ನಿರುದ್ಯೋಗದ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಎರಡು ರಾಷ್ಟ್ರೀಯ ಪಕ್ಷಗಳು ಮಾಂಸದ ಬಗ್ಗೆ ಚರ್ಚೆ ಮಾಡುತ್ತಾ, ರಾಜಕೀಯ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ," ಎಂದು ರಾಷ್ಟ್ರೀಯ ಪಕ್ಷಗಳ ವರ್ತನೆಗಳನ್ನು ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

 ಸಾವರ್ಕರ್ ಯಾತ್ರೆಯಿಂದ ಬಡವರಿಗೆ ಏನು ಲಾಭ?

ಸಾವರ್ಕರ್ ಯಾತ್ರೆಯಿಂದ ಬಡವರಿಗೆ ಏನು ಲಾಭ?

ನಾನು ಚುನಾವಣೆಗೆ ಮೊದಲು ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದೆ. ಕೊಟ್ಟ ಮಾತಿನಂತೆ ನಡೆದುಕೊಂಡು ಸಾಲ ಮನ್ನಾ ಮಾಡಿದ್ದೇನೆ. ಸುಮಾರು 25 ಸಾವಿರ ಕೋಟಿ ರೂಪಾಯಿ ಹಣವನ್ನು ರೈತರ ಸಾಲ ಮನ್ನಾ ಮಾಡಲು ನೀಡಿದ್ದೆ. ಇನ್ನೂ ಸ್ವಲ್ಪ ದಿನ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದರೆ ಜನರಿಗೆ ಅನುಕೂಲವಾಗುತ್ತಿತ್ತು. ರೈತರ ಸಾಲ ಮನ್ನಾಕ್ಕಾಗಿ ನೀಡಿದ ಹಣವನ್ನು ಇದೀಗ ಸರ್ಕಾರದವರು ಡೈವರ್ಟ್ ಮಾಡಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

"ಯಾರೋ ಸಾವರ್ಕರ್ ಫೋಟೊ ಇಟ್ಟುಕೊಂಡು ಹೋದರೆ ಬಡವರ ಹೊಟ್ಟೆ ತುಂಬುತ್ತಾ?," ರಥ ಯಾತ್ರೆ ಮಾಡಬೇಕಿರುವುದು ಈ ರಾಜ್ಯದ ಸಮಸ್ಯೆಗಳ ಬಗ್ಗೆ," ಎಂದು ಹೇಳುತ್ತಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಾರಂಭಿಸಿರುವ ಸಾವರ್ಕರ್ ರಥ ಯಾತ್ರೆಯನ್ನು ಟೀಕಿಸಿದರು. ನಾಡಿನಲ್ಲಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೀರಾವರಿ ವಿಷಯದಲ್ಲಿ ಏನು ಕೆಲಸಗಳು ನಡೆದಿವೆ. ಇಂತಹ ಜ್ವಲಂತ ಸಮಸ್ಯೆಗಳ ವಿಷಯವನ್ನು ಇಟ್ಟುಕೊಂಡು ರಥಯಾತ್ರೆ ಮಾಡಿದ್ದರೆ ನಾನೇ ಅವರನ್ನು ಅಭಿನಂದಿಸುತ್ತಿದ್ದೆ ಎಂದು ಹೆಸರು ಹೇಳದೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಕುಟುಕಿದರು.

"ಜನರ ಸಮಸ್ಯೆಗಳನ್ನು ಆಲಿಸುವೆ"

ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಕೊಡಗಿನಲ್ಲಿ ಸಾರ್ವಜನಾಂಗದ ಶಾಂತಿಯ ತೋಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ಮಾಡಿದ್ದೇನೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷದವರು ಅಶಾಂತಿ ವಾತಾವರಣವನ್ನು ಉಂಟುಮಾಡುತ್ತಿದ್ದಾರೆ‌. ಕೊಡಗಿಗೆ ತೆರಳಿ‌ ಅಲ್ಲಿನ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಎರಡು ರಾಷ್ಟ್ರೀಯ ಪಕ್ಷಗಳ ಜಟಾಪಟಿಯಿಂದ ಮಡಿಕೇರಿಯಲ್ಲಿ ಸೆಕ್ಷನ್ 144 ಹಾಕಿದ್ದಾರೆ. ಮುಂಜಾತ್ರೆಯಾಗಿ 4 ದಿನ ಸೆಕ್ಷನ್ 144 ಜಾರಿ ಮಾಡಿರುವುದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಬಡ ವ್ಯಾಪಾರಿಗಳು, ದಿನಗೂಲಿ ಮಾಡುವವರ ಪರಿಸ್ಥಿತಿಯ ಬಗ್ಗೆಯೂ ಹರಿತುಕೊಳ್ಳಬೇಕು. ಇವರು ಮತ ಪಡೆಯಲು ಇಂತಹ ಚಿಲ್ಲರೆ ವಿಷಯ ಇಟ್ಟುಕೊಂಡು ಬೀದಿಗೆ ಬಂದಿದ್ದಾರೆ. ಮೊಟ್ಟೆ ಕಥೆ ಇಟ್ಟುಕೊಂಡು ಹೋಗದಿದ್ದರೆ ಮಡಿಕೇರಿಯಲ್ಲಿ ಸೆಕ್ಷನ್ 144 ಜಾರಿ ಆಗುತ್ತಿರಲಿಲ್ಲ. ಕುವೆಂಪು ಅವರ ಆಶಯದಂತೆ ಪ್ರತಿ ಕುಟುಂಬ ನೆಮ್ಮದಿಯಿಂದ ಬದುಕಬೇಕು. ಕೊಡಗು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಶಾಂತಿ ನೆಲಸಬೇಕು ಎಂಬುದು ನಮ್ಮ ಪಕ್ಷದ ಉದ್ದೇಶ ಎಂದು ತಿಳಿಸಿದರು.

 ಜೆಡಿಎಸ್‌ ಪಕ್ಷದ ಬಗ್ಗೆ ಹೆಚ್‌.ಡಿ.ಕೆ ಭವಿಷ್ಯ?

ಜೆಡಿಎಸ್‌ ಪಕ್ಷದ ಬಗ್ಗೆ ಹೆಚ್‌.ಡಿ.ಕೆ ಭವಿಷ್ಯ?

ಜೆಡಿಎಸ್​ ಪಕ್ಷ ಹಳ್ಳ ಹಿಡಿದಿದೆ ಎಂದು ಹೇಳುತ್ತಿರುವ ಎರಡು ರಾಷ್ಟ್ರೀಯ ಪಕ್ಷಗಳನ್ನು 2023ರ ಚುನಾವಣೆಯಲ್ಲಿ ಜನರು ಮನೆಗೆ ಕಳುಹಿಸುತ್ತಾರೆ. ರಾಜ್ಯದ ಆರುವರೆ ಕೋಟಿ ಜನರ ಆಶೀರ್ವಾದದಿಂದ ಜೆಡಿಎಸ್​ ಅಧಿಕಾರಕ್ಕೆ ಬರಲಿದೆ. ‌‌‌ಎರಡು ರಾಷ್ಟ್ರೀಯ ಪಕ್ಷಗಳ ನಡುವಳಿಕೆ ಗಮನಿಸಿರುವ ಜನರು ಅವರನ್ನು ಮನೆಗೆ ಕಳುಹಿಸುವ ತೀರ್ಮಾನ ಮಾಡಿದ್ದಾರೆ. ಪ್ರಚಾರ ಸಿಗದೆ ಇರಬಹುದು, ಆದರೆ ಜನ ಶಕ್ತಿ ಏನು ಅಂತ ನನಗೆ ಗೊತ್ತಿದೆ. ಪ್ರತಿ ತಾಲೂಕಿನಲ್ಲೂ ಕಾರ್ಯಕರ್ತರು ಜೆಡಿಎಸ್​ ಪಕ್ಷವನ್ನು ಗಟ್ಟಿಯಾಗಿ ಕಟ್ಟುತ್ತಿದ್ದಾರೆ. "ಹಳ್ಳಕ್ಕೆ ಬಿದ್ದಿದೆ ಎಂದವರ ಮುಂದೆ ಜೆಡಿಎಸ್ ಮೇಲೆದ್ದು ಬರಲಿದೆ" ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.

English summary
There is discussion about 40 percent corruption in state. HD Kumaraswamy asked in Ramanagara whether has not come to attention of Prime Minister, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X