ವಿದೇಶದಲ್ಲಿ ಜೀವನ ನಡೆಸುವ ಆಸೆಯೇ? ಮಿಸ್ ಮಾಡದೇ ರಾಮನಗರದ ಈ ದೇವಸ್ಥಾನಕ್ಕೆ ಭೇಟಿ ನೀಡಿ
ರಾಮನಗರ, ಫೆಬ್ರವರಿ 06: ಹೊರದೇಶಕ್ಕೆ ಹೋಗಿ ಅಲ್ಲಿ ಏನಾದರೊಂದು ಕೆಲಸ ಗಿಟ್ಟಿಸಿಕೊಂಡು ಜೀವನ ನಡೆಸುವ ಉದ್ದೇಶದಿಂದ ಪಾಸ್ ಪೋರ್ಟ್ ಮಾಡಿಸುವ ಬಹುತೇಕ ಜನರು ತಮ್ಮ ಉದ್ದೇಶಗಳೇ ಈಡೇರಿಲ್ಲ ಎಂದು ಕೊರಗುತ್ತಾರೆ. ಆದರೆ ಅಂತಹವರು ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಸಮೀಪದ ಹನುಮಂತನಗರದ ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಶ್ರೀ ಕೋತಿ ಆಂಜನೇಯಸ್ವಾಮಿ ದೇಗುಲಕ್ಕೆ ಆಗಮಿಸಿ ಪಾಸ್ ಪೋರ್ಟ್‌ಗೆ ಪೂಜೆ ಮಾಡಿಸಿಕೊಂಡು ಹೋದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ.
ವೈಜ್ಞಾನಿಕ ಯುಗದಲ್ಲಿಯೂ ಇಂತಹದೊಂದು ನಂಬಿಕೆಯಿದೆ ಎಂದರೆ ಅಚ್ಚರಿಯಾಗಬಹುದು. ಆದರೆ ಇಂತಹದೊಂದು ಪವಾಡ ಇಲ್ಲಿ ನಡೆದಿರುವುದರಿಂದಲೇ ಭಕ್ತರು ಪಾಸ್ ಪೋರ್ಟ್ ತೆಗೆದುಕೊಂಡು ಬಂದು ಆಂಜನೇಯನ ಸನ್ನಿಧಿಯಲ್ಲಿಟ್ಟು ಪೂಜೆ ಮಾಡಿಸಿಕೊಂಡು ಹೋಗುವುದು ಕಂಡುಬರುತ್ತಿದೆ. ಹೀಗಾಗಿಯೇ ಪಾಸ್ ಪೋರ್ಟ್ ಆಂಜನೇಯನೆಂದೇ ಸಾರ್ವಜನಿಕ ವಲಯದಲ್ಲಿ ಈ ದೇಗುಲ ಹೆಸರುವಾಸಿಯಾಗಿದೆ.

ಸಾಮಾನ್ಯವಾಗಿ ಒಂದೊಂದು ದೇಗುಲವೂ ಒಂದೊಂದು ವಿಚಾರಕ್ಕೆ ಸಂಬಂಧಿಸಿದಂತೆ ಶಕ್ತಿ ಮತ್ತು ಪವಾಡದಿಂದ ಭಕ್ತರನ್ನು ಸೆಳೆಯುತ್ತವೆ. ಆದರೆ ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಸಮೀಪದ ಹನುಮಂತನಗರದ ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಶ್ರೀ ಕೋತಿ ಆಂಜನೇಯಸ್ವಾಮಿ ದೇವಾಲಯ ಮಾತ್ರ ತನ್ನದೇ ಆದ ಮಹಿಮೆಯಿಂದ ಗಮನಸೆಳೆಯುತ್ತದೆ.
ಕೋತಿ ಆಂಜನೇಯಸ್ವಾಮಿ ನೆಲೆನಿಂತಿದ್ದು ಹೇಗೆ?
ಕೋತಿ ಆಂಜನೇಯಸ್ವಾಮಿ ದೇಗುಲ ಮತ್ತು ಇಲ್ಲಿ ಮಹಿಮೆ ಬಗ್ಗೆ ಭಕ್ತ ವಲಯದಲ್ಲಿ ಗಾಢ ನಂಬಿಕೆಯಿದೆ. ಭಕ್ತರೇ ಹೇಳುವಂತೆ ಪಾಸ್‌ಪೋರ್ಟ್ ಪ್ರತಿಯನ್ನ್ಲು ಇಲ್ಲಿನ ಆಂಜನೇಯ ಮೂರ್ತಿಯ ಪಾದದ ಸಮೀಪ ಇಟ್ಟು ಪೂಜಿಸಿದರೆ ಕೈಹಾಕಿದ ಕೆಲಸವಾಗುತ್ತದೆ. ಪಾಸ್‌ಪೋರ್ಟ್ ಪಡೆದ ಉದ್ದೇಶವೂ ಈಡೇರುತ್ತದೆಯಂತೆ. ಪಾರ್ಸ್‌ಪೋರ್ಟ್‌ನ್ನು ಇಟ್ಟು ಪೂಜಿಸಿದವರ ಪೈಕಿ ಶೇ.90 ರಷ್ಟು ಮಂದಿ ವಿದೇಶಗಳಲ್ಲಿ ಕೆಲಸ ದೊರೆತು ಉತ್ತಮ ಜೀವನವನ್ನು ನಡೆಸುತ್ತಿದ್ದಾರಂತೆ.

ಇನ್ನು ಕೋತಿ ಆಂಜನೇಯ ಇಲ್ಲಿ ಹೇಗೆ ನೆಲೆ ನಿಂತ? ಅವನಿಗೆ ದೇಗುಲ ನಿರ್ಮಾಣವಾಗಿದ್ದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ರೋಚಕ ಕಥೆಯೊಂದು ನಮ್ಮ ಮುಂದೆ ಬಂದು ನಿಲ್ಲುತ್ತದೆ. ಅದು 1955ರ ದಿನಗಳು ಇವತ್ತು ದೇಗುಲ ನಿರ್ಮಾಣವಾದ ಸ್ಥಳದ ಸುತ್ತಮುತ್ತ ಜಮೀನುಗಳಿದ್ದವು.
ರೈತರು ಇಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೀಗಿರುವಾಗ ಈ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದ್ದ ಕೋತಿಗಳು ರೈತರ ಜಮೀನಿಗೆ ನುಗ್ಗಿ ಬಾಳೆ ಸೇರಿದಂತೆ ಇತರೆ ಬೆಳೆಗಳನ್ನೆಲ್ಲ ತಿಂದು ಹಾಳು ಮಾಡುತ್ತಿದ್ದವು. ಇದರಿಂದ ರೈತರು ರೋಸಿ ಹೋಗಿದ್ದರು. ಬೇರೆ ದಾರಿ ಕಾಣದ ಕೆಲವರು ಕೋತಿಗಳ ಹಿಂಡು ಮೇಲೆ ದಾಳಿ ಮಾಡಿ ಅವುಗಳನ್ನು ಸಾಯಿಸಿ ಬಿಟ್ಟಿದ್ದರು.

ಪವಾಡ ನಡೆದ ಸ್ಥಳದಲ್ಲಿ ದೇಗುಲ ನಿರ್ಮಾಣ
ಇಂತಹ ಸಂದರ್ಭದಲ್ಲೊಂದು ಘಟನೆ ನಡೆದಿತ್ತು. ಅದು ಏನೆಂದರೆ ಇದೇ ಮಾರ್ಗವಾಗಿ ಮಂಡ್ಯದ ಸಂಪತ್ ಎಂಬುವರಿಗೆ ಸೇರಿದ ಕಾವೇರಿ ಲಾರಿ ಟ್ರಾನ್ಸ್ ಪೋರ್ಟ್‌ನ ಲಾರಿಯೊಂದು ಬಂದಿತ್ತು. ಅಲ್ಲದೆ ಅಲ್ಲಿ ತನಕ ಚೆನ್ನಾಗಿಯೇ ಬಂದಿದ್ದ ಲಾರಿ ಕೋತಿಗಳ ಮಾರಣ ಹೋಮ ನಡೆದ ಸ್ಥಳದಲ್ಲಿ ಕೆಟ್ಟು ನಿಂತಿತು. ಹೀಗಾಗಿ ಲಾರಿಯಿಂದ ಕೆಳಗಿಳಿದು ಏನಾಗಿದೆ ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಯಾವುದೇ ದೋಷಗಳು ಕಂಡು ಬರಲಿಲ್ಲ. ಆದರೆ ಲಾರಿ ಮಾತ್ರ ಸ್ಟಾರ್ಟ್ ಆಗಲೇ ಇಲ್ಲ. ಇದರಿಂದ ಮಾಲೀಕ ಸಂಪತ್ ಅವರು ಚಿಂತಾಕ್ರಾಂತರಾಗಿ ಲಾರಿಯಲ್ಲೇ ಕುಳಿತುಕೊಂಡಿದ್ದರು.
ಇದೇ ಸಂದರ್ಭದಲ್ಲಿ ಅವರ ಬಳಿಗೆ ಬಂದ ಕೋತಿ ಮರಿಯೊಂದು ಅವರ ಪಂಚೆಯನ್ನು ಹಿಡಿದು ಕೋತಿಗಳ ಮಾರಣ ಹೋಮ ನಡೆದ ಸ್ಥಳಕ್ಕೆ ಎಳೆದುಕೊಂಡು ಹೋಯಿತು. ಅಲ್ಲಿ ಸತ್ತು ಬಿದ್ದಿದ್ದ ಕೋತಿಗಳನ್ನು ನೋಡಿದ ಸಂಪತ್ ಅವರ ಮನಕರಗಿತು. ಕೂಡಲೇ ಅವರು ಇತರೆ ತಮ್ಮ ಸ್ನೇಹಿತರು ಮತ್ತು ಲಾರಿ ಮಾಲೀಕರಾದ ಡಾ.ವೆಂಕಟ್ಟಪ್ಪ, ಗೋವಿಂದರಾಜು ನಾಯ್ಡು, ಕೋದಂಡರಾಮ ನಾಯ್ದು, ಎಂ. ನಾರಾಯಣಪ್ಪ ಅವರನ್ನು ಕರೆಸಿಕೊಂಡು ಎಲ್ಲರೂ ಸೇರಿ ಕೋತಿಗಳ ಅಂತ್ಯ ಸಂಸ್ಕಾರ ವಿಧಿವಿಧಾನಗಳಂತೆ ನೆರವೇರಿಸಿ ಅಲ್ಲೊಂದು ಕಲ್ಲು ನೆಟ್ಟರು. ಆ ನಂತರ ನಿಂತಿದ್ದ ಲಾರಿ ಸ್ಟಾರ್ಟ್ ಆಯಿತಂತೆ.

ಕೋತಿ ಆಂಜನೇಯನಾಗಿ ಪ್ರಸಿದ್ಧಿ
ಇಂತಹದೊಂದು ಪವಾಡ ನಡೆದ ಸ್ಥಳದಲ್ಲಿ ಇಲ್ಲೊಂದು ಏನೋ ಒಂದು ಮಹಿಮೆಯಿದ್ದು ಈ ಸ್ಥಳದಲ್ಲಿ ಕೋತಿ ಮಾರಣ ಹೋಮ ಮಾಡಿದ ಪಾಪ ಕಳೆಯಲೆಂದು ಇಲ್ಲೊಂದು ಪುಟ್ಟ ಗುಡಿಸಲು ನಿರ್ಮಿಸಿ ಆಂಜನೇಯನನ್ನು ಪೂಜಿಸಲು ಆರಂಭಿಸಿದರು. ಜನ ಇಲ್ಲಿಗೆ ಆಗಮಿಸಿ ಪೂಜೆ ಮಾಡಿಸಿಕೊಂಡು ಹೋಗಲಾರಂಭಿಸಿದರು. ಕ್ರಮೇಣ ಪುಟ್ಟ ಗುಡಿಸಲಿನಿಂದ ಆರಂಭವಾದ ದೇಗುಲಕ್ಕೆ ಕೋತಿ ಆಂಜನೇಯ ಸ್ವಾಮಿ ದೇವಾಲಯ ಎಂದೇ ಪ್ರಸಿದ್ಧಿ ಪಡೆಯಿತು.
ವರ್ಷದಿಂದ ವರ್ಷಕ್ಕೆ ದೇಗುಲ ಅಭಿವೃದ್ಧಿಯಾಗುತ್ತಾ ಹೋಯಿತು. ಇದೇ ಹೆದ್ದಾರಿಯಲ್ಲಿ ಚಲಿಸುವ ಬಹುತೇಕ ಲಾರಿ ಸೇರಿದಂತೆ ಖಾಸಗಿ ವಾಹನಗಳು ಇಲ್ಲಿ ನಿಲ್ಲಿಸಿ ದೇವಾಲಯಕ್ಕೆ ಭೇಟಿ ಕಾಣಿಕೆ ಹಾಕಿ ಆಂಜನೇಯಸ್ವಾಮಿ ಮೂರ್ತಿಯ ದರ್ಶನ ಪಡೆದು ಮುಂದೆ ಹೋಗುವುದು ಅಭ್ಯಾಸವಾಯಿತು. ಜನ ಹೊಸ ವಾಹನ ಖರೀದಿಸಿದಾಗ ಇಲ್ಲಿ ವಾಹನದ ಕೀಯನ್ನು ಆಂಜನೇಯನ ಮೂರ್ತಿ ಬಳಿ ಇಟ್ಟು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದರು. ಹಾಗೆಯೇ ಪಾಸ್ ಪೋರ್ಟ್ ಇಟ್ಟು ಪೂಜೆ ಮಾಡಿಸಿಕೊಂಡು ಹೋದವರಿಗೆ ಅದರಿಂದ ಒಳ್ಳೆದಾಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅದು ಜನ ವಲಯದಲ್ಲಿ ಹರಡಿ ಭಕ್ತರು ಇತ್ತ ಬರಲಾರಂಭಿಸಿದರು.
ಪ್ರವಾಸಕ್ಕೂ ಮುನ್ನ ಪ್ರಾರ್ಥನೆ ಸಲ್ಲಿಕೆ
ಇಷ್ಟೇ ಅಲ್ಲದೆ ಪ್ರವಾಸ ಹೋಗುವ ಸಂದರ್ಭದಲ್ಲಿ ಇಲ್ಲಿ ವಾಹನಗಳನ್ನು ಪೂಜಿಸಿ ಮುನ್ನಡೆದರೆ ಯಾವುದೇ ಅಪಾಯವಿಲ್ಲದೆ ಹಿಂತಿರುಗಬಹುದು ಎಂಬ ನಂಬಿಕೆಯೂ ಜನರಲ್ಲಿದೆ. ಇವತ್ತು ಕೋತಿ ಆಂಜನೇಯ ದೇಗುಲ ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯ ಹೊರ ರಾಜ್ಯಗಳಲ್ಲಿಯೂ ತನ್ನ ಖ್ಯಾತಿಯನ್ನು ಇಮ್ಮಡಿಸಿದ್ದು, ಪಾಸ್ ಪೋರ್ಟ್ ಪಡೆದವರು ಅದನ್ನು ಹಿಡಿದುಕೊಂಡು ದೇಗುಲದತ್ತ ಆಗಮಿಸಿ ಪೂಜೆ ಮಾಡಿಸಿಕೊಂಡು ಹೋಗುವುದು ಮಾಮೂಲಿಯಾಗಿದೆ.












Click it and Unblock the Notifications