ಮಾಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಮೂವರ ಸ್ಥಿತಿ ಗಂಭೀರ
ರಾಮನಗರ, ನವೆಂಬರ್ 17: ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಗಡಿಯ ರಾಜೀವ್ ಗಾಂಧಿನಗರದಲ್ಲಿ ನಡೆದಿದೆ.
ಪಟ್ಟಣದ ರಾಜೀವ್ ಗಾಂಧಿ ನಗರದ ನಿವಾಸಿ ದೊರೆ ಮತ್ತು ಅವರ ಪತ್ನಿ ಜಗನ ಮಂಗಳವಾರ ತರಕಾರಿ ವ್ಯಾಪಾರ ಮಾಡಲು ತೆರಳಿದ್ದಾರೆ. ಮಧ್ಯಾಹ್ನ ಇವರ ಮಗ ಪಕ್ಕದ ಮನೆಯ ಇಬ್ಬರೊಂದಿಗೆ ಸೇರಿ ಅಡುಗೆ ಮಾಡಲು ಗ್ಯಾಸ್ ಆನ್ ಮಾಡಿ ಬೆಂಕಿಪೊಟ್ಟಣ ಹುಡುಕುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಕಿಶೋರ್ (14), ಚಂದ್ರು (14), ದರ್ಶನ್ (17) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಫೋಟದಿಂದ ಮನೆಯ ಗೋಡೆ, ಶೀಟ್ ಸಂಪೂರ್ಣ ಜಖಂಗೊಂಡಿದ್ದು ಮನೆಯಲ್ಲಿದ್ದ ಫ್ರಿಜ್, ಫ್ಯಾನ್, ಪಾತ್ರೆ ಸಾಮಗ್ರಿಗಳೆಲ್ಲಾ ಸುಟ್ಟು ಕರಕಲಾಗಿವೆ. ಸ್ಥಳೀಯರು ಇವರನ್ನು ತಕ್ಷಣವೇ ಪಟ್ಟಣದ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.












Click it and Unblock the Notifications