ರಾಮನಗರದಲ್ಲಿ ಕಾರು ಕೆರೆಗೆ ಉರುಳಿ ಮೂವರ ದುರ್ಮರಣ
ರಾಮನಗರ, ಅಕ್ಟೋಬರ್ 19: ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ಕೆರೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ಯುವಕ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನೋರ್ವ ಬಾಲಕ ಪ್ರಾಣಪಾಯದಿಂದ ಪಾರಾಗಿದ್ದು, ರಾಮನಗರ ತಾಲೂಕಿನ ಕಂಚುಗಾರನಹಳ್ಳ ಸಮೀಪದ ಮನಗಾನಹಳ್ಳಿ ಬಳಿ ಈ ಘಟನೆ ನಡೆದಿದೆ.
ಬುಧವಾರ ರಾತ್ರಿ 8.30ಕ್ಕೆ ಈ ಘಟನೆ ನಡೆದಿದೆ. ಚಾಲಕ ಚಿದಾನಂದ್ ಮತ್ತು ಆತನ ಅಕ್ಕನ ಮಕ್ಕಳಾದ ಶಶಾಂಕ್ (6) ಮತ್ತು ಇಂಪನ (4) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಕಾರಿನಲ್ಲಿದ್ದ ಮತ್ತೋರ್ವ ಬಾಲಕ ದಿಲೀಪ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ದೀಪಾವಳಿ ಹಬ್ಬಕ್ಕೆಂದು ಚಿದಾನಂದ್ ತನ್ನ ಅಕ್ಕನ ಮಕ್ಕಳಾದ ಇಂಪನ ದಿಲೀಪ್ ಹಾಗೂ ಶಶಾಂಕ್ ನನ್ನು ಸಿದ್ದಯ್ಯನದೊಡ್ಡಿಗೆ ಸ್ವಿಫ್ಟ್ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಮನಗಾನಹಳ್ಳಿ ಸಮೀಪ ಕಾರು ಚಲಾಯಿಸುವ ವೇಳೆ ನಿಯಂತ್ರಣ ಕಳೆದುಕೊಂಡು ಕಾರು ಕೆರೆಗೆ ನುಗ್ಗಿದೆ.
ಈ ವೇಳೆ ಗ್ರಾಮಸ್ಥರು ಕೆರೆಗೆ ಧುಮುಕಿ ಕಾರಿನಲ್ಲಿದ್ದವರನ್ನು ರಕ್ಷಿಸುವ ಯತ್ನ ನಡೆಸಿದ್ದಾರೆ. ಅಷ್ಟರಲ್ಲಾಗಲೇ ನೀರಿನಲ್ಲಿ ಮುಳುಗಿ ಮೂರು ಜನ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ದಿಲೀಪ್ (12) ರಕ್ಷಿಸಿದ್ದಾರೆ.

ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೃತ ದೇಹಗಳನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ.












Click it and Unblock the Notifications