ರಾಮನಗರದಲ್ಲಿ ಈ ಬಾರಿ ಬದಲಾವಣೆಯ ಅಲೆ ಇದೆ: ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ಠಕ್ಕರ್
ರಾಮನಗರ, ಮೇ, 02: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಈಗಾಗಲೇ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ರಾಷ್ಟ್ರ ನಾಯಕರು ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದಾರೆ. ಅದೇ ರೀತಿ ರಾಮನಗರದ ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ ಪರ ಸುಮಲತಾ ಅವರು ಇಂದು ಮತಯಾಚನೆ ಮಾಡಿದರು. ಇದೇ ವೇಳೆ ಅವರು ದಳಪತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರವಾರದ ವೇಳೆ ಮಾತನಾಡಿದ ಅವರು, ರಾಮನಗರ ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ ಪರ ಮತಯಾಚಿಸಲು ಇಲ್ಲಿಗೆ ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಆಗಮನದಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಪಾಸಿಟಿವ್ ವಾತಾವರಣ ಇದೆ. ಇಲ್ಲಿ ಬದಲಾವಣೆಯ ಅಲೆ ಇದ್ದು, ಜನರು ಮೋದಿ ನಾಯಕತ್ವವನ್ನು ಮೆಚ್ಚಿದ್ದಾರೆ ಎಂದರು.

ಇಲ್ಲಿ ಬೇರೆ ಬೇರೆ ಪಕ್ಷಗಳಿಗೆ ಅಧಿಕಾರ ಕೊಟ್ಟು ನೋಡಿದ್ದಾರೆ, ಆದರೆ ಇಲ್ಲಿನ ಸ್ವಾರ್ಥ ರಾಜಕಾರಣ, ಕುಟುಂಬ ರಾಜಕಾರಣದಿಂದ ಜನರು ಬೇಸತ್ತಿದ್ದಾರೆ. ಈ ಬಾರಿ ಬದಲಾವಣೆಗೆ ಮನಸ್ಸು ಮಾಡಿದ್ದಾರೆ. ಆದ್ದರಿಂದ ಬಿಜೆಪಿ ಯುವಕರಿಗೆ, ಸಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಮಾಡುವುದಿಲ್ಲ. ಜನರ ಕಾಳಜಿ ಮಾಡುವ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ ಎಂದು ಬಿಜೆಪಿಯನ್ನು ಸಮರ್ಥಿಸಿಕೊಂಡರು.
ಮಂಡ್ಯದ ರೀತಿ ಇಲ್ಲೂ ಕುತಂತ್ರ ರಾಜಕಾರಣ ಎಂಬ ನಿಖಿಲ್ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುತಂತ್ರ ಮಾಡುವವರೇ ಕುತಂತ್ರದ ಬಗ್ಗೆ ಆರೋಪ ಮಾಡುವುದು ಹಾಸ್ಯಾಸ್ಪದವಾಗಿದೆ. ಇದು ನನಗೆ ಅಶ್ಚರ್ಯ ಆಗುತ್ತಿದೆ. ಕುತಂತ್ರ ಏನಾದರೂ ನಡೆದಿದ್ದರೆ ಅದು ನನ್ನ ವಿರುದ್ಧ. ಆದರೆ ಬೇರೆಯವರ ಮೇಲೆ ಆರೋಪ ಮಾಡುವುದ ಎಷ್ಟು ಸರಿ ಎಂದು ವಾಗ್ದಾಳಿ ನಡೆಸಿದರು.
ಇನ್ನು ತಮ್ಮ ವಿರುದ್ಧ ಕುಮಾರಸ್ವಾಮಿ ಮಾತನಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಇದೇ ಸಂಸ್ಕಾರ ನನ್ನ ಚುನಾವಣೆಯಲ್ಲೂ ತೀರಬೇಕಿತ್ತು. ಈಗ ಎಲ್ಲರಿಗೂ ಗೊತ್ತಾಗಿದೆ. ಮೋಸದ ಮಾತಿಗೆ ಯಾರೂ ಮರುಳಾಗುವುದಿಲ್ಲ. ಈ ಬಾರಿ ಏನೆಲ್ಲಾ ಬದಲಾವಣೆ ಆಗುತ್ತದೆ ಅನ್ನುವುದನ್ನು ನೀವು ನೋಡುತ್ತಿದ್ದೀರಾ.
ಎಲ್ಲರಿಗೂ ಆಶ್ಚರ್ಯ ಆಗುವ ಫಲಿತಾಂಶ ಬರುತ್ತದೆ, ರಾಮನಗರದಲ್ಲೂ ಅಚ್ಚರಿಯ ಫಲಿತಾಂಶ ಬರುತ್ತದೆ ಎಂದು ಬಾಂಬ್ ಸಿಡಿಸಿದರು.
ರಾಮನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ವಿಜಯಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್‌ಗೆ ಬಹಿರಂಗ ಬೆಂಬಲ ನೀಡಿದ್ದಾರೆ. ಈ ರೀತಿ ನಾಲ್ಕು ಕಡೆ ಜೆಡಿಎಸ್ ಅಭ್ಯರ್ಥಿಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ಹೊಂದಾಣಿಕೆ ರಾಜಕೀಯ ಎಲ್ಲಿದೆ ಅನ್ನೋದನ್ನು ನೀವೆ ತಿಳಿದುಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.
ಅದೇ ರೀತಿ ರಾಮನಗರದಲ್ಲೂ ಹೊಂದಾಣಿಕೆ ರಾಜಕೀಯ ಇದೆ. ಜೆಡಿಎಸ್‌ನವರು ಕನಕಪುರದಲ್ಲಿ ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕಲ್ಲ. ಈ ಹಿಂದೆ ಚುನಾವಣೆ ಮುಗಿದ ಮೇಲೆ ಇಬ್ಬರೂ ಸೇರಿ ಮೈತ್ರಿ ಮಾಡ್ಕೊಂಡರು. ಈಗಲೂ ಅದು ನಡೆಯಲ್ಲ ಅಂತಾ ನೀವು ನಂಬುತ್ತೀರಾ? ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಜೊತೆ ವೇದಿಕೆ ಹಂಚಿಕೊಂಡ ರೌಡಿ ಶೀಟರ್
ಇನ್ನು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಚನ್ನಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೇ ಆಗಮಿಸಿದ್ದರು. ಈ ವೇಳೆ ನರೇಂದ್ರ ಮೋದಿ ಅವರ ಜೊತೆ ವೇದಿಕೆಯಲ್ಲಿ ರೌಡಿ ಶೀಟರ್ ಮುದ್ದುಕೃಷ್ಣ ಕಾಣಿಸಿಕೊಂಡಿರುವುದು ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಚನ್ನಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕುಖ್ಯಾತ ರೌಡಿ ಮುದ್ದುಕೃಷ್ಣ ವೇದಿಕೆ ಹಂಚಿಕೊಂಡಿದ್ದಾರೆ. ಅಲ್ಲದೆ ಪಂಚಲೋಹದಿಂದ ತಯಾರಿಸಲಾಗಿದ್ದ ಅಪ್ರಮೇಯ ಅಂಬೆಗಾಲು ಕೃಷ್ಣನ ವಿಗ್ರಹವನ್ನು ರೌಡಿ ಮುದ್ದುಕೃಷ್ಣ ಮೋದಿ ಅವರಿಗೆ ಉಡುಗೊರೆ ನೀಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.












Click it and Unblock the Notifications