ಮತ್ತೊಂದು ಹೊಸ ಅಧ್ಯಾಯ, ಚನ್ನಪಟ್ಟಣ ಉಪ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿ!
ರಾಮನಗರ, ಜೂನ್ 10: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಕೇಂದ್ರದಲ್ಲಿ ರಚನೆಯಾಗಿದೆ. ನರೇಂದ್ರ ಮೋದಿ ಭಾನುವಾರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎನ್‌ಡಿಎ ಮೈತ್ರಿಕೂಟದ ಪಾಲುದಾರ ಪಕ್ಷವಾಗಿರುವ ಜೆಡಿಎಸ್‌ಗೆ ಸಚಿವ ಸ್ಥಾನ ಸಿಕ್ಕಿದೆ. ಮಂಡ್ಯ ಸಂಸದ ಎಚ್. ಡಿ. ಕುಮಾರಸ್ವಾಮಿ ಸಂಪುಟ ದರ್ಜೆ ಸಚಿವರಾಗಿ ಮೋದಿ 3.0 ಸಂಪುಟ ಸೇರಿದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕ ಎಚ್. ಡಿ. ಕುಮಾರಸ್ವಾಮಿ. 2024ರ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಜಯಗಳಿಸಿದ ಅವರು ಕೇಂದ್ರ ಸಚಿವರಾಗಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಎದುರಾಗಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಕ್ಷೇತ್ರ ಯಾರಿಗೆ?, ಅಭ್ಯರ್ಥಿ ಯಾರು? ಎಂಬುದು ಎಲ್ಲರ ಪ್ರಶ್ನೆ. ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಕಂಡ ಡಿ. ಕೆ. ಸುರೇಶ್ ಕಣಕ್ಕಿಳಿಯಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿದ್ದವು.
ಅಚ್ಚರಿಯ ಅಭ್ಯರ್ಥಿ ಆಯ್ಕೆ: ರಾಮನಗರದಲ್ಲಿ ಮಾತನಾಡದಿ ಡಿ. ಕೆ. ಸುರೇಶ್, "ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಕಾಂಗ್ರೆಸ್‌ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ" ಎಂದು ಹೇಳಿದರು. ಈ ಮೂಲಕ ಉಪ ಚುನಾವಣೆಯ ಕಾವು ಹೆಚ್ಚಿಸಿದರು.
"ನಾನು ಸೋಲನ್ನು ಒಪ್ಪಿಕೊಳ್ಳುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಡಿ. ಕೆ. ಸುರೇಶ್‌ನ ಸೋಲಿಸಿದ್ದೇವೆ ಏನೋ ಆಗಿಬಿಡುತ್ತದೆ ಎಂದುಕೊಂಡರೆ ಅದು ಭ್ರಮೆ. ನನಗೆ ನಾನೇ ಶತ್ರು, ಈಗ ವಿರಾಮ" ಎಂದು ಲೋಕಸಭೆ ಚುನಾವಣೆ 2024ರ ಸೋಲಿನ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಹೋರಾಟದ ಕುತೂಹಲ ಮೂಡಿಸಿತ್ತು. ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಎಸ್. ಕೇವಲ 15,374 ಮತಗಳನ್ನು ಪಡೆದಿದ್ದರು.
ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್. ಡಿ. ಕುಮಾರಸ್ವಾಮಿ 96,592 ಮತಗಳನ್ನು ಪಡೆದು ಜಯಗಳಿಸಿದರು. ಬಿಜೆಪಿ ಅಭ್ಯರ್ಥಿ ಸಿ. ಪಿ. ಯೋಗೇಶ್ವರ 80,677 ಮತಗಳನ್ನು ಪಡೆದು ಸೋಲು ಕಂಡಿದ್ದರು.
ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿತು. ವಿಧಾನ ಪರಿಷತ್, ಲೋಕಸಭೆ ಚುನಾವಣೆಯನ್ನು ಉಭಯ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಂಡು ಎದುರಿಸಿವೆ. ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷವಾದ ಕಾರಣ ಎಚ್. ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆ ನಡೆದರೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಕ್ಷೇತ್ರ ಬಿಜೆಪಿ ಪಾಲಾಗಲಿದೆ. ಸಿ. ಪಿ. ಯೋಗೇಶ್ವರ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ. ಇದೆ. ಮತ್ತೊಂದು ಕಡೆ 2019ರಲ್ಲಿ ಮಂಡ್ಯ, 2023ರಲ್ಲಿ ರಾಮನಗರದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಅಭ್ಯರ್ಥಿಯಾಗಬಹುದು ಎಂಬ ಲೆಕ್ಕಾಚಾರವಿದೆ.
ಚನ್ನಪಟ್ಟಣದ ಉಪ ಚುನಾವಣೆ ಕ್ಷೇತ್ರದಲ್ಲಿ ಭಾರೀ ಪ್ರಭಾವ ಹೊಂದಿರುವ, ಕೇಂದ್ರ ಸಚಿವರಾಗಿರುವ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮತ್ತೊಂದು ಕಡೆ ರಾಮನಗರಲ್ಲಿ ಗೆಲವು ಸಾಧಿಸುವುದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೂ ಪ್ರತಿಷ್ಠೆಯಾಗಿದೆ. ಆದ್ದರಿಂದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಳೆದ ವಾರ ಮಾತನಾಡಿ, "ಮೈತ್ರಿ ಧರ್ಮದಲ್ಲಿ ಚನ್ನಪಟ್ಟಣ, ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಯಾರಿಗೆ ಸಿಗಬೇಕು? ಎಂದು ಸೂಕ್ತ ಸಮಯದಲ್ಲಿ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ" ಎಂದು ಹೇಳಿದ್ದರು. ಆದರೆ ಚನ್ನಪಟ್ಟಣ ಯಾರಿಗೆ ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.












Click it and Unblock the Notifications