ಸಿದ್ದಗಂಗಾ ಶ್ರೀಗಳ ಮನೆ ಜೀರ್ಣೋದ್ಧಾರ; ಸಚಿವರಿಂದ ಭೂಮಿ ಪೂಜೆ
ರಾಮನಗರ, ಜೂನ್ 18; ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾಗಿ ಎರಡು ವರ್ಷಗಳು ಕಳೆದಿದೆ. ಅಂದಿನಿಂದಲೂ ಹುಟ್ಟಿದ ಗ್ರಾಮವನ್ನು ಅಭಿವೃದ್ದಿಪಡಿಸಿ ವಿಶ್ವ ಮಟ್ಟದ ಪಾರಂಪರಿಕ ತಾಣ ಮಾಡಬೇಕು ಎಂದು ಸರ್ಕಾರ ತೀರ್ಮಾನಿಸಿತ್ತು. ಆದರೆ ಕೋವಿಡ್‌ನಿಂದ ಎಲ್ಲಾ ಕೆಲಸಗಳನ್ನು ನಿಲ್ಲಿಸಲಾಗಿತ್ತು.
ಇದೀಗ ಮತ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಶುಕ್ರವಾರ ಸಿದ್ದಗಂಗಾ ಶ್ರೀಗಳ ಹುಟ್ಟಿದ ಮನೆಯ ಪುನರ್ ನವೀಕರಣ ಕಾಮಗಾರಿಗೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ವೀರಾಪುರದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ಶ್ರೀಗಳು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಜನಿಸಿದ್ದರು. ಕುಗ್ರಾಮದಲ್ಲಿ ಜನಿಸಿದ್ದ ಅವರು ವಿಶ್ವ ಮಟ್ಟದಲ್ಲೇ ಹೆಸರು ಮಾಡಿದ್ದರು. ಚಿಕ್ಕ ವಯಸ್ಸಿನಲ್ಲಿ ಅವರು ವಾಸ ಮಾಡಿಕೊಂಡಿದ್ದ ಮನೆ ಸಂಪೂರ್ಣ ನೆಲಸಮವಾಗಿದೆ.

ಶ್ರೀಗಳು ವಾಸ ಮಾಡಿಕೊಂಡಿದ್ದ ಮನೆಯ ಸಂಪೂರ್ಣ ಮಾಹಿತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಹಿಂದೆ ಇದ್ದ ಮಾದರಿಯಲ್ಲಿ ಮನೆಯನ್ನ ಕಟ್ಟಿ ಅವರು ಉಪಯೋಗಿಸುತ್ತಿದ್ದ ಎಲ್ಲಾ ವಸ್ತುಗಳ ಇಡಬೇಕು ಎಂದು ಸರ್ಕಾರ ತೀರ್ಮಾನಕ್ಕೆ ಬಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮನೆಯ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೆಆರ್‌ಡಿಎಲ್ ಅಧ್ಯಕ್ಷ ಎಂ. ರುದ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ವೀರಾಪುರ ಗ್ರಾಮದ ಸಮೀಪವೇ ಇರುವ ಎತ್ತರದ ಪ್ರದೇಶದಲ್ಲಿ ಶಿವಗಂಗಾ ಬೆಟ್ಟದ ಕಡೆ ತಿರುಗಿ ನಿಂತಿರುವ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣವಾಗಲಿದೆ. ಪುತ್ಥಳಿ ಸಮೀಪವೇ ಆಡಿಟೋರಿಯಂ ಹಾಗೂ ವಸ್ತು ಸಂಗ್ರಹಾಲಯ ಮಾಡಲು ತೀರ್ಮಾನಿಸಲಾಗಿದೆ.

"ವೀರಾಪುರದಿಂದ ಸಿದ್ದಗಂಗಾ ಮಠಕ್ಕೆ 22 ಕಿ. ಮೀ. ದೂರವಿದೆ. ಅಲ್ಲಿಗೆ ನೇರವಾಗಿ ತಲುಪಲು ರಸ್ತೆ ಮಾಡಿಕೊಡಬೇಕು ಎಂಬ ಬೇಡಿಕೆ ಇದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ರಸ್ತೆ ಅಭಿವೃದ್ಧಿ ಪಡಿಸುತ್ತೇವೆ" ಎಂದು ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದರು.
"ಬಿಡದಿಯ ಬಾನಂದೂರು ಗ್ರಾಮದಲ್ಲಿ ಜನಸಿದ್ದ ಬಾಲಗಂಗಾಧರನಾಥ ಸ್ವಾಮೀಜಿಗಳ ಊರನ್ನು ಅಭಿವೃದ್ಧಿ ಮಾಡಲಾಗುವುದು. ಈ ಎರಡು ಸ್ಥಳಗಳಿಗೆ ಈಗಾಗಲೇ ಸರ್ಕಾರದಿಂದ ತಲಾ 25 ಕೋಟಿ ಹಣ ಸಹ ಬಿಡುಗಡೆ ಮಾಡಲಾಗಿದೆ" ಎಂದು ಸಚಿವರು ತಿಳಿಸಿದರು.
ಒಟ್ಟಾರೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲೇ ಇಬ್ಬರು ಮಹಾ ಚೇತನರು ಜನಿಸಿದ್ದು ಈಗ ಅವರಿಬ್ಬರ ಗ್ರಾಮಗಳನ್ನು ಅಭಿವೃದ್ಧಿ ಮಾಡುವ ಭಾಗ್ಯ ರಾಜ್ಯ ಸರ್ಕಾರಕ್ಕೆ ದೊರಕಿದೆ. ಆದರೆ ಕೊರೊನಾದಿಂದ ಇವೆಲ್ಲವೂ ವಿಳಂಬವಾಗಿತ್ತು. ಆದಷ್ಟು ಬೇಗ ಈ ಎರಡೂ ಗ್ರಾಮಗಳ ಅಭಿವೃದ್ಧಿ ನಡೆಯಲಿ ಎಂಬುದು ಎಲ್ಲರ ಆಶಯ.












Click it and Unblock the Notifications