ನಿತ್ಯಾನಂದನ ಇಬ್ಬರು ಶಿಷ್ಯೆಯರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನ್ಯಾಯಾಲಯ
ರಾಮನಗರ, ಜುಲೈ 6: ಭಾರತದಿಂದ ಪರಾರಿಯಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಇಬ್ಬರು ಶಿಷ್ಯೆಯರ ವಿರುದ್ಧ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ನಿತ್ಯಾನಂದನ ಶಿಷ್ಯರಾದ ಶಿವವಲ್ಲಭನೇನಿ ಮತ್ತು ಜಮುನಾ ರಾಣಿ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿ ಬುಧವಾರ ಆದೇಶ ನೀಡಿದೆ. ನಿತ್ಯಾನಂದನ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣದಲ್ಲಿ ಇವರಿಬ್ಬರನ್ನೂ ಮೂರು ಮತ್ತು ಆರನೇ ಆರೋಪಿಗಳೆಂದು ಹೆಸರಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ತೀರ್ಪುಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗದೇ ತಪ್ಪಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಈ ಆದೇಶ ನೀಡಿದೆ. ಮುಂದಿನ ವಿಚಾರಣೆ ಆಗಸ್ಟ್ 5ರಂದು ನಡೆಯಲಿದೆ.
ಪರಾರಿಯಾಗಿರುವ ನಿತ್ಯಾನಂತ
2019ರಲ್ಲಿ ತನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾದ ನಂತರ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ. ತಾನೇ ಪ್ರತ್ಯೇಕ ರಾಷ್ಟ್ರ ನಿರ್ಮಿಸಿಕೊಂಡಿರುವುದಾಗಿ ಘೋಷಣೆ ಮಾಡಿರುವ ನಿತ್ಯಾನಂದ, ಅದಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾರೆ. ಅಲ್ಲದೆ ಅದನ್ನು ಹಿಂದೂ ರಾಷ್ಟ್ರ ಎಂದು ಕರೆದುಕೊಂಡಿದ್ದಾನೆ.
2023ರ ಆರಂಭದಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ನಿತ್ಯಾನಂದನ ಶಿಷ್ಯೆ ವಿಜಯಪ್ರಿಯಾ ನಿತ್ಯಾನಂದ, ಇತರೆ ಐವರು ಮಹಿಳೆಯರ ಜೊತೆ ಭಾಗವಹಿಸಿ, ತಮ್ಮ ಕೈಲಾಸ ದೇಶವನ್ನು ಪ್ರತಿನಿಧಿಸಿದ್ದರು.
ದೇಶ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ!
ಅತ್ಯಾಚಾರ ಮತ್ತು ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿದ್ದ ನಿತ್ಯಾನಂದ 2019ರಲ್ಲಿ ಭಾರತದಿಂದ ಪರಾರಿಯಾದ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (USK) ಎನ್ನುವ ಹೆಸರಿನ ದೇಶವನ್ನು ರಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದ ಆತ, ಅದನ್ನು ಸಂಪೂರ್ಣ ಹಿಂದೂ ರಾಷ್ಟ್ರ ಎಂದು ಕರೆದುಕೊಂಡಿದ್ದ.
ಸಾಮಾಜಿಕ ಮಾಧ್ಯಮಗಳಲ್ಲಿ ನಿತ್ಯಾನಂದನ ಕೈಲಾಸದ ದೃಶ್ಯಗಳು ಲಭ್ಯವಿದ್ದರೂ ವಾಸ್ತವವಾಗಿ ಈ ದೇಶ ಎಲ್ಲಿದೆ ಎಂದು ಬಹುತೇಕರಿಗೆ ಗೊತ್ತಿಲ್ಲ. ನಿತ್ಯಾನಂದನ ಅನುಯಾಯಿಗಳು ಮಾತ್ರ ತಾವು ಕೈಲಾಸದಲ್ಲಿನ ಆಶ್ರಮದಲ್ಲಿ ಇರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಳ್ಳುತ್ತಿರುತ್ತಾರೆ.












Click it and Unblock the Notifications