ಸುಪಾರಿ ನೀಡಿ ಪತಿಯನ್ನು ಕೊಲ್ಲಿಸಿದ ಪತ್ನಿಗೆ ಜೀವಾವಧಿ ಶಿಕ್ಷೆ
ರಾಮನಗರ, ಮೇ. 28 : ಗಂಡ ಗಣೇಶ್ ನನ್ನು ಬರ್ಬರವಾಗಿ ಕೊಲೆ ಮಾಡಿಸಿದ್ದ ಹೆಂಡತಿ ಸುಕನ್ಯಾ ಸೇರಿ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ದಂಡ ವಿಧಿಸಿ ರಾಮನಗರ 3ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಆಂಧ್ರಪ್ರದೇಶದ ಕುಪ್ಪಂ ನಿವಾಸಿ ಸುಕನ್ಯ 2015 ಏಪ್ರಿಲ್ 5 ರಂದು ತನ್ನ ಪತಿ ಗಣೇಶ್ನನ್ನು ಸುಪಾರಿ ನೀಡಿ ಕೊಲೆ ಮಾಡಿಸಿದ್ದಳು. ಸುಪಾರಿ ಪಡೆದ ಹಂತಕರು ಗಣೇಶನನ್ನು ನರ್ಸರಿ ಗಿಡಗಳ ವ್ಯಾಪಾರದ ನೆಪ ಹೇಳಿ ರಾಮನಗರಕ್ಕೆ ಕರೆಸಿಕೊಂಡು ರಾಮನಗರದ ಜೈನ್ ದೇವಾಲಯದ ರೈಲು ಹಳಿ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಪ್ರಕರಣದ ಬೆನ್ನು ಹತ್ತಿದ ಪೋಲೀಸರು ಮೃತ ಗಣೇಶನ ಪತ್ನಿ ಸುಕನ್ಯಾ, ಅಕೆಯ ಪ್ರಿಯಕರ ಭರತ್ ಸೇರಿದಂತೆ ಏಳು ಮಂದಿಯನ್ನು ಆಂಧ್ರಪ್ರದೇಶದ ಕುಪ್ಪಂನಲ್ಲಿ ಬಂಧಿಸಿದರು.

ಈ ಪ್ರಕರಣದಲ್ಲಿ ಇಮ್ರಾನ್ ಖಾನ್ ಹಾಗೂ ಸೋಮಶೇಖರ್ ಎಂಬ ಆರೋಪಿಗಳಿಗೆ ಬಿಡುಗಡೆ ಮಾಡಲಾಗಿದೆ.
ತನಗೆ ಇಷ್ಟವಿಲ್ಲದಿದ್ದರೂ ಮನೆಯವರ ಇಚ್ಛೆಯಂತೆ ಸುಕನ್ಯ ಗಣೇಶ್ ಜತೆ ಮದುವೆಯಾಗಿದ್ದಳು. ಆದ್ರೆ ಮದುವೆಗೂ ಮೊದಲೇ ಸುಕನ್ಯ ಭರತ್ ಎಂಬುವನನ್ನು ಪ್ರೀತಿ ಮಾಡುತ್ತಿದ್ದಳು. ಪ್ರೀತಿ ಮಾಡಿದ ಹುಡುಗ ಸಿಗಲಿಲ್ಲ ಎಂಬ ಕಾರಣಕ್ಕೆ ಪ್ರಿಯತಮನ ಜತೆ ಸೇರಿ ತನ್ನ ಗಂಡನನ್ನೇ 5 ಲಕ್ಷ ರೂಪಾಯಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಳು.
ಪ್ರಕರಣ ದಾಖಲಿಸಿಕೊಂಡ ರಾಮನಗರ ಗ್ರಾಮಾಂತರ ಪೊಲೀಸರು ಆರೋಪಿ ಸುಕನ್ಯಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಉಳಿದ ಆರೋಪಿಗಳ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸರ್ಕಾರಿ ಅಭಿಯೋಜಕ ಎಂ.ಡಿ ರಘು ಆರೋಪಿಗಳ ವಿರುದ್ಧ ವಾದಿಸಿದ್ದರು.
ಸುಮಾರು 15 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಅಂದಿನ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಅನಿಲ್ ಕುಮಾರ್ ಅವರು ಪ್ರಕರಣದ ತನಿಖಾಧಿಕಾರಿಯಾಗಿದ್ದರು.











Click it and Unblock the Notifications