ರಾಮನಗರ ಉಪ ಚುನಾವಣೆ : ಕೊನೆ ಕ್ಷಣದಲ್ಲಿ ಬಿಜೆಪಿ ತಂತ್ರ ಬದಲು!
Recommended Video

ರಾಮನಗರ, ಅಕ್ಟೋಬರ್ 15 : ರಾಮನಗರ ಉಪ ಚುನಾವಣೆ ಕಣ ರಂಗೇರಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಜಿಲ್ಲೆಯ ಕೆಲವು ಕಾಂಗ್ರೆಸ್ ನಾಯಕರ ಅಸಮಾಧಾನ ಬಿಜೆಪಿಗೆ ವರವಾಗಲಿದೆಯೇ? ಕಾದು ನೋಡಬೇಕು.
ನವೆಂಬರ್ 3ರಂದು ರಾಮನಗರ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಎಲ್.ಚಂದ್ರಶೇಖರ್, ಜೆಡಿಎಸ್‌ನಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ. ಇಬ್ಬರೂ ಸೋಮವಾರ ನಾಮಪತ್ರ ಸಲ್ಲಿಸಿದರು.
ರಾಮನಗರ ಉಪ ಚುನಾವಣೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಕೊನೆ ಕ್ಷಣದಲ್ಲಿ ಪಕ್ಷದ ನಾಯಕರು 5 ದಿನಗಳ ಹಿಂದೆ ಪಕ್ಷಕ್ಕೆ ಸೇರಿದ ಎಲ್.ಚಂದ್ರಶೇಖರ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿ ಮೈತ್ರಿ ಕೂಟಕ್ಕೆ ಶಾಕ್ ನೀಡಿತು.
ಕಾಂಗ್ರೆಸ್ ನಾಯಕ ಸಿ.ಎಂ.ಲಿಂಗಪ್ಪ ಪುತ್ರ ಎಲ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದರಿಂದಾಗಿ ಲಿಂಗಪ್ಪ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಚುನಾವಣೆಯಲ್ಲಿ ಯಾರಿಗೆ ಗೆಲವು ಎಂದು ಕಾದು ನೋಡಬೇಕಿದೆ....

ಒಕ್ಕಲಿಗ ಮತಗಳ ಮೇಲೆ ಕಣ್ಣು
ರಾಮನಗರದಲ್ಲಿ ಚುನಾವಣೆ ಗೆಲ್ಲಬೇಕು ಎಂದರೆ ಒಕ್ಕಲಿಗ ಮತಗಳನ್ನು ಸೆಳೆಯಬೇಕು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಎಂ.ರುದ್ರೇಶ್ ಬದಲಾಗಿ ಎಲ್.ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಿದೆ. ಮತ್ತೊಂದು ಕಡೆ ಟಿಕೆಟ್ ಕೈ ತಪ್ಪಿದ ರುದ್ರೇಶ್ ಅವರ ಮನವೊಲಿಸಲು ಯಡಿಯೂರಪ್ಪ ಸಫಲರಾಗಿದ್ದು, ಎಲ್ಲರೂ ಒಟ್ಟಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಎದುರಿಸಲಿದ್ದಾರೆ.

ಇಕ್ಕಟ್ಟಿಗೆ ಸಿಲುಕಿದ ಲಿಂಗಪ್ಪ
ಬಿಜೆಪಿ ಕೊನೆ ಕ್ಷಣದಲ್ಲಿ ತಂತ್ರ ಬದಲಿಸಿದ್ದರಿಂದ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಸಿ.ಎಂ.ಲಿಂಗಪ್ಪ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಪಕ್ಷದ ನಿರ್ದೇಶದಂತೆ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಬೆಂಬಲಿಸಬೇಕೋ? ಅಥವ ಪುತ್ರ, ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಬೆಂಬಲಿಸಬೇಕೋ? ಎಂದು ಅವರು ಗೊಂದಲದಲ್ಲಿದ್ದಾರೆ.

ಒಳ ಜಗಳದ ಲಾಭ?
ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದು ಕಾರ್ಯಕರ್ತರು ಮತ್ತು ಕೆಲವು ನಾಯಕರ ಬೇಡಿಕೆಯಾಗಿತ್ತು. ಆದರೆ, ಕಾಂಗ್ರೆಸ್ ಜೆಡಿಎಸ್ ಬೆಂಬಲಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಕೆಲವು ನಾಯಕರಲ್ಲಿ ಅಸಮಾಧಾನವಿದೆ. ಇದನ್ನು ಬಳಕೆ ಮಾಡಿಕೊಂಡು ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ ರೂಪಿಸಿದೆ. ಕಾಂಗ್ರೆಸ್ ಮುಖಂಡರ ಅಸಮಾಧಾನ ಬಿಜೆಪಿಗೆ ಸಹಕಾರಿಯಾಗಲಿದೆಯೇ? ಕಾದು ನೋಡಬೇಕು.

ರಾಮನಗರ ಚುನಾವಣಾ ಕಣದಲ್ಲಿ ಬಿಜೆಪಿ
ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಸಾಕಷ್ಟು ಪ್ರಭಾವ ಹೊಂದಿಲ್ಲ. ಆದರೆ, ಈ ಉಪ ಚುನಾವಣೆಯಲ್ಲಿ ಪಕ್ಷ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ.
* 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಪುಟ್ಟಸ್ವಾಮಿ ಗೌಡ 9,700 ಮತ ಪಡೆದಿದ್ದರು. ಈ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆದ್ದಿದ್ದರು.
* 2008ರ ಚುನಾವಣೆಯಲ್ಲಿ ಎಂ.ರುದ್ರೇಶ್ ಬಿಜೆಪಿ ಅಭ್ಯರ್ಥಿಯಾಗಿದ್ದರು. 24,440 ಮತ ಪಡೆದಿದ್ದರು. (ಕುಮಾರಸ್ವಾಮಿ ಗೆಲುವು)
* 2013ರ ಚುನಾವಣೆಯಲ್ಲಿ ಶಿವಮಾದು ಬಿಜೆಪಿ ಅಭ್ಯರ್ಥಿಯಾಗಿದ್ದರು. 1776 ಮತ ಪಡೆದಿದ್ದರು. (ಕುಮಾರಸ್ವಾಮಿ ಗೆಲುವು)
* 2018ರ ಚುನಾವಣೆಯಲ್ಲಿ ಲೀಲಾವತಿ ಅವರು ಅಭ್ಯರ್ಥಿಯಾಗಿದ್ದರು. 4871 ಮತಗಳನ್ನು ಪಡೆದಿದ್ದರು.(ಕುಮಾರಸ್ವಾಮಿ ಗೆಲುವು)












Click it and Unblock the Notifications