ರಾಮನಗರ; ಭಾರತ್ ಜೋಡೋ ಯಾತ್ರೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದ ಬಿಎಸ್‌ವೈ
ರಾಮನಗರ, ಅಕ್ಟೋಬರ್ 09; ಕಾಂಗ್ರೆಸ್ ಹಮ್ಮಿಕೊಂಡಿರುವ ಜೋಡೋ ಯಾತ್ರೆಗೆ ರಾಜ್ಯದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ನಾಳೆಯಿಂದ ನಾನು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಪಕ್ಷ ಸಂಘಟನೆಗೆ ಪ್ರವಾಸ ಹಮ್ಮಿಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರೀಸಂದ್ರ ಗ್ರಾಮದಲ್ಲಿ ಭವಿಷ್ಯ ನುಡಿದರು.
ತಾಲೂಕಿನ ಹರೀಸಂದ್ರ ಗ್ರಾಮದ ಬಳಿ ಕೆಆರ್‌ಐಡಿಎಲ್ ನಿಗಮ ಅಧ್ಯಕ್ಷ ಎಂ. ರುದ್ರೇಶ್ ಒಡೆತನದ ರವಿಸಿಂಗ್ ರಿಟ್ರೀಟ್ ರೇಸಾರ್ಟ್ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
"ನಾಳೆಯಿಂದ ನಾನು ಹಾಗೂ ಸಿಎಂ ಬಸವರಾಜ ಬೊಮ್ಮಯಿ ಎರಡು ತಂಡಗಳಾಗಿ ಸುಮಾರು 50 ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇವೆ. ನನಗೆ ವಿಶ್ವಾಸವಿದೆ, ಯಾರು ಏನೇ ಬೊಬ್ಬೆ ಹೊಡೆದರೂ ಕೂಡ ನಿಶ್ಚಿತವಾಗಿ ಬಿಜೆಪಿ ಪಕ್ಷ 150 -160 ಸೀಟ್ ಗೆದ್ದು, ಮತ್ತೆ ಅಧಿಕಾರಕ್ಕೆ ಬರಲಿದೆ. ಕೆಲವರು ನಾನೇ ಸಿಎಂ, ಉಪಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿ ಇದ್ದು, ಅದೆಲ್ಲವೂ ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ತರಲಾಗುವುದು" ಎಂದು ತಿಳಿಸಿದರು.

"ಭಾರತ್ ಜೋಡೋ"ಗೆ ಬಿಎಸ್‌ವೈ ಪ್ರತಿಕ್ರಿಯೆ
"ಭಾರತ್ ಜೋಡೋ" ಯಾತ್ರೆಗೆ ಹೆದರಿ ರಾಜ್ಯ ಸರ್ಕಾರ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾನು ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಲು ಬಯಸುತ್ತೇನೆ. ಉತ್ತರ ಪ್ರದೇಶದಲ್ಲಿ ನಿಮ್ಮ ತಂಗಿ 6 ತಿಂಗಳು ವಾಸ್ತವ್ಯ ಮಾಡಿ ಮಹಿಳೆಯರನ್ನು ಅಭ್ಯರ್ಥಿ ಮಾಡಿ 2 ಸೀಟ್ ಗೆಲ್ಲಲು ಆಗಲಿಲ್ಲ. ಇಡೀ ದೇಶದಲ್ಲಿ ನಿಮ್ಮ ಅಡ್ರೆಸ್ ಇಲ್ಲ, ಎಲ್ಲೋ ಒಂದೆರಡು ಕಡೆ ಇದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ
ಕಾಂಗ್ರೆಸ್ ಅಲ್ಪ ಸ್ವಲ್ಪ ಮಾತ್ರ ಕರ್ನಾಟಕದಲ್ಲಿ ಉಸಿರಾಡುತ್ತಿದೆ. ಹಾಗಾಗಿ ಇಲ್ಲಿಗೆ ಬಂದು ಮನಬಂದಂತೆ ಮಾತನಾಡಿದರೆ ಪ್ರಯೋಜನ ಇಲ್ಲ. ಕರ್ನಾಟಕದಲ್ಲಿಯೂ ಸಹ ಇವರು ಅಧಿಕಾರಕ್ಕೆ ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಗುಡುಗಿದರು.

ಸಿದ್ದರಾಮಯ್ಯ ವಿರುದ್ಧ ಬಿಎಸ್‌ವೈ ಆಕ್ರೋಶ
ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಹೆಸರು ಬದಲಾವಣೆ ಮಾಡಿದ ವಿಚಾರವಾಗಿ ಇದು ದ್ವೇಷದ ರಾಜಕಾರಣ ಎಂಬ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಪ್ರತಿಕ್ರಿಯೆ ನೀಡಿ , "ಸಿದ್ದರಾಮಯ್ಯನವರಿಗೆ ಅಲ್ಪಸಂಖ್ಯಾತರ ಓಲೈಕೆ ಮಾಡುವ ಚಟ ಇದೆ. ಹಾಗಾಗಿ ಈ ರೀತಿ ಮಾತನಾಡುತ್ತಾರೆ." ರೈಲಿಗೆ ಒಡೆಯರ್ ಹೆಸರು ನಾಮಕರಣ ಮಾಡಿರುವುದನ್ನು ಇಂದು ದೇಶ - ರಾಜ್ಯದ ಜನರು ಸ್ವಾಗತ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಕೆಲವೇ ಕೆಲವು ಜನರಿಗೆ ಬೇಸರವಾಗಿರಬೇಕು ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.
ಇದೇ ವೇಳೆ ಸಚಿವ ಸಂಪುಟದ ವಿಸ್ತರಣೆ ಯಾವಗ ಎಂಬ ಪ್ರಶ್ನೆ ಕೇಳಿದಾಗ, ಅದನ್ನು ರಾಜ್ಯದ ಮುಖ್ಯಮಂತ್ರಿಗಳನ್ನು ಕೇಳಿ. ನನ್ನನ್ನು ಕೇಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾರಿಕೊಂಡರು.

"ಮಾಜಿ ಪ್ರಧಾನಿಗಳ ಹೇಳಿಕೆಗೆ ಪ್ರತಿಕ್ರಿಯಿಸಲ್ಲ"
ನಿನ್ನೆ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಜನತಾ ಮಿತ್ರ ಸಮಾವೇಶವನ್ನು ನಡೆಸಲಾಗಿತ್ತು. ಸಮಾವೇಶದಲ್ಲಿ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ 2023ಕ್ಕೆ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿಗಳಾದ ದೇವೇಗೌಡರು ಹಿರಯರಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಅವರ ಮಗನ ಮೇಲಿನ ಮಮತೆಗೆ ಆ ಮಾತು ಹೇಳಿದ್ದಾರೆ. ಅದನ್ನು ಬೇಡ ಎನ್ನಲು ನಾನ್ಯಾರು ಎಂದು ಪ್ರತಿಕ್ರಿಯೆ ನೀಡಿದರು.












Click it and Unblock the Notifications