Nikhil Kumaraswamy: ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ
ರಾಮನಗರ ಮೇ 25: ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ್ದಾರೆ. ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ ನಿಖಿಲ್ ಕುಮಾರಸ್ವಾಮಿ, ನಾನು ಪಕ್ಷದ ಜೊತೆ ಸದಾ ನಿಲ್ಲುವೆ ಎಂದು ಹೊಸ ನಾಯಕತ್ವಕ್ಕೆ ಅವಕಾಶ ಕೊಡಲು ಮನವಿ ಮಾಡಿದ್ದಾರೆ.
ಸೋಲಿನಿಂದ ಕಂಗೆಡದೆ ಪಕ್ಷ ಕಟ್ಟುವ ಮಾತನಾಡಿದ ಅವರು ಸೋಲೇ ಅಂತಿಮವಲ್ಲ ಎಂದು ಹೇಳಿದ್ದಾರೆ. ಪಕ್ಷ ಮರು ನಿರ್ಮಾಣ ದಿಸೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಪಕ್ಷ ಕಟ್ಟುವ ಕೆಲಸದಲ್ಲಿ ನಾನು ಎಂದೂ ಹಿಂಜರಿಯಲಾರೆ ಎಂದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣೆ ಕಣಕ್ಕಿಳಿದಿದ್ದ ನಿಣಿಲ್, ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ವಿರುದ್ಧ ಸೋಲುಂಡಿದ್ದರು. ಇದರ ನೋವಿನಿಂದ ಹೊರಬರಲು ನಿಖಿಲ್‌ಗೆ ಹಲವು ದಿನಗಳೇ ಬೇಕಾಯಿತು. ಇದೀಗ ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ರಾಮನಗರ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಹೀನಾಯ ಸೋಲು ಕಂಡಿದ್ದಾರೆ.
ಸತತ ಎರಡು ಸೋಲುಗಳಿಂದ ಕಂಗಾಲಾಗಿರುವ ನಿಖಿಲ್ ಕುಮಾರಸ್ವಾಮಿ ಇದೀಗ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಎಚ್.ಡಿ ಕುಮಾರಸ್ವಾಮಿ ಸಮ್ಮತಿ ಕೂಡ ಸಿಕ್ಕಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ರಾಜಕೀಯ ಚಟುವಟಿಕೆಗಳಿಮದ ದೂರವಿದ್ದು, ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದು ತೆರವಾದ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಲು ಪಕ್ಷದಲ್ಲಿ ಚರ್ಚೆ ನಡೆದಿವೆ. ಇಂದು ಜೆಡಿಎಸ್ನ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನೂತನ ಅಧ್ಯಕ್ಷರ ನೇಮಕ ಮಾಡುವ ಸಾಧ್ಯತೆ ಇದೆ. ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನ ವಹಿಸುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಇದಕ್ಕೆ ಕುಮಾರಸ್ವಾಮಿ ಒಪ್ಪುತ್ತಾರಾ ಎಂಬ ಪ್ರಶ್ನೆ ಮೂಡಿದೆ. ನೂತನ ಶಾಸಕ ಶರಣಗೌಡ ಕಂದಕೂರ್ ಬಗ್ಗೆ ಕುಮಾರಸ್ವಾಮಿಗೆ ಒಲವು ಇದೆ. ಯುವ ಘಟಕದ ಜೊತೆಗೆ ರಾಜ್ಯ ಪದಾಧಿಕಾರಿಗಳ ಬದಲಾವಣೆಯು ಸಹ ನಡೆಯಲಿದೆ.

ಜೆಡಿಎಸ್ ಭದ್ರಕೋಟೆಗೆ ನುಸುಳಿದ ಕಾಂಗ್ರೆಸ್
ರಾಮನಗರ ಜಿಲ್ಲೆಯನ್ನು ಜೆಡಿಎಸ್‌ನ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು. ಅದರಲ್ಲೂ ರಾಮನಗರದಲ್ಲಿ ಕನಕಪುರವನ್ನು ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸುವುದರೊಂದಿಗೆ ಎಚ್.ಡಿ.ಕುಮಾರಸ್ವಾಮಿಗೆ ಬೆನ್ನೆಲುಬಾಗಿ ಮತದಾರರು ನಿಂತಿದ್ದರು. ಆದರೆ ಈ ಬಾರಿ ಜೆಡಿಎಸ್‌ನ ಭದ್ರಕೋಟೆಗೆ ಕಾಂಗ್ರೆಸ್ ನುಸುಳಿದೆ.
ಹಾಗೆಯೇ ಬೇರೆ ಕಡೆಯೂ ಜೆಡಿಎಸ್ ಸೋಲು ಕಂಡರೂ ರಾಮನಗರ ಜಿಲ್ಲೆಯ ಜನ ನಮ್ಮ ಕೈಬಿಡುವುದಿಲ್ಲ ಎಂದೇ ಕುಮಾರಸ್ವಾಮಿ ನಂಬಿದ್ದರು. ಆದರೆ ಈ ಬಾರಿಯ ಚುನಾವಣೆಯ ಫಲಿತಾಂಶ ಅದನ್ನು ಸುಳ್ಳು ಮಾಡಿದೆ. ಅಷ್ಟೇ ಅಲ್ಲದೆ ಜೆಡಿಎಸ್‌ಗೆ ಒತ್ತಾಸೆಯಾಗಿದ್ದ ಒಕ್ಕಲಿಗರು ನಿಧಾನವಾಗಿ ಪಕ್ಷವನ್ನು ಬಿಟ್ಟು ಹೋಗುತ್ತಿರುವುದು ಈ ಬಾರಿಯ ಚುನಾವಣೆಯಿಂದ ಸಾಬೀತಾಗಿದೆ. ಪತ್ನಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ರಾಮನಗರದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿ ಸುಲಭವಾಗಿ ಗೆಲ್ಲಿಸಿಕೊಂಡು ಬರಬಹುದು ಎಂದು ನಂಬಿದ್ದರು. ಆದರೆ ನಿಖಿಲ್ ಹೀನಾಯ ಸೋಲನ್ನು ಕಂಡಿದ್ದಾರೆ.












Click it and Unblock the Notifications