ಜೆಡಿಎಸ್ ಭದ್ರಕೋಟೆ ಛಿದ್ರ... ರಾಮನಗರದಲ್ಲಿ ಸೋಲುಂಡ ನಿಖಿಲ್ ಕುಮಾರಸ್ವಾಮಿ
ರಾಮನಗರ: ಜೆಡಿಎಸ್ ಪ್ರತಿಷ್ಠೆಯ ಕಣವಾಗಿದ್ದ ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಮತ ಎಣಿಕೆ ಆರಂಭವಾಗಿದ್ದಾಗಿನಿಂದಲೂ ಜೆಡಿಎಸ್ ಹಿನ್ನಡೆ ಕಾಯ್ದುಕೊಂಡಿತ್ತು. ಕೊನೆಗೂ ನಿಖಿಲ್ ಕುಮಾರಸ್ವಾಮಿ ಸೋಲು ಈಗ ಜೆಡಿಎಸ್ ಭದ್ರಕೋಟೆಯನ್ನು ಕೆಡವಿದಂತಾಗಿದೆ.
ಎಚ್.ಡಿ. ಕುಮಾರ ಸ್ವಾಮಿಯವರಿಗೆ ಈ ಕ್ಷೇತ್ರವು ಮೊದಲಿನಿಂದಲೂ ಜೆಡಿಎಸ್‌ಗೆ ವರದಾನವಾಗಿತ್ತು. ಅವರು ಹಲವು ಬಾರಿ ಇದೇ ಕ್ಷೇತ್ರದಿಂದ ಗೆದ್ದಿದ್ದರು. ಕಳೆದ ಬಾರಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದರು. ಆದರೆ ಈ ಬಾರಿ ರಾಮನಗರದಿಂದ ಪುತ್ರನನ್ನು ಗೆಲ್ಲಿಸುವಲ್ಲಿ ವಿಫಲವಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಗೆದ್ದು ಬೀಗಿದ್ದಾರೆ.

ಈ ಬಾರಿಯ ಚುನಾವಣಾ ಪ್ರಚಾರಕ್ಕಾಗಿ ಎಚ್.ಡಿ ದೇವೇಗೌಡರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪ್ರಚಾರಕ್ಕಿಳಿದು ಮತಯಾಚಿಸಿದ್ದರು. ಜೊತೆಗೆ ಹಲವು ಲೆಕ್ಕಾಚಾರಗಳಂತೆ ನಿಖಿಲ್ ಕುಮಾರಸ್ವಾಮಿಯವರ ಜಯವನ್ನು ಮುಂದೇ ಊಹಿಸಿದ್ದರಾದರೂ, ಜೆಡಿಎಸ್ ಸೋಲು ಈಗ ದೊಡ್ಡ ಆಘಾತ ನೀಡಿದೆ.
ಹಾಗೆಯೇ ಈ ಬಾರಿ ಕುಮಾರಸ್ವಾಮಿಯವರ ಭದ್ರ ಕೋಟೆಯನ್ನು ಭೇದಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಪ್ಲಾನ್‌ಗಳು ಯಶಸ್ಸನ್ನು ತಂದುಕೊಟ್ಟಿವೆ. ಕ್ಷೇತ್ರದಲ್ಲಿ ಈಗ ಗೆದ್ದಿರುವ ಇಕ್ಬಾಲ್ ಹುಸೇನ್ ಮೇಲೆ ನಂಬಿಕೆಯಿಟ್ಟು ತುಂಬಾ ಸಪೋರ್ಟ್ ಮಾಡಿದ್ದರು. ಅದರಂತೆ ಅವರ ಲೆಕ್ಕಾಚಾರಗಳು ಈಗ ತಪ್ಪಾಗಿಲ್ಲ.
ರಾಮನಗರದಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಮತಗಳೇ ನಿರ್ಣಾಯಕವಾಗಿದ್ದ ಕಾರಣ ಹಾಗೂ ರಾಮನಗರದಲ್ಲಿ ಕಳೆದ ಬಾರಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ಆರೋಪಗಳು ಈ ಬಾರಿಯ ಸೋಲಿಗೆ ಕಾರಣ ಎನ್ನಲಾಗುತ್ತದೆ. ಜೊತೆಗೆ ಇಕ್ಬಾಲ್ ಹುಸೇನ್ ಅಲ್ಪಸಂಖ್ಯಾತ ಅಭ್ಯರ್ಥಿಯಾಗಿರುವುದು ಕೂಡ ಗೆಲುವಿಗೆ ಮುಖ್ಯ ಕಾರಣವಾಗಿದೆ.












Click it and Unblock the Notifications