ಡಿ.31ರಿಂದ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಜಿಲ್ಲಾಧಿಕಾರಿ
ರಾಮನಗರ, ಡಿಸೆಂಬರ್ 31: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕೊರೊನಾ ಮೂರನೇ ಅಲೆ ಓಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ಗುಂಗಿನಲ್ಲಿ ಮೈಮರೆತರೆ ಕೋವಿಡ್ ಮೂರನೇ ಅಲೆ, ರೂಪಾಂತರ ಓಮಿಕ್ರಾನ್ ವೈರಸ್ ಹರಡುವ ಭೀತಿಯನ್ನು ಮನಗಂಡ ರಾಮನಗರ ಜಿಲ್ಲಾಡಳಿತ, ಡಿ.31ರಿಂದ ಜ.2 ರವರೆಗೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ರಾಮನಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ರಾಮನಗರ ತಾಲ್ಲೂಕಿನ ರೇವಣಸಿದ್ದೇಶ್ವರ ಬೆಟ್ಟ, ರಾಮದೇವರ ಬೆಟ್ಟ, ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯ, ಮಾಗಡಿ ತಾಲ್ಲೂಕಿನ ಸಾವನದುರ್ಗ, ಮಂಚನಬೆಲೆ ಜಲಾಶಯ ಮತ್ತು ಕನಕಪುರ ತಾಲ್ಲೂಕಿನ ಸಂಗಮ, ಮೇಕೆದಾಟು ಹಾಗೂ ಚುಂಚಿಪಾಲ್ಸ್ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಬೆಂಗಳೂರಿನ ಪಕ್ಕದಲ್ಲೇ ಇರುವ ಜಿಲ್ಲೆಯ ಪ್ರವಾಸಿ ತಾಣಗಳು ಅಂದರೆ ಬೆಂಗಳೂರು ನಿವಾಸಿಗಳಿಗೆ ಫೇವರೇಟ್ ತಾಣಗಳು, ಅದು ರಜಾ ದಿನಗಳಿರಲಿ, ಹೊಸ ವರ್ಷದ ಆಚರಣೆಗಳಿರಲಿ, ಒಂದು ದಿನದ ಪ್ರವಾಸಕ್ಕೆ ಬೆಂಗಳೂರಿಗರ ಮೊದಲ ಆಯ್ಕೆ ಅದು ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳು. ಅದರಲ್ಲೂ ಕಾವೇರಿ ನದಿ ತಟ ಹಾಗೂ ಬೆಟ್ಟ- ಗುಡ್ಡಗಳಿಂದ ಕೂಡಿರುವ ಸಾವನದುರ್ಗ.
ಕೋವಿಡ್-19 ಸೋಂಕು ವಕ್ಕರಿಸಿದ ದಿನದಿಂದ ಪ್ರವಾಸಿಗರಿಲ್ಲದೇ ಬಣಗುಡುತ್ತಿದ್ದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜನರು ಇತ್ತೀಚೆಗೆ ಭೇಟಿ ನೀಡುತ್ತಿದ್ದರು. ಅಲ್ಲದೇ ಕೊರೊನಾ ಭೀತಿ ಇದ್ದರೂ, ಲೆಕ್ಕಿಸದೇ ಹೊಸ ವರ್ಷದ ಸಂಭ್ರಮಾಚರಣೆ ಪ್ಲಾನ್ ಮಾಡಿದ್ದರು. ಹಾಗಾಗಿ ಕೊರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕೋವಿಡ್ ಓಮಿಕ್ರಾನ್ ತಡೆಗಟ್ಟುವ ಸಂಬಂಧ ಜಾರಿ ಮಾಡಿರುವ ಮಾರ್ಗಸೂಚಿ ಹಾಗೂ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳು ಮೂರು ದಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ. ಅಲ್ಲದೇ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳನ್ನು ಜಾರಿ ತರಲು ಅಯಾ ತಾಲ್ಲೂಕು ದಂಡಾಧಿಕಾರಿಗಳಿಗೆ ನಿರ್ದೇಶನ ನೀಡಿ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಆದೇಶ ಮಾಡಿದ್ದಾರೆ.
ರೆಸಾರ್ಟ್, ಹೋಂ ಸ್ಟೇ ಮತ್ತು ಕೆಫೆ ಮರೆತ ಜಿಲ್ಲಾಡಳಿತ
ಓಮಿಕ್ರನ್ ಹರಡುವ ಭೀತಿಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ನಿರ್ಬಂಧಿಸಿ ಆದೇಶ ಹೊರಡಿಸಿರುವ ರಾಮನಗರ ಜಿಲ್ಲಾಡಳಿತ, ಜಿಲ್ಲೆಯಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ರೆಸಾರ್ಟ್, ಹೋಂ ಸ್ಟೇ ಮತ್ತು ಕೆಫೇಗಳ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ರಾಜ್ಯ ಸರ್ಕಾರ ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧ ವಿಧಿಸಿ ಈಗಾಗಲೇ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಮೋಜು ಮಸ್ತಿ ಮಾಡಲು ಬೆಂಗಳೂರಿನ ಮಂದಿಗೆ ಪರ್ಯಾಯವಾಗಿ ಗೋಚರಿಸುವುದೇ ರಾಮನಗರ ಜಿಲ್ಲೆಯಲ್ಲಿರುವ ಖಾಸಗಿ ರೆಸಾರ್ಟ್, ಹೋಂ ಸ್ಟೇ, ಕೆಫೆಗಳು.
ಬೆಂಗಳೂರು ಕೂಗಳತೆ ದೂರದಲ್ಲಿರುವ ಜಿಲ್ಲೆಯ ರೆಸಾರ್ಟ್‌ಗಳತ್ತ ಬೆಂಗಳೂರಿಗರ ದಂಡೆ ಹರಿದು ಬರುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಕೆಲ ತಿಂಗಳುಗಳಿಂದ ಕಡಿಮೆ ಇರುವ ಜಿಲ್ಲೆಯ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚು ಆತಂಕ ಜಿಲ್ಲೆಯನ್ನು ಕಾಡುತ್ತದೆ. ಜಿಲ್ಲೆಯ ಜನರ ಆರೋಗ್ಯ ವಿಚಾರದಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಸರಿಯಲ್ಲ ಎಂದು ಪ್ರಜ್ಞಾವಂತ ನಾಗರಿಕರು ಹೇಳುತ್ತಿದ್ದಾರೆ.
ಹೊಸ ವರ್ಷದ ಮುನ್ನಾದಿನ ರಾತ್ರಿ 9 ಗಂಟೆಯ ಸಮಯದಲ್ಲಿ ರೆಸಾರ್ಟ್ ಒಳ ಹೋಗಿ ರಾತ್ರಿಪೂರ್ತಿ ಮೋಜು- ಮಸ್ತಿ ಮಾಡಿಕೊಂಡು, ಬೆಳಗ್ಗೆ 5 ಗಂಟೆಯ ನಂತರ ಹೊರ ಬಂದರೆ ಯಾವುದೇ ವ್ಯಕ್ತಿಗೆ ಕೊರೊನಾ ವೈರಸ್ ಹರಡುವುದಿಲ್ಲವೇ. ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಿದ ಮಾದರಿಯಲ್ಲಿ ರೆಸಾರ್ಟ್‌ಗಳಲ್ಲಿ ಸಂಭ್ರಮಾಚರಣೆಗೆ ನಿಷೇಧ ಹೇರಿಲ್ಲ ಏಕೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.












Click it and Unblock the Notifications