ಬಂಡೆಮಠದ ಸ್ವಾಮೀಜಿ ಪ್ರಕರಣ: ಡೆತ್ ನೋಟ್‌ನಲ್ಲಿ ಹನಿಟ್ರ್ಯಾಪ್ ಸುಳಿವು
ರಾಮನಗರ, ಅಕ್ಟೋಬರ್26: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶ್ರೀಗಳ ಮೊಬೈಲ್ ಕರೆ ಹಾಗೂ ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಹನಿಟ್ರ್ಯಾಪ್ ಸುಳಿವು ನೀಡಿದ್ದು, ಇನ್ನೆರಡು-ಮೂರು ದಿನಗಳಲ್ಲಿ ಶ್ರೀಗಳ ಆತ್ಮಹತ್ಯೆ ನಿಖರ ಕಾರಣ ತಿಳಿದು ಬರಲಿದೆ ಎಂದು ರಾಮನಗರ ಎಸ್‌ಪಿ ಸಂತೋಷ್ ಬಾಬು ತಿಳಿಸಿದ್ದಾರೆ.
ಕಂಚುಗಲ್ ಬಂಡೆ ಮಠದ ಶ್ರೀಮಹಾಲಿಂಗೇಶ್ವರ ಸ್ವಾಮಿ ದೇವಾಲಯದ ಎದುರಿಗೆ ಇರುವ ಕೊಠಡಿಯಲ್ಲಿ ಶ್ರೀಗಳು ಭಾನುವಾರ ರಾತ್ರಿ ತಂಗಿದ್ದರು. ಆದರೆ ಸೋಮವಾರ ಮುಂಜಾನೆ ಸ್ವಾಮೀಜಿ ಅವರ ಮೃತ ದೇಹ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆ ಸಂಬಂಧ ಸಂಪೂರ್ಣ ಪ್ರಕರಣಕ್ಕೆ ಡೆತ್ ನೋಟ್ ರೋಚಕ ತಿರುವು ನೀಡಿದೆ. ಡೆತ್ ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಪ್ರಕರಣ ದಿಕ್ಕನ್ನು ಬದಲಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಡೇತ್‌ನೋಟ್ ಕೂಡಾ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. "ನಾನು ಮಠದ ಉತ್ತರಾಧಿಕಾರಿಯಾದ ಬಳಿಕ ಯಾವುದೇ ಹಗರಣವನ್ನು ಮಾಡಿಲ್ಲ. ಸಿದ್ದಗಂಗಾ ಮಠಕ್ಕೆ ನಂಬುಗೆಯಿಂದಲ್ಲೇ ಕೆಲಸ ಮಾಡಿದ್ದೇನೆ. ಆದರೆ, ಕೆಲವರು ಇತ್ತೀಚೆಗೆ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಮೃತ ಸ್ವಾಮೀಜಿ ಆರೋಪಿಸಿದ್ದಾರೆ. ಅಲ್ಲದೇ ಮಹಿಳೆಯೊಬ್ಬಳು ಆರೇಳು ತಿಂಗಳಿನಿಂದ ನನಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದಳು ಎಂಬ ಮಾಹಿತಿ ವೈರಲ್ ಆಗಿರೋ ಡೆತ್ ನೋಟ್‌ನಲ್ಲಿ ಪತ್ತೆ ಆಗಿದೆ. ಆದರೆ, ಪೊಲೀಸರು ಜಾಲತಾಣಗಳಲ್ಲಿ ಹರಿದಾಡಿರುವ ಡೆತ್ ನೋಟ್ ನಿಜವಾಗಿರುವುದಲ್ಲ ಎಂದಿರುವ ಪೊಲೀಸರು ಕೇವಲ ಒಂದೆರಡು ಅಂಶಗಳ ಸಾಮ್ಯತೆ ಇದೆ ಎಂದಿದ್ದಾರೆ.
ಬಂಡೆ ಮಠದ ಸ್ವಾಮಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಒಂದೆಡೆ ಹನಿಟ್ರ್ಯಾಪ್ ಶಂಕೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಡೆತ್ ನೋಟ್‌ನಲ್ಲಿ ಕೆಲವರ ಹೆಸರುಗಳನ್ನು ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ. ಒಬ್ಬ ವ್ಯಕ್ತಿಯ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಪ್ರಕರಣ ಸಂಬಂಧ 306ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.












Click it and Unblock the Notifications