ದಶಪಥ ಹೆದ್ದಾರಿಯಲ್ಲಿ ಮಹಾಲಯ ಅಮಾವಾಸ್ಯೆ ದಿನವೇ ಭೀಕರ ಅಪಘಾತ: ಇಬ್ಬರ ದುರ್ಮರಣ
ರಾಮನಗರ, ಅಕ್ಟೋಬರ್ 14: ಮಹಾಲಯ ಅಮಾವಾಸ್ಯೆ ದಿನವೇ ಬೆಳ್ಳಂಬೆಳಗ್ಗೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದ ಬಳಿ ಘಟನೆ ನಡೆದಿದೆ.
ಬೆಂಗಳೂರಿನ ಪೀಣ್ಯ ಮೂಲದವರಾಗಿರುವ ರಾಜೇಶ್ (42) ಹಾಗೂ ಉಮಾ (35) ಮೃತ ದುರ್ದೈವಿಗಳು. ಘಟನೆಯಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು, ಮಕ್ಕಳು ಸೇರಿದಂತೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಒಮಿನಿ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಿಂಬದಿಗೆ ಒಮಿನಿ ಕಾರು ಅಪ್ಪಳಿಸಿದೆ.
ಅಪಘಾತದ ಭೀಕರತೆಗೆ ಮಹಿಳೆ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗುದ್ದಿದ ರಭಸಕ್ಕೆ ಒಮಿನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತ ಹಿನ್ನಲೆಯಲ್ಲಿ ಕೆಲಕಾಲ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ರಾಮನಗರ ಸಂಚಾರಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂ-ಮೈ ಹೆದ್ದಾರಿಯಲ್ಲಿ ಬಸ್-ಕಾರು ಅಪಘಾತ: 15ಕ್ಕೂ ಹೆಚ್ಚು ಜನರಿಗೆ ಗಾಯ
ಮೈಸೂರು: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಎರಡು ಬಸ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ದಸರಾ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ದೀಪಾಲಂಕಾರ ಮಾಡಲಾಗುತ್ತಿದ್ದು, ಶುಕ್ರವಾರವೂ ಎಲ್ಲೆಡೆ ತಾತ್ಕಾಲಿಕ ಕಬ್ಬಿಣದ ಕಮಾನು ಹಾಕಲಾಗುತ್ತಿತ್ತು. ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಖಾಸಗಿ ಬಸ್, ಕೆಎಸ್‌ಆರ್‌ಟಿಸಿ ಬಸ್ ಹಾಗೂ ಇನೋವಾ ಕಾರ್ ನಡುವೆ ಅಪಘಾತ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಖಾಸಗಿ ಬಸ್ ದಸರಾ ದೀಪಾಲಂಕಾರದ ಕಮಾನಿಗೆ ಗುದ್ದಿದ ಪರಿಣಾಮ ಕಮಾನು ಕುಸಿದು ರಸ್ತೆಯಲ್ಲಿದ್ದ ಕೆಎಸ್ಆರ್‌ಟಿಸಿ ಬಸ್ ಮೇಲೆ ಬಿದ್ದಿದೆ.
ಘಟನೆಯಲ್ಲಿ ಬಸ್‌ನಲ್ಲಿದ್ದ 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರಿಗೆ ಗುದ್ದಿದೆ. ಘಟನೆಯಲ್ಲಿ ಒಟ್ಟು 2 ಬಸ್ ಸೇರಿ 4 ವಾಹನಗಳಿಗೆ ಹಾನಿಯಾಗಿದೆ. ಅಲ್ಲದೇ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹಾಕಲಾಗಿದ್ದ ವಿದ್ಯುತ್ ಕಮಾನು ಕೂಡ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications