ಪರಿಷತ್ ಚುನಾವಣೆ: ಪರಸ್ಪರ ಆರೋಪಗಳ ವೇದಿಕೆಯಾದ ಕಾಂಗ್ರೆಸ್- ಜೆಡಿಎಸ್ ಪ್ರಚಾರ
ರಾಮನಗರ, ಡಿಸೆಂಬರ್ 8: ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಚುನಾವಣೆ ಕಣ ಕಳೆದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜೋಡೆತ್ತುಗಳ ನಡುವಿನ ಆರೋಪ ಪ್ರತ್ಯಾರೋಪಗಳ ವೇದಿಕೆಯಾಗಿದೆ.
ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಚುನಾವಣಾ ಪ್ರಚಾರದ ವೇದಿಕೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖರು ಪರಸ್ಪರ ಟೀಕೆಗಳ ಸುರಿಮಳೆ ಸುರಿಸುತ್ತಿದ್ದಾರೆ.
ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಪರ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದಲ್ಲೂ ಕುಟುಂಬ ರಾಜಕಾರಣವಿದೆ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಟೀಕಿಸಿದ್ದರು.

ಎಚ್‌ಡಿಕೆಯವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್, ಎಲ್ಲಾ ಪಕ್ಷದಲ್ಲಿ 2-3 ಜನ ಕುಟುಂಬದವರು ಇರುತ್ತಾರೆ. ಆದರೆ ಜೆಡಿಎಸ್ ಪಕ್ಷದಲ್ಲಿ ಇಡೀ ಕುಟುಂಬವೇ ಒಂದೊಂದು ಪೋಸ್ಟ್ ಹಂಚಿಕೊಂಡಿದ್ದಾರೆ ತಿರುಗೇಟು ನೀಡಿದರು.
ಜೆಡಿಎಸ್ ಕುಟುಂಬ ರಾಜಕಾರಣದ ಇದೆ ಎಂದು ನಾವು ಹೇಳುತ್ತಿಲ್ಲ, ಅವರ ಪಕ್ಷದ ಮುಖಂಡರೇ ಇದನ್ನು ಹೇಳುತ್ತಿದ್ದಾರೆ. ನಾವು ಅದನ್ನು ನಾವು ಜನರಿಗೆ ಮನವರಿಕೆ ಮಾಡುತ್ತಿದ್ದೇವೆ ಅಷ್ಟೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಮೇಕೆದಾಟು ಹೋರಾಟಕ್ಕೆ ದಿನಾಂಕ ನಿಗದಿಯಾಗಿಲ್ಲ
ಕಾಂಗ್ರೆಸ್ ನೇತೃತ್ವದಲ್ಲಿ ಮೇಕೆದಾಟು ಸ್ಥಳದಿಂದ ಬೆಂಗಳೂರು ಪಾದಯಾತ್ರೆ ಬಗ್ಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಮೇಕೆದಾಟು ಹೋರಾಟಕ್ಕೆ ದಿನಾಂಕ ನಿಗದಿ ಮಾಡಿಲ್ಲ, ಚುನಾವಣೆಯ ನಂತರ ದಿನಾಂಕ ಮತ್ತು ಹೋರಾಟದ ರೂಪುರೇಷೆ ಮಾಡಲಾಗುವುದು ಎಂದು ತಿಳಿಸಿದರು.
ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಸಿಎಲ್‌ಪಿ ಅಧ್ಯಕ್ಷರು ಕುಳಿತು ಚರ್ಚಿಸಿ ಮೇಕೆದಾಟು ಪಾದಯಾತ್ರೆಗೆ ದಿನಾಂಕ ನಿಗದಿ ಮಾಡುತ್ತಾರೆ. ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳೊಂದಿಗೆ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ಮೇಕೆದಾಟು ಯೋಜನೆಗೆ ಯಾವುದೇ ತಡೆಯಿಲ್ಲ
ಮೇಕೆದಾಟು ಅಣೆಕಟ್ಟು ಯೋಜನೆಗೆ ಯಾವುದೇ ತಡೆಯಿಲ್ಲ, ಕೇಂದ್ರ ಕಾವೇರಿ ಕಮಿಟಿ ಕೇಂದ್ರ ಅನುಮತಿ, ಯೋಜನೆಯ ಡಿಪಿಆರ್‌ಗೆ ಒಪ್ಪಿಗೆ ಹಾಗೂ ಪರಿಸರ ಇಲಾಖೆಯಿಂದ ಅನುಮತಿ ಬೇಕಿದ್ದು, ಅದು ಕೇಂದ್ರ ಸರ್ಕಾರದ ಕೈಯಲ್ಲಿ ಇದೆ ಎಂದರು.
ಕೇಂದ್ರದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಇದೆ. ರಾಜ್ಯದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಹಾಗಾಗಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಆದರೆ ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶನ ಮಾಡುತ್ತಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.
ಮೇಕೆದಾಟು ಅಣೆಕಟ್ಟು ಯೋಜನೆಯಿಂದ ಕೇವಲ ಕುಡಿಯಲಷ್ಟೆ ನೀರನ್ನು ಬಳಸಿಕೊಳ್ಳಲಾಗುತ್ತದೆ ಹಾಗೂ ವಿದ್ಯುತ್ ಉತ್ಪಾದನೆಗಷ್ಟೇ ಯೋಜನೆ ಅನುಕೂಲ. ಇದರಿಂದ ವ್ಯವಸಾಯಕ್ಕೆ ನೀರು ಬಳಸುವುದಿಲ್ಲ. ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಶೇಖರಣೆ ಮಾಡಲು ಅಣೆಕಟ್ಟೆಯ ಅವಶ್ಯಕತೆ ಇದೆ ಎಂದರು.
Recommended Video
ತಮಿಳುನಾಡಿಗೆ ಕಳೆದ ತಿಂಗಳು 30 ಟಿಎಂಸಿ ಹಾಗೂ ಈ ತಿಂಗಳು 10 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರಿದೆ. ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನವಾದರೆ ಅಂರ್ತಜಲ ಹೆಚ್ಚುವುದಲ್ಲದೇ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಕುಡಿಯುವ ನೀರಿನ ಬವಣೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.












Click it and Unblock the Notifications