ಈ ಚುನಾವಣೆ ಹಣದಿಂದ ನಡೆಯುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಕುಟುಂಬದಿಂದ ಆರೋಪ
ರಾಮನಗರ, ಮೇ, 10: ಇಂದು ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಗೆ ಭರದಿಂದ ಮತದಾನ ನಡೆಯುತ್ತಿದ್ದು, ರಾಜಕಾರಣಿಗಳು ಕುಟುಂಬ ಸಮೇತ ಬಂದು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಅದೇ ರೀತಿ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಮಾಜಿ ಸಿ.ಎಂ. ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ಮತಯಾಚನೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಈ ಚುನಾವಣೆ ಹಣದಿಂದ ನಡೆಯುತ್ತಿದೆ ಎಂದಿ ಆರೋಪಿಸಿದರು.
ಶಾಸಕಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ರೇವತಿ ನಿಖಿಲ್ ಜೊತೆ ಬಂದು ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಪ್ರಾಥಮಿಕ ಶಾಲಾ ಮತಗಟ್ಟೆ ಸಂಖ್ಯೆ 235ರಲ್ಲಿ ಮತದಾನ ಮಾಡಿದರು. ಈ ವೇಳೆ ಮಾಜಿ ಸಿ.ಎಂ. ಎಚ್.ಡಿ.ಕೆಗೆ ಮಾಗಡಿ ಶಾಸಕ ಎ.ಮಂಜುನಾಥ್ ಸಾಥ್ ನೀಡಿದರು.

ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?
ನಂತರ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಈ ಬಾರಿ ನನ್ನ ಅಭ್ಯರ್ಥಿಗಳಿಗೆ ಹಣ ಒದಗಿಸಲು ಆಗಿಲ್ಲ.ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಆದರೆ ಹಣದ ಕೊರತೆಯಿಂದಾಗಿ ನಮಗೆ ಹಿನ್ನೆಡೆಯಾಗಿದೆ. ಆದರೂ ಸಹ ಜೆಡಿಎಸ್‌ಗೆ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರ್ಥಿಕ ನೆರವು ನೀಡುವುದರಲ್ಲಿ ವಿಫಲಗೊಂಡಿರುವುದು ನನಗೆ ಆಘಾತವಾಗಿದೆ. ಕನಿಷ್ಠ 25ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಹಣದ ಕೊರತೆಯಿಂದ ನಮಗೆ ಹಿನ್ನೆಡೆಯಾಗಿದೆ. ಗೆಲ್ಲುವ ಕ್ಷೇತ್ರಗಳಲ್ಲಿ ಹಣದ ಕೊರತೆಯಿಂದ ಪೆಟ್ಟು ತಿಂದಿದ್ದೇನೆ. ಕೆಲವು ಅಭ್ಯರ್ಥಿಗಳು ಬುಕ್ ಆಗಿಬಿಟ್ಟಿದ್ದಾರೆ ಅಂತಾ ತಪ್ಪು ತಿಳಿಯಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಹಣದ ಕೊರತೆಯಿಂದ ಕೊನೆ ಹಂತದಲ್ಲಿ ಅಭ್ಯರ್ಥಿಗಳ ನಿರೀಕ್ಷೆ ಮುಟ್ಟಲು ಆಗಿಲ್ಲ. ನಮ್ಮ ಅಭ್ಯರ್ಥಿಗಳ ಮೇಲೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಬೇಡಿ. ಆದರೂ ನಾವು ಕಾಂಗ್ರೆಸ್, ಬಿಜೆಪಿಗಿಂತ ಮುಂದೆ ಇರುತ್ತೇವೆ. ಈ ಮೂಲಕ ಜೆಡಿಎಸ್‌ಗೆ ಬಹುಮತ ಬರಲಿದೆ.
ಇನ್ನು ಅತಂತ್ರ ಫಲಿತಾಂಶದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂದೆ ಅದರ ಬಗ್ಗೆ ಮಾತನಾಡುತ್ತೇನೆ. ಬಿಜೆಪಿ - ಕಾಂಗ್ರೆಸ್ ಹಣದಿಂದ ಚುನಾವಣೆ ನಡೆಸಿವೆ. ಈ ಬಾರಿಯ ಚುನಾವಣೆ ಹಣದಿಂದ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಹಾಗೆಯೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಾನೊಬ್ಬ ಯುವಕನಾಗಿದ್ದು, ನನಗೂ ಆತಂಕವಿದೆ. ಮುಂದೆ ಈ ವ್ಯವಸ್ಥೆಯನ್ನು ರಾಜ್ಯದ ಜನರು ಸರಿಪಡಿಸಬೇಕಿದೆ. ನಾವು ರಾಮನಗರದಲ್ಲಿ 25 ವರ್ಷಗಳಿಂದ ಸೇವೆ ಮಾಡಿದ್ದೇವೆ. ಜನರು ನಮ್ಮನ್ನು ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅನಿತಾ ಕುಮಾರಸ್ವಾಮಿ ಹೇಳಿದ್ದೇನು?
ಅನಿತಾ ಕುಮಾರಸ್ವಾಮಿ ಮಾತನಾಡಿ, ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಈ ಚುನಾವಣೆ ಹಣದಿಂದ ನಡೆಯುತ್ತಿದೆ. ಮುಂದೆ ಈ ಸಿಸ್ಟಮ್ ಬದಲಾವಣೆಗೆ ಎಲ್ಲಾ ಪಕ್ಷದವರು ಕೈಜೋಡಿಸಬೇಕಿದೆ. ಈ ಬಾರಿಯೂ ರಾಮನಗರ ಜಿಲ್ಲೆಯಲ್ಲಿ 3 ಕಡೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications