"ಏಸು ಪ್ರತಿಮೆ ವಿಚಾರದಲ್ಲಿ ಏನೇ ಆದರೂ ಜಿಲ್ಲಾಡಳಿತವೇ ಹೊಣೆ'
ರಾಮನಗರ, ಫೆಬ್ರವರಿ 25: ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ವಿಳಂಬ ನೀತಿ ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಮನಗರದ ಜಿಲ್ಲಾ ಪಂಚಾಯತಿ ಭವನದಿಂದ ಪಾದಯಾತ್ರೆಯಲ್ಲಿ ಹೊರಟ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರ ಮುನೇಶ್ವರ ಬೆಟ್ಟದಲ್ಲಿ ಭೂ ನಿಯಮಗಳನ್ನು ಗಾಳಿಗೆ ತೂರಿ ಏಸು ಪ್ರತಿಮೆ ನಿರ್ಮಾಣ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ಬಗ್ಗೆ ಹಲವು ದಿನಗಳ ಹಿಂದೆಯೇ ಪ್ರತಿಭಟನೆ ಮಾಡಿ ಕಪಾಲ ಬೆಟ್ಟದ ಜಾಗದಲ್ಲಿ ಶೇಖರಿಸಿಟ್ಟಿರುವ ಸಾಮಗ್ರಿಗಳನ್ನು ತರವುಗೊಳಿಸಬೇಕೆಂದು ಒತ್ತಾಯ ಮಾಡಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.

ನಮ್ಮ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಸಚಿವ ಆರ್.ಅಶೋಕ್ ಏಸು ಪ್ರತಿಮೆ ನಿರ್ಮಾದ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಆದರೆ ಜಿಲ್ಲಾಧಿಕಾರಿಗಳು ತುಂಬಾ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಜಾಗರಣಾ ವೇದಿಕೆಯ ಕಾರ್ಯಕರ್ತರು ಅರೋಪಿಸಿದ್ದಾರೆ.
ಮುಂದಿನ ಶುಕ್ರವಾರ ವಿವಾದಿತ ಬೆಟ್ಟದಲ್ಲಿ ಕ್ರೈಸ್ತರು ಧಾರ್ಮಿಕ ಚಟುವಟಿಕೆ ನಡೆಸಲು ಸಿದ್ದತೆ ನಡೆಸಿದ್ದಾರೆ. ಒಂದು ವೇಳೆ ಜಿಲ್ಲಾಡಳಿತ ಕ್ರೈಸ್ತರಿಗೆ ಧಾರ್ಮಿಕ ಆಚರಣೆಗೆ ಅನುವು ಮಾಡಿಕೊಟ್ಟರೆ ನಾವು ಅದನ್ನು ತಡೆಯುತ್ತೇವೆ, ಹಾಗೂ ಅಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಗೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಪ್ರಾಂತೀಯ ಕಾರ್ಯದರ್ಶಿ ಬಸವರಾಜ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಇನ್ನು ಸರ್ಕಾರ ಏಸು ಪ್ರತಿಮೆ ನಿರ್ಮಾಣದ ಬಗ್ಗೆ ಒಂದೂವರೆ ತಿಂಗಳ ಹಿಂದೆಯೇ ವರದಿ ಕೇಳಿದೆ. ಆದರೆ ಜಿಲ್ಲಾಧಿಕಾರಿ ಮಾತ್ರ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಅಲ್ಲದೇ ಬೆಟ್ಟದ ಜಾಗದ ಬಗ್ಗೆ ವರದಿ ನೀಡಲಾಗಿದೆ ಎಂದು ಹಾರಿಕೆಯ ಉತ್ತರ ನೀಡಿ ಜಿಲ್ಲಾಧಿಕಾರಿ ಅರ್ಚನಾ ಜಾರಿಕೊಳ್ಳುತ್ತಿದ್ದಾರೆ ಎಂದರು.











Click it and Unblock the Notifications