Assembly election 2023: ಪಂಚರತ್ನ ರಥಯಾತ್ರೆಯ ಯಶಸ್ಸು ಕಂಡು ಬಿಜೆಪಿ ನಾಯಕರಿಗೆ ಹತಾಶೆ ಮೂಡಿದೆ: ನಿಖಿಲ್
ರಾಮನಗರ, ಜನವರಿ, 03: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಪ್ರಾರಂಭಿಸಿರುವ ಪಂಚರತ್ನ ರಥಯಾತ್ರೆಗೆ ಜನರು ಅಭೂತಪೂರ್ವ ಬೆಂಬಲವನ್ನು ನೀಡುತ್ತಿದ್ದಾರೆ. ಇದನ್ನು ಕಂಡು ಬಿಜೆಪಿ ನಾಯಕರಿಗೆ ಹತಾಶೆ ಮೂಡಿದೆ ಎಂದು ರಾಜ್ಯ ಯುವ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ವ್ಯಂಗ್ಯವಾಡಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಪಂಚರತ್ನ ರಥಯಾತ್ರೆ ಪ್ರಾರಂಭವಾಗಿ 35 ದಿನಗಳು ಕಳೆದಿವೆ. ಈಗಾಗಲೇ ಬಯಲು ಸೀಮೆ ಹಾಗೂ ಹಳೆ ಮೈಸೂರು ಪ್ರಾಂತ್ಯದಲ್ಲಿ ಯಶಸ್ವಿಯಾಗಿ ರಥಯಾತ್ರೆ ಸಾಗಿದ್ದು, ಮುಂದೆ ಉತ್ತರ ಕರ್ನಾಟಕ ಭಾಗದಲ್ಲಿ ರಥಯಾತ್ರೆ ಮುಂದುವರೆಯಲಿದೆ. ಪಂಚರತ್ನ ರಥಯಾತ್ರೆ ಸಂಚಾರ ಮಾಡಿರುವ ಕಡೆ ಜನರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಂಚರತ್ನ ರಥಯಾತ್ರೆ ತಮ್ಮ ಗ್ರಾಮಕ್ಕೆ ಮಧ್ಯರಾತ್ರಿ ಸಮಯದಲ್ಲಿ ಬಂದಾಗಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ಕಂಡ ಬಿಜೆಪಿ ನಾಯಕರಿಗೆ ಹತಾಶೆ ಮೂಡಿದೆ ಎಂದರು.
ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಗೊತ್ತಿಲ್ಲದಿದ್ದರೆ, ಕ್ಷೇತ್ರದ ಜನರಲ್ಲಿ ಕೇಳಿ ತಿಳಿದುಕೊಳ್ಳಲಿ. ಅಶ್ವತ್ಥ್ ನಾರಾಯಣ್ ಅವರಿಗೆ ನಿನ್ನೆ ಮೊನ್ನೆ ರಾಮನಗರದ ವಿಳಾಸ ಗೊತ್ತಾಗಿದೆ ಎಂದು ಟಾಂಗ್ ನೀಡಿದರು. ತಾಲೂಕು ಕೇಂದ್ರವಾಗಿದ್ದ ರಾಮನಗರವನ್ನು ಜಿಲ್ಲಾಕೇಂದ್ರವಾಗಿ ಮಾಡಿದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಯವರು. ಕ್ಷೇತ್ರದಲ್ಲಿ ನಾವು ಏನು ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಾಹಿತಿ ಕೊರತೆ ಇದ್ದರೆ ಜನಸಾಮಾನ್ಯರ ಬಳಿ ಕೇಳಿ ಪಡೆದುಕೊಳ್ಳಲಿ ಎಂದರು.

ಅಹಂನಿಂದ ಮಾತನಾಡುವುದು ಸೂಕ್ತ ಅಲ್ಲ
ಅಮಿತ್ ಶಾ ಜೀ ಅವರು ಹಳೆ ಮೈಸೂರು ಭಾಗದಲ್ಲಿ ಅಹಂನಿಂದ ಮಾತನಾಡುವುದು ಸೂಕ್ತ ಅಲ್ಲ. ಜನರು ಸಂಕಷ್ಟದಲ್ಲಿದ್ದಾಗ ಯಾರು ನಮ್ಮ ಜೊತೆ ಇದ್ದಾರೆ, ಯಾವ ಪಕ್ಷ ನಮ್ಮ ಬೆಂಬಲವಾಗಿ ನಿಂತಿದೆ ಎಂಬುದು ಜನರ ಮನಿಸ್ಸಿನಲ್ಲಿ ಇದೆ. ವಿಶೇಷವಾಗಿ ಹಳೆ ಮೈಸೂರಿನ ಜನರು ಮಾನ್ಯ ದೇವೇಗೌಡರು, ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷವನ್ನು ಕೈ ಹಿಡಿಯುವ ಕೆಲಸ ಮಾಡಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಅಮಿತ್ ಶಾ ಅವರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎನ್ನುವ ಆತಂಕ ನನ್ನನ್ನು ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಮಿತ್ ಶಾ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ
ಮಾಜಿ ಪ್ರಧಾನಿಗಳು ಹಿರಿಯರಾದ ಎಚ್.ಡಿ.ದೇವೇಗೌಡರ ಬಗ್ಗೆ ಹಗುರವಾಗಿ ಮಾತಾನಾಡುವ ಮುಂಚೆ ಅಮಿತ್ ಶಾ ಅವರು ತಿಳಿದುಕೊಳ್ಳಬೇಕು. ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಅರಿವಿರಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿ ದೇವೇಗೌಡರನ್ನ ಪ್ರೀತಿಯಿಂದ ಕಾಣುತ್ತಾರೆ. ಆ ಪ್ರೀತಿಯನ್ನು ದೇವೇಗೌಡರು ಸಂಪಾದನೆ ಮಾಡಿದ್ದಾರೆ. ಅವರ ಬಗ್ಗೆ ಯಾಕೆ ಅಮಿತ್ ಶಾ ಮಾತಾಡಿದರು ಗೊತ್ತಾಗುತ್ತಿಲ್ಲ? ಅವರು ರಾಜಕೀಯ ಮಾಡಲಿ. ಆದರೆ ಮಾಜಿ ಪ್ರಾಧಾನಿ ದೇವೇಗೌಡರ ಬಗ್ಗೆ ಲಘುವಾಗಿ ಮಾತಡಾವುದನ್ನು ರಾಜ್ಯದ ಜನರು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಗರಂ
ರಾಮದೇವರ ಬೆಟ್ಟವನ್ನು ಅಯೋದ್ಯೆ ಮಾದರಿಯಲ್ಲಿ ನಿರ್ಮಾಣ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಮೂರುವರೆ ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇತ್ತು. ಅದರೆ ಅಧಿಕಾರ ಕೊನೆ ದಿನಗಳಲ್ಲಿ ಅದನ್ನ ಪ್ರಸ್ತಾಪ ಮಾಡುತ್ತಾ ಇದಾರೆ. ಬಿಜೆಪಿ ನಾಯಕರಿಗೆ ಇಚ್ಛಾಶಕ್ತಿ ಇದ್ದಿದ್ದರೆ ಯಾವತ್ತೋ ಕಟ್ಟಬಹುದಿತ್ತು. ಚುನಾವಣೆ ಹತ್ತಿರ ಇಟ್ಟುಕೊಂಡು ಜನರ ಮತ ಸೆಳೆಯುವ ಹುನ್ನಾರ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತಕ್ಕೆ ಬಂದಾಗಿನಿಂದ ಸಂಘರ್ಷಗಳು ಹೆಚ್ಚಾಗುತ್ತಿವೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಹಿಂದೂ, ಮುಸಲ್ಮಾನ್, ಕ್ರೈಸ್ತರು ಅಣ್ಣ ತಮ್ಮಂದಿರ ರೀತಿ ಬದುಕುತ್ತಿದ್ದೇವೆ. ಆದರೆ ಬಿಜೆಪಿಯವರು ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿರುವ ಮನಸ್ಥಿತಿ ಇಟ್ಟುಕೊಂಡಿದ್ದಾರೆ. ಇದು ಜಾಸ್ತಿ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.

ಶ್ರೀಗಳ ನಿಧನಕ್ಕೆ ನಿಖಿಲ್ ಸಂತಾಪ
ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯವಾದ ಹಿನ್ನೆಲೆಯಲ್ಲಿ, ಶ್ರೀಗಳ ನಿಧನಕ್ಕೆ ನಿಖಿಲ್ ಕುಮಾರಸ್ವಾಮಿ ಸಂತಾಪ ಸೂಚಿಸಿದರು. ಶೀಗಳ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಅಂತಿಮ ದರ್ಶಕ್ಕೆ ಕುಮಾರಸ್ವಾಮಿಯವರು ತೆರಳಿದ್ದಾರೆ. ಅಲ್ಲದೇ ನಾನು ಒಂದು ಬಾರಿ ಶ್ರೀಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದೆ ಎಂದು ಸ್ಮರಿಸಿಕೊಂಡರು.












Click it and Unblock the Notifications