ಎಚ್‌ಡಿಕೆ ಆರೋಗ್ಯ ಚೇತರಿಕೆಗಾಗಿ ಕಾಳಿಕಾಂಬೆ ಸನ್ನಿಧಿಯಲ್ಲಿ ಅಭಿಮಾನಿಗಳಿಂದ ಉರುಳು ಸೇವೆ
ರಾಮನಗರ, ಜುಲೈ 18: ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕರಾದ ಎಚ್.ಡಿ.ಕುಮಾರಸ್ವಾಮಿ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಪಟ್ಟಣದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಉರುಳು ಸೇವೆ ಸಲ್ಲಿಸುವ ಮೂಲಕ ತಮ್ಮ ಅಭಿಮಾನ ಮೆರೆದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲೆಂದು ಚನ್ನಪಟ್ಟಣದ ಶೀ ಕಾಳಿಕಾಂಬ ದೇವಿಗೆ ಅರಸಿನ ಕುಂಕುಮದಿಂದ ಅಲಂಕೃತಗೊಳಿಸಿ ವಿಶೇಷ ಪೂಜೆ ಸಲ್ಲಿಸಿದಲ್ಲದೆ, ಉರುಳು ಸೇವೆ ನಸಡೆಸುವ ಮೂಲಕ ಜೆಡಿಎಸ್ ಮುಖಂಡರು ಕಾರ್ಯಕರ್ತರು ಎಚ್‌ಡಿಕೆ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಎಚ್‌ಡಿಕೆಯವರ ಸ್ವಕ್ಷೇತ್ರ ಚನ್ನಪಟ್ಟಣದ ಕೋಟೆ ಬೀದಿಯಲ್ಲಿರುವ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು, ಮುಖಂಡರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಸದಾ ಜನರೊಂದಿಗೆ ಒಡನಾಟ ಇಟ್ಟು ಕೊಂಡವರು ಎಚ್.ಡಿ. ಕುಮಾರಸ್ವಾಮಿಯವರು ಶೀಘ್ರ ಗುಣಮುಖರಾಗಿ ನಾಡಿನ ನೊಂದವರ ಧ್ವನಿಯಾಗಿರಲಿ ಎಂದು ಹರಸಿದ ಅಭಿಮಾನಿಗಳು, ಕುಮಾರಸ್ವಾಮಿ ಆರೋಗ್ಯ, ಆಯುಷ್ ವೃದ್ಧಿಯಾಗಲೆಂದು ದೇವಿಗೆ ವಿಶೇಷವಾದ ಹರಸಿನ ಕುಂಕುಮದಿಂದ ವಿಶೇಷ ಪೂಜೆ ಸಲ್ಲಿಕೆ ಮಾಡಿ ನಂತರ, ಮತ್ತೊಮ್ಮೆ ಎಚ್‌ಡಿಕೆ ಸಿಎಂ ಆಗಲೆಂದು ಕೋರಿಕೆ ಸಲ್ಲಿಸಿ ಉರುಳು ಸೇವೆ ಸಲ್ಲಿಸಿದರು.

ಉರಳು ಸೇವೆ ಸಲ್ಲಿಸಿ ಮಾತನಾಡಿದ ತಾಲ್ಲೂಕು ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ನಮ್ಮ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಹಿಂದುಳಿದವರು, ರೈತರು ಸೇರಿದಂತೆ ಬಡವರ ಬಗ್ಗೆ ಅನುಭೂತಿ ಹೊಂದಿರುವವರು. ಅಲ್ಲದೇ ಎಲ್ಲ ವರ್ಗದ ಒಳಿತಿಗಾಗಿ ಸದಾ ಕಾಲ ದುಡಿಯುತ್ತಾ ಹೋರಾಟ ನಡೆಸುವವರು. 2 ಬಾರಿ ಸಿಎಂ ಆಗಿ ಜನಪರ ಆಡಳಿತ ನೀಡಿದ ತಮ್ಮ ನೆಚ್ಚಿನ ನಾಯಕ ಶೀಘ್ರ ಗುಣಮುಖರಾಗಿ ಸಾರ್ವಜನಿಕ ಸೇವೆಗೆ ಮರಳಲಿ ಎಂದು ಹಾರೈಸಿದರು.
ಮಹಿಳಾ ಮುಖಂಡರಾದ ರೇಖಾ ಉಮಾಶಂಕರ್ ಮಾತನಾಡಿ, "ಈಗಾಗಲೇ ಎರಡು ಬಾರಿ ರಾಜ್ಯದ ಚುಕ್ಕಾಣಿ ಹಿಡಿದು ತಾನು ನೂಂದವರ, ಬಡವರ ಹಾಗೂ ಧ್ವನಿ ಇಲ್ಲದವರ ಪರ ಎಂಬುದನ್ನು ತಮ್ಮ ಕೆಲಸಗಳ ಮೂಲಕ ಕುಮಾರಸ್ವಾಮಿ ಸಾಬೀತು ಮಾಡಿದ್ದಾರೆ. ಎಚ್‌ಡಿಕೆಯವರು ಅನಾರೋಗ್ಯಕ್ಕೆ ತುತ್ತಾಗಿರುವುದು ನಮಗೆ ನೋವು ತಂದಿದೆ. ಹಾಗಾಗಿ ಅವರ ಬೇಗ ಗುಣಮುಖರಾಗಲಿ ಎಂದು ನಗರದ ಶಕ್ತಿ ದೇವತೆ ಶ್ರೀಕಾಳಿಕಾಂಬ ದೇವತೆಗೆ ಪ್ರಾರ್ಥನೆ ಸಲ್ಲಿಸಿದ್ದೇವೆ," ಎಂದರು.

ಇನ್ನೂ ಕೊರೊನಾ ಸೋಂಕಿಗೆ ತುತ್ತಾಗಿರುವ ಕುಮಾರಸ್ವಾಮಿ ಸದ್ಯ ಮನೆಯಲ್ಲೇ 10 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ವಿಶ್ರಾಂತಿಯಲ್ಲಿರುವ ಅವರು ಓದು, ಸಿನಿಮಾಗಳನ್ನು ನೋಡುವ ಮೂಲಕ ಸಮಯ ಕಳೆಯುತ್ತಿದ್ದಾರೆ. ಸೋಮವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ತಮಿಳಿನ ನೈಜ ಕಥೆಯಾಧಾರಿತ ಜೈಭೀಮ್ ಮತ್ತು ಮಲೆಯಾಳಂನ ಜನಗಣಮನ ಸಿನಿಮಾವನ್ನು ನೋಡಿ, ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications