ಜಮೀರ್ 'ಕುಳ್ಳ' ಹೆಚ್‌ಡಿಕೆ 'ಕಾಲಿಯಾ' ಇಬ್ಬರೂ ಸ್ನೇಹಿತರು, ನೀವ್ಯಾಕೆ ಮಾದ್ಯಮದಲ್ಲಿ ಹೈಲೇಟ್ ಮಾಡಿದ್ರಿ? ಡಿಕೆ ಸುರೇಶ್ ಪ್ರಶ್ನೆ
ಬೆಂಗಳೂರು ನವೆಂಬರ್ 15: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಸೋಲಿನ ಸ್ಫೋಟಕ ಹೇಳಿಕೆ ಬೆನ್ನಲ್ಲೆ ಮಾಜಿ ಸಂಸದ ಡಿಕೆ ಸುರೇಶ್ ದಿಢೀರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸಿಪಿ ಯೋಗೇಶ್ವರ್ ಹೇಳಿಕೆಗೆ ಸ್ಪಷ್ಟನೆ ನೀಡಿದ ಡಿಕೆ ಸುರೇಶ್ ಅವರು ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಸುರೇಶ್, 'ಸಿಪಿ ಯೋಗೇಶ್ವರ್ ಅವರು ಸಾಕಷ್ಟು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಅವರ (ಜೆಡಿಎಸ್) ಪರವಾಗಿರಲಿದೆ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ತಂತ್ರಗಾರಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಚುನಾವಣೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು ಹಾಗೂ ಆಪ್ತರು ತುಂಬಾ ವಿಶ್ವಾಸದಲ್ಲಿ ಇದ್ದಾರೆ. ಸಿಪಿ ಯೇಗೇಶ್ವರ್ ಹೇಳಿಕೆಯ ಹಿಂದೆ ಹಲವಾರು ಕಾರಣ ಇರಬಹುದು. ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸಾಲ ಮಾಡಬಹುದು ಎನ್ನುವ ದೃಷ್ಟಿಯಿಂದ ಹೇಳಿರಬಹುದು. ಫಲಿತಾಂಶ ಕಾಂಗ್ರೆಸ್ ಪಕ್ಷದ ಪರವಾಗಿರುತ್ತದೆ ಎನ್ನುವ ವಿಶ್ವಾಸ ನನಗಿದೆ' ಎಂದರು.

ಚನ್ನಪಟ್ಟಣ ಫಲಿತಾಂಶದ ಮೇಲೆ ಜಮೀರ್ ಹೇಳಿಕೆ ಪರಿಣಾಮ
ಇನ್ನೂ ಚನ್ನಪಟ್ಟಣ ಫಲಿತಾಂಶದ ಮೇಲೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ಪರಿಣಾಮ ಬೀರಿದಿಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆ ಸುರೇಶ್ ಅವರು, 'ಜಮೀರ್ ಅಹ್ಮದ್ ಹಾಗೂ ಹೆಚ್‌ಡಿ ಕುಮಾರಸ್ವಾಮಿ ಇಬ್ಬರೂ ಮೊದಲನಿಂದಲೂ ತುಂಬಾ ಆಪ್ತಸ್ನೇಹಿತರು. ಜಮೀರ್ ಅಹ್ಮದ್ ಅವರ ಹೇಳಿಕೆ ಹೊಸದೇನು ಅಲ್ಲ. ಈ ಹಿಂದೆ ಕೂಡ ಜಮೀರ್ ಅಹ್ನದ್ ಈ ಮಾತನ್ನು ಸುಮಾರು ಬಾರಿ ಹೇಳಿದ್ದರು. ಜನರ ಮೇಲೆ ಪ್ರಭಾವ ಬೀರಬೇಕು ಎನ್ನುವ ಉದ್ದೇಶದಿಂದಲೇ ಅವರ ಹೇಳಿಕೆಯನ್ನು ಮಾಧ್ಯಮದಲ್ಲಿ ಹೆಚ್ಚೆಚ್ಚು ಪ್ರಸಾರ ಮಾಡಲಾಗಿದೆ' ಎಂದು ಆಕ್ರೋಶ ಹೊರಹಾಕಿದರು.
ಜಮೀರ್ ಅಹ್ಮದ್ ಹೊಸದಾಗಿ ಹೆಚ್‌ಡಿ ಕುಮಾರಸ್ವಾಮಿ ಅವರನ್ನು 'ಕರಿಯಾ' ಅಂದಿದ್ದರೆ ನಾನು ಒಪ್ಪುತ್ತಿದ್ದೆ. ಆದರೆ ಈ ಹಿಂದೆ ಕೂಡ ಅವರು ಎರಡು ಮೂರು ಸಲ ಹೇಳಿದ್ದರು. ಮಧ್ಯಮದವರು ಆಗ ಹೈಲೆಟ್ ಮಾಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ಹೇಳಿಕೆಯನ್ನು ಹೈಲೆಟ್ ಮಾಡಿದ್ರು. ಯಾಕೆ? ನಮ್ಮ ಪಕ್ಷದ ಮೇಲೆ ಯಾಕೆ ಮಾಧ್ಯಮದವರಿಗೆ ಕೋಪ ನನಗೆ ಗೊತ್ತಿಲ್ಲ. ಈ ಹಿಂದೆ ಕೂಡ ಜಮೀರ್ ಮಾತನಾಡಿದ್ದರು. ಆಗ ಕಡಿವಾಣ ಹಾಕಬೇಕಿತ್ತು. ಆಗ ನೀವು ಇಷ್ಟು ಪ್ರಶ್ನೆ ಮಾಡಲಿಲ್ಲ. ಈ ವಿಚಾರವನ್ನು ಇಷ್ಟೊಂದು ಆಗ ತೋರಿಸಿದ್ದರೆ, ಬಹುಶ: ಜಮೀರ್ ಮತ್ತೆ ಆ ಹೇಳಿಕೆಯನ್ನು ನೀಡುತ್ತಿರಲಿಲ್ಲ. ಮಾಧ್ಯಮದವರು ಚುನಾವಣಾ ಸಂದರ್ಭದಲ್ಲೇ ಈ ಹೇಳಿಕೆಯನ್ನು ಪದೇ ಪದೇ ತೋರಿಸಿದ್ದಾರೆ ಎಂದು ಕಿಡಿ ಕಾರಿದರು.

ಜಮೀರ್ 'ಕುಳ್ಳ' ಹೆಚ್‌ಡಿ ಕುಮಾರಸ್ವಾಮಿ 'ಕಾಲಿಯಾ'
ಜಮೀರ್ 'ಕುಳ್ಳ' ಹೆಚ್‌ಡಿ ಕುಮಾರಸ್ವಾಮಿ 'ಕಾಲಿಯಾ' ಇಬ್ಬರು ಸ್ನೇಹಿತರು ಮಾತನಾಡಿಕೊಳ್ಳುತ್ತಾರೆ. ಅವರಿಗೆ ನಾವು ಮಾತನಾಡುವುದು, ನಮಗೆ ಅವರು ಮಾತನಾಡುವುದು ಇದ್ದಿದ್ದೇ. ಆದರೆ ನೀವು ಯಾಕೆ ಚುನಾವಣೆ ಸಂದರ್ಭದಲ್ಲಿ ಜಮೀರ್ ಹೇಳಿಕೆಯನ್ನು ಹೈಲೆಟ್ ಮಾಡಿದ್ರಿ ಅಂತ ಮಾಧ್ಯಮದವರಿಗೆ ಡಿಕೆ ಸುರೇಶ್ ಪ್ರಶ್ನೆ ಮಾಡಿದ್ದಾರೆ.
ಚುನಾವಣಾ ದೃಷ್ಟಿಯಿಂದ ಮಾಧ್ಯಮದವರು ಜಮೀರ್ ಹೇಳಿಕೆಯನ್ನು ಹೆಚ್ಚಾಗಿ ತೋರಿಸಿದ್ದಾರೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಮಾಧ್ಯಮದವರ ಮೌಲ್ಯಗಳು ಕೂಡ ಪ್ರಶ್ನೆ ಮಾಡುವ ಪರಿಸ್ಥಿತಿ ಬಂದಿವೆ. ನಮ್ಮನ್ನ ಅವರು ಬೈಯ್ಯುವುದು ಅವರನ್ನು ನಾವು ಬೈಯ್ಯುವುದು ಸರ್ವೇಸಾಮಾನ್ಯ. ನೀವು ಚುನಾವಣೆ ಸಂದರ್ಭದಲ್ಲೇ ಜಮೀರ್ ಹೇಳಿದ್ದನ್ನು ಹೈಲೇಟ್ ಮಾಡಿದ್ರಿ. ಇದು ತಪ್ಪಲ್ವಾ? ಕಠಿಣವಾಗಿ ಅವತ್ತೇ ಮಾತನಾಡಿಲ್ಲ ಮಾಧ್ಯಮದವರು. ಈಗ ಯಾಕೆ ತೋರಿಸ್ತೀರಿ..? ಮಾಧ್ಯಮಗಳು ನಮ್ಮನ್ನು ತಿದ್ದುತ್ತವೆ ಅಂತ ನಾವು ನಿಮ್ಮನ್ನ ನಂಬುತ್ತೇವೆ. ಆದರೆ ನೀವು ಹಾಗೆ ಮಾಡುತ್ತಿಲ್ಲ.

ಇತ್ತೀಚೆನ ದಿನಗಳಲ್ಲಿ ತಿದ್ದುವ ಬದಲಾವಣೆ ತರುವ ಕೆಲಸ ಆಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲೇ ಮಾತ್ರ ಒಳಿತಿನ ಕೆಲಸಗಳನ್ನು ತೋರಿಸುತ್ತೀರಾ ಯಾಕೆ? ಮಾಧ್ಯಮಗಳು ನೈತಿಕತೆ ಕಳೆದುಕೊಳ್ಳುತ್ತಿವೆ. ಚುನಾವಣೆ ದಿನ ಮಧ್ಯಾಹ್ನ ಮೂರು ಗಂಟೆವರೆಗೂ ಜಮೀರ್ ಹೇಳಿಕೆಯನ್ನು ತೋರಿಸಿದ್ದೀರಿ ಯಾಕೆ? ಆಮೇಲೆ ಅದರ ಬಗ್ಗೆ ಸುದ್ದಿನೇ ಇಲ್ಲ. ಯಾರ ಪರವಾಗಿ ಇದೆಲ್ಲಾ? ಎಂದು ಡಿಕೆ ಸುರೇಶ್ ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ ಸತ್ಯ ಹರಿಶ್ಚಂದ್ರನ ವಂಶದ ಒಂದು ಭಾಗ
ಗೆಲುವಿನ ಸಂಭ್ರಮದಲ್ಲಿ ಜೆಡಿಎಸ್ ಇದೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್, 'ಜೆಡಿಎಸ್ ಮತ್ತು ಬಿಜೆಪಿ ಸತ್ಯ ಹರಿಶ್ಚಂದ್ರನ ವಂಶದ ಒಂದು ಭಾಗ. ಅವರು ಹೇಲಿದ್ದು ಎಲ್ಲವೂ ನಿಜವಾಗುವುದಿಲ್ಲ. ನಮಗೆ ಗೆಲುವಿನ ವಿಶ್ವಾಸ ಇದೆ. ನಾನು ಕಾರ್ಯಕರ್ತ ಮತದಾರರನ್ನು ಎಂದೂ ಕೂಡ ಬಿಟ್ಟುಕೊಟ್ಟಿಲ್ಲ. ಮುಂದೆ ಕೂಡ ಬಿಡುವುದಿಲ್ಲ. ಅವರು ಕಾರ್ಯಕರ್ತರಿಂದ ಬಂದ ಮಾಹಿತಿ ನೀಡಿದ್ದಾರೆ. ನಾನು ಹಾಕಿರುವುದು ಒಂದು ಮತ. ಅದಷ್ಟೇ ನನಗೆ ಗೊತ್ತು' ಎಂದರು.
ಜಮೀರ್ ಮಾತುಗಳನ್ನು ತಿರುಚಲಾಗಿದೆ..
ಮಾತುಗಳು ಆಡುವಾಗ ತಪ್ಪುಗಳಾಗುತ್ತವೆ. ಅವತ್ತೇ ನೀವು ಪ್ರಶ್ನೆ ಮಾಡಿದ್ದರೆ ಇವತ್ತು ಅವರು ಹೆಚ್‌ಡಿ ಕುಮಾರಸ್ವಾಮಿ (ಕರಿಯಾ)ಗೆ ಆ ಮಾತು ಆಡ್ತಾಯಿರಲಿಲ್ಲ. ಚುನಾವಣೆ ದಿನವೇ ಯಾಕೆ ಜಮೀರ್ ಮಾತನ್ನು ವೈಭವೀಕರಿಸಿದ್ರಿ? ನಿಮ್ಮ ಸ್ನೇಹಿತರು ಕೂಡ ನೀವು ಕಪ್ಪಗಿದ್ದರೆ ಕರಿಯಾ ಅಂತ ಕರೆಯೋದಿಲ್ವಾ? ಅವರ ಹೇಳಿಕೆ ತಿರುಚಿದ್ದಾರೆ ಎಂದು ಕಿಡಿ ಕಾರಿದರು.
ಕೆಲಸ ಮಾಡಿದವರಿಗೆ ಗೌರವ ಇಲ್ಲ
ಇಲ್ಲಿ ಕೆಲಸಕ್ಕೆ, ಸಮಾಜ ಸೇವೆಗೆ ಬೆಲೆ ಇಲ್ಲ. ಇಲ್ಲಿ ಜಾತಿ, ಹಣ, ರಾಜಕೀಯ ಬೇಕಿದೆ. ಕೆಲಸ ಮಾಡಿ ಮತ ಕೇಳಬಾರದು. ಜಾತಿ ಮಾಡಬೇಕು, ಹಣ ಕೊಡಬೇಕು, ಸುಳ್ಳು ಹೇಳಬೇಕು ಅದಕ್ಕೆ ಮಾತ್ರ ಇಲ್ಲಿ ಬೆಲೆ. ನನ್ನ ವೈಯಕ್ತಿಕ ಅಭಿಪ್ರಾಯ ನಾನು ಹೇಳಿದೆ. ದಯವಿಟ್ಟು ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮಿಸಿ ಎಂದರು.












Click it and Unblock the Notifications