ಕರ್ನಾಟಕದ ಹಕ್ಕನ್ನು ಪ್ರಶ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು: ಸಂಸದ ಡಿ.ಕೆ. ಸುರೇಶ್
ರಾಮನಗರ, ಡಿಸೆಂಬರ್ 21: "ಎಂಇಎಸ್‌ನವರು ಏನು ಮಾಡಿದರೂ ಕನ್ನಡ ವಿರೋಧಿ ಧೋರಣೆ ಇರುತ್ತದೆ. ಹೀಗಾಗಿ ಎಂಇಎಸ್ ಕೃತ್ಯವನ್ನು ಖಂಡಿಸಬೇಕಾಗುತ್ತದೆ. ಕರ್ನಾಟಕದಲ್ಲಿದ್ದುಕೊಂಡು ಕನ್ನಡವನ್ನು ವಿರೋಧಿಸುವವರ ಮೇಲೆ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು," ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಎಂಇಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿಯ ಪುರಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಆಗಮಿಸಿದ್ದ ವೇಳೆ ಅವರು ಮಾತನಾಡಿದರು.
"ಕರ್ನಾಟಕದ ಹಕ್ಕನ್ನು ಪ್ರಶ್ನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮವಹಿಸಬೇಕು. ಈ ಬಗ್ಗೆ ಸಿಎಂ ಈಗಾಗಲೇ ತಿಳಿಸಿದ್ದಾರೆ. ಆದರೆ ಅದನ್ನು ತ್ವರಿತವಾಗಿ ಕ್ರಮವಹಿಸಬೇಕು, ಅದು ನಮ್ಮ ಧರ್ಮ," ಎಂದರು.

"ಇನ್ನು ಎಂಇಎಸ್ ಸಂಘಟನೆ ಬ್ಯಾನ್ ವಿಚಾರವಾಗಿ ನಾನು ಮಾತನಾಡಲ್ಲ. ಆದರೆ ಯಾವುದೇ ಸಂಘಟನೆ ನಮ್ಮ ನಾಡಿನ ವಿರುದ್ಧ ಇದ್ದರೆ ಸರ್ಕಾರ ಕ್ರಮವಹಿಸಲಿ. ಯಾವುದೇ ಸಂಘಟನೆ ಇರಲಿ, ಯಾರೇ ಇರಲಿ ಅದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು," ಎಂದು ಹೇಳಿದರು.
"ಎಂಇಎಸ್ ಸಂಘಟನೆಯನ್ನು ನಿಷೇಧಿಸುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ, ಬೆಳಗಾವಿ ಕರ್ನಾಟಕದ ಒಂದು ಭಾಗವಾಗಿದೆ. ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಿ ಅಭಿವೃದ್ಧಿಯಾಗುತ್ತಿರುವುದರಿಂದ ಕನ್ನಡವನ್ನು ಪ್ರೋತ್ಸಾಹಿಸಬೇಕು, ಕನ್ನಡ ಪರ ಎಲ್ಲಾ ಭಾಷೆಯ ಜನರು ನಿಲ್ಲಬೇಕು," ಎಂದು ಡಿ.ಕೆ. ಸುರೇಶ್ ತಿಳಿಸಿದರು.
ಸಿ.ಟಿ. ರವಿಯನ್ನು ಆಸ್ಪತ್ರೆಗೆ ಸೇರಿಸಬೇಕು
ಇನ್ನು ಕಾಂಗ್ರೆಸ್ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ.ಸುರೇಶ್, ಸಿಟ್ಟಿನ ಬರದಲ್ಲಿ ನಿಮ್ಹಾನ್ಸ್ ಆಸ್ಪತ್ರೆ ಎನ್ನುವ ಬದಲು ವಿಲ್ಸನ್ ಗಾರ್ಡನ್‌ಗೆ ಸೇರಿಸಬೇಕು ಎಂದರು.

ಸಿ.ಟಿ. ರವಿ ಒಂದು ರಾತ್ರಿ ಒಂದು ರೀತಿ ಮಾತನಾಡುತ್ತಾರೆ, ಮತ್ತೊಂದು ರಾತ್ರಿ ಮತ್ತೊಂದು ರೀತಿಯಲ್ಲಿ ಮಾತನಾಡುತ್ತಾರೆ. ಅವರಿಗೆ ಯಾವುದೇ ಕೀ ಇಲ್ಲ, ಕೀ ಇಲ್ಲದೇ ಆಡುತ್ತಾರೆ. ಕೀ ಇಲ್ಲದವರ ಬಗ್ಗೆ ಏನು ಹೇಳಲು ಸಾಧ್ಯ. ಅವರನ್ನು ವಿಲ್ಸನ್ ಗಾರ್ಡನ್‌ಗೆ ಕಳುಹಿಸಬೇಕಷ್ಟೇ ಎಂದರು.
ಸಿ.ಟಿ. ರವಿಗೆ ತಿಳುವಳಿಕೆ ಸ್ವಲ್ಪ ಕಡಿಮೆ. ಅವರ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯ ಘನತೆಗೆ ತಕ್ಕ ರೀತಿ ನಡೆದುಕೊಳ್ಳಬೇಕು. ಸಿ.ಟಿ. ರವಿಯ ಹೇಳಿಕೆಗಳನ್ನು ನೋಡುತ್ತಿರುವ ಪಕ್ಷದ ವರಿಷ್ಠರು ಯಾವುದಾದರೂ ಆಸ್ಪತ್ರೆಗೆ ಸೇರಿಸುವುದು ಒಳ್ಳೆಯದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಕಿಡಿಕಾರಿದರು.
ಇದಲ್ಲದೆ ಎಐಸಿಸಿ ಹೊಸ ಜವಾಬ್ದಾರಿ ನೀಡಿದೆ. ನಮ್ಮ ಪಕ್ಷದ ಸೋನಿಯಾ ಗಾಂಧಿಯವರು ಹೊಸ ಸಮಿತಿ ರಚನೆ ಮಾಡಿದ್ದಾರೆ. ಆದರಲ್ಲಿ ನನ್ನನ್ನು ಗುರುತಿಸಿ ಹುದ್ದೆ ಕೊಟ್ಟಿರುವುದರಿಂದ ಎಲ್ಲಾ ಸಂಸದರ ಒಡನಾಡಿಯಾಗಿ ಕೆಲಸ ಮಾಡುತ್ತೇನೆ ಎಂದು ಇದೇ ವೇಳೆ ಅವರು ತಿಳಿಸಿದರು.
ಜನವರಿಯಲ್ಲಿ ಮೇಕೆದಾಟು ಹೋರಾಟ
ಜನವರಿ 9ರಿಂದ ಮೇಕೆದಾಟು ಹೋರಾಟ ಪ್ರಾರಂಭ ಮಾಡಲಾಗುತ್ತದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಇಂದು ಬೆಳಗಾವಿಯಲ್ಲಿ ಘೋಷಣೆ ಮಾಡಿದ್ದಾರೆ. ಇದು ಪಕ್ಷಾತೀತವಾಗಿ ನಡೆಯುವ ಹೋರಾಟ, ಯಾರು ಬೇಕಾದರೂ ಹೋರಾಟದಲ್ಲಿ ಭಾಗವಹಿಸಬಹುದು ಎಂದು ಸಂಸದ ಡಿ.ಕೆ. ಸುರೇಶ್ ಮೇಕೆದಾಟು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಪೊಲೀಸ್ ಇಲಾಖೆಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ
ತೃತೀಯ ಲಿಂಗಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ನೀಡಿರುವ ಬಗ್ಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಸಮಾಜದಲ್ಲಿ ಬದಲಾವಣೆಗಳು ಆಗಬೇಕು. ತೃತೀಯ ಲಿಂಗಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಕೂಡ ಅವರ ಪರವಾಗಿ ನಿಂತಿದೆ. ಸರ್ಕಾರದ ಈ ಕ್ರಮವನ್ನು ಅಭಿನಂದಿಸುತ್ತೇನೆಂದು ಪ್ರತಿಕ್ರಿಯೆ ನೀಡಿದರು.












Click it and Unblock the Notifications