ಚನ್ನಪಟ್ಟಣ ಜನರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಡಿ.ಕೆ.ಶಿವಕುಮಾರ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ ಹಿನ್ನೆಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಚನ್ನಪಟ್ಟಣ ಜನ ವಾಸಕ್ಕೆ ಮನೆಗಳು ಬೇಕು ಎಂದು ಕೇಳಿದ್ದೀರಿ. ವಸತಿ ಇಲಾಖೆಯಿಂದ ಮನೆಗಳನ್ನು ನೀಡುತ್ತೇವೆ. ಯಾರೂ ಸಹ ಒಂದು ರೂಪಾಯಿ ಲಂಚ ಕೊಡಲು ಅವಕಾಶ ನೀಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ರಾಮನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಾತನೂರು ರಸ್ತೆಯ ಶ್ರೀಮಹದೇಶ್ವರ ದೇವಸ್ಥಾನದ ಹತ್ತಿರ ಆಯೋಜಿಸಿದ್ದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಡಿಸಿಎಂ ಮಾತನಾಡಿದ್ದಾರೆ. ನೀವು ನಮಗೆ ಮತ ನೀಡಿ ಬೆಂಬಲಿಸಿದ್ದನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲ. ನೀವು ಹಣಕ್ಕೆ ಬೆಲೆ ಕೊಡಲಿಲ್ಲ, ಗುಣಕ್ಕೆ ಬೆಲೆ ಕೊಟ್ಟಿರಿ ಎಂದು ಶ್ಲಾಘಿಸಿದ್ದಾರೆ.

ಜಿಲ್ಲೆಯಲ್ಲಿ ರಾಮನ ಭಂಟ ಆಂಜನೇಯನ ದೇವಸ್ಥಾನ ಎಲ್ಲೆಡೆ ಇದೆ, ಏಕೆಂದರೆ ಅವನು ಪ್ರಾಮಾಣಿಕ ಸೇವಕ. ಇಂತಹ ಸೇವೆಗೆ ನೀವೆಲ್ಲ ಅವಕಾಶ ಕೊಟ್ಟಿದ್ದೀರಿ. ಮನೆಗಳು ಬೇಕು ಎಂದು ನೀವು ಕೇಳಿಕೊಂಡಿದ್ದೀರಿ. ವಸತಿ ಇಲಾಖೆಯಿಂದ ಮನೆಗಳನ್ನು ನೀಡಲಿದ್ದು, ಯಾರೂ ಸಹ ಒಂದು ರೂಪಾಯಿ ಲಂಚ ಕೊಡಂಗಿಲ್ಲ ಎಂದಿದ್ದಾರೆ.
ನೀವು ಕೊಟ್ಟಿರುವ ಶಕ್ತಿಗಾಗಿ ನಿಮಗೆ ಅಭಿನಂದನೆಗಳನ್ನು ತಿಳಿಸಲು ಬಯಸಿದ್ದೆವು. 'ಗಾಂಧಿ ಭಾರತ' ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಮತದಾರರಿಗೆ, ಕಾರ್ಯಕರ್ತರಿಗೆ, ನಾಯಕರಿಗೆ ಅಭಿನಂದನೆಗಳನ್ನು ಹೇಳುವ ಸಮಾವೇಶ ನಡೆಸಲು ಸಾಧ್ಯವಾಗಿರಲಿಲ್ಲ. ಆ ಘಳಿಗೆ ಇಂದು ಬಂದಿದೆ. ಪಕ್ಷದ ಅಧ್ಯಕ್ಷನಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಸಮಸ್ತ ಜನತೆಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಬಿಜೆಪಿ-ಜೆಡಿಎಸ್ ನಾಯಕರು ಮಾಡಿರುವ ಟೀಕೆಗಳಿಗೆ ನೀವು ಕೊಟ್ಟಿರುವ ಜನಾದೇಶವೇ ತಕ್ಕ ಉತ್ತರ. ನೀವು ಚನ್ನಪಟ್ಟಣಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಒಂದು ಸಂದೇಶ ನೀಡಿದ್ದೀರಿ. ಅದಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು ಎಂದು ಡಿಕೆಶಿ ತಿಳಿಸಿದ್ದಾರೆ.
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದ ಮೂಲಕ ನಿಮ್ಮ ಮನೆ ಬಾಗಿಲಿಗೆ ಬಂದೆವು. ನೀವು ಕೊಟ್ಟ ಅರ್ಜಿ ಪಡೆದಿದ್ದೆವು. ಚನ್ನಪಟ್ಟಣ ಚುನಾವಣೆ ವೇಳೆ ನಾನು ಹೇಳಿದ್ದೆ, "ಇಲ್ಲಿ ಯೋಗೇಶ್ವರ್ ಅವರು ಅಭ್ಯರ್ಥಿ ಅಲ್ಲ, ನಾನು ಅಭ್ಯರ್ಥಿ" ಎಂದು, ಅದನ್ನು ಈಗಲೂ ಹೇಳುತ್ತೇನೆ, ನಾನೇ ಅಭ್ಯರ್ಥಿ. ಹಾಗಾಗಿ ಚನ್ನಪಟ್ಟಣ ಜನರಿಗೆ ನಾನು ಯಾವ ಮಾತು ಕೊಟ್ಟಿದ್ದೆನೋ ಅದನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಮೇಲೆ ವಿಶ್ವಾಸವಿಟ್ಟು ಜನರು ನಮಗೆ ಮತ ನೀಡಿದ್ದಾರೆ. ನಿಮಗೆ ಕಣ್ಣೀರು ಬೇಡ, ಅಭಿವೃದ್ಧಿ ಬೇಕು ಎನ್ನುವ ಆದೇಶ ನೀಡಿದ್ದೀರಿ. ಯಾವ ಬ್ಲಾಕ್‌ಮೇಲ್‌ಗೂ ನೀವು ಜಗ್ಗಲೂ ಇಲ್ಲ, ಬಗ್ಗಲೂ ಇಲ್ಲ! ಈಗ ನಮಗೆ ನಿಮ್ಮ ಸೇವೆ ಮಾಡುವ ಅವಕಾಶ ಸಿಕ್ಕಿದೆ. ನಿಮ್ಮ ಕಣ್ಣುಗಳಿಗೆ ಕಾಣಿಸುವ ರೀತಿಯ ಸಾಕ್ಷಿ ಗುಡ್ಡೆಗಳನ್ನು ನಿರ್ಮಾಣ ಮಾಡಿ ಮತ್ತೆ ನಿಮ್ಮ ಮುಂದೆ ಬರುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications