ಬಿಡದಿಯಲ್ಲಿ ಶೀಘ್ರವೇ ತಾಜ್ಯ ಇಂಧನ ಘಟಕ ಆರಂಭ, ಇದು ರಾಜ್ಯದಲ್ಲೇ ಮೊದಲು: ಕೆ.ಜೆ.ಜಾರ್ಜ್
ರಾಮನಗರ, ಆಗಸ್ಟ್, 09: ರಾಜ್ಯದಲ್ಲಿ ಪ್ರಥಮ ಬಾರಿಗೆ ತ್ಯಾಜ್ಯ ಇಂಧನ ಘಟಕವನ್ನು ಬಿಡದಿಯಲ್ಲಿ ಆರಂಭಿಸಲಾಗುವುದು ಎಂದು ಇಂಧನ ಸಚಿವ ಜಾರ್ಜ್ ಅವರು ತಿಳಿಸಿದರು.
ಬಿಡದಿ ಬಳಿ ನಿರ್ಮಾಣ ಹಂತದಲ್ಲಿರುವ ತಾಜ್ಯ ಇಂಧನ ಕೆಪಿಸಿಎಲ್ ಘಟಕವನ್ನು ಪರಿಶೀಲಿಸಿ ಮಾತನಾಡಿದ ಅವರು, ಪ್ರಥಮ ಬಾರಿಗೆ ರಾಜ್ಯದಲ್ಲಿ ತಾಜ್ಯ ಇಂಧನ ಘಟಕ ಆರಂಭಿಸಲಾಗುವುದು. ಇದು ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಿರ್ಮಾಣವಾಗುತ್ತಿದ್ದು, ಅಕ್ಟೋಬರ್ ತಿಂಗಳಲ್ಲಿ ಕಾರ್ಯಾರಂಭ ಆಗಲಿದೆ ಎಂದರು.

ಬಿಡದಿ ಬಳಿ ಸುಮಾರು 280 ಕೋಟಿ ವೆಚ್ಚದಲ್ಲಿ 15 ಹೆಕ್ಟೇರ್ ವಿಸ್ತೀರ್ಣದಲ್ಲಿ ಇಂಧನ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. 600 ಟನ್ ಸಾಮರ್ಥ್ಯ ಇರುವ ಇಂಧನ ಘಟಕ ಇದಾಗಿದ್ದು, ಇಲ್ಲಿ 11.5 ಮೆಗಾ ವ್ಯಾಟ್ ಪವರ್ ಉತ್ಪಾದನೆಯಾಗುತ್ತದೆ ಎಂದು ತಿಳಿಸಿದರು.
ಪ್ರತಿ ದಿನ ಬೆಂಗಳೂರಿನಲ್ಲಿ 6 ಸಾವಿರ ಟನ್ ಕಸ ಉತ್ಪಾದನೆಯಾಗುತ್ತದೆ. 7 ಪ್ಲಾಂಟ್‌ನಲ್ಲಿ ಹಸಿ ಕಸವನ್ನು ಕಂಪ್ರೆಸ್ ಮಾಡಲಾಗುತ್ತಿದೆ. ಬಂಡೂರು, ಟೆರಾಫಾರಂನಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯಲಾಗುತ್ತಿದ್ದು, ಹಿಂದೆ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿದ್ದ ವೇಳೆ ಈ ಬಗ್ಗೆ ಚಿಂತಿಸಿದ್ದೆ.
ನಂತರ ವಿದೇಶಿ ಪ್ರವಾಸ ಮಾಡಿ ಅಲ್ಲಿನ ರಾಜ್ಯ ಇಂಧನ ಘಟಕಗಳನ್ನು ಪರಿಶೀಲಿಸಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದರು.
ಬಿಬಿಎಂ, ಕೆಪಿಟಿಸಿಎಲ್ ಸಹೋಯೋಗದೊಂದಿಗೆ ಈ ಸ್ಥಾವರವನ್ನು ನಿರ್ಮಿಸುತ್ತಿದ್ದೇವೆ. ವಿದೇಶಿ ತ್ಯಾಜ್ಯ ವಿದ್ಯುತ್ ಘಟಕಕ್ಕಿಂತಲೂ ಇನ್ನು ಚೆನ್ನಾಗಿ ಘಟಕವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಕಸದ ವಾಸನೆ ಬರುವುದಿಲ್ಲ. ಪ್ರಾಯೋಗಿಕವಾಗಿ ಒಂದು ಸ್ಥಾವರ ಆರಂಭವಾಗಲಿದೆ. ಇನ್ನು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ತಿಳಿದು ಮತ್ತಷ್ಟು ಸ್ಥಾವರ ನಿರ್ಮಾಣ ಮಾಡುವ ಯೋಜನೆ ಇದೆ. ಎಲ್ಲ ಜಿಲ್ಲೆಯ ಕಸದ ಸಮಸ್ಯೆಯನ್ನು ಈ ರೀತಿ ನಿವಾರಣೆ ಆಗುತ್ತದೆ ಎಂದು ತಿಳಿಸಿದರು.
ಪ್ರತಿ ಯುನಿಟ್‌ಗೆ 8 ರೂಪಾಯಿ ಖರ್ಚಾಗಲಿದ್ದು, ಪ್ರತಿದಿನ 2.76 ಲಕ್ಷ ಯೂನಿಟ್ ಉತ್ಪಾದನೆಯಾಗಲಿದೆ. ಇದು ಪೈಲೆಟ್ ಪ್ರಾಜೆಕ್ಟ್ ಆಗಿ ಮಾಡಿದ್ದಾರೆ.
ಇಲ್ಲಿ ಸ್ಥಳೀಯ ಕಸಕ್ಕೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಪಂಕಜ್ ಕುಮಾರ್ ಪಾಂಡೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ರಾಮನಗರ ಬೆಸ್ಕಾ ಮುಖ್ಯ ಅಧ್ಯಕ್ಷರಾದ ಶಿವಪ್ಪ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಎಚ್‌ಡಿಕೆ ವಿರುದ್ಧ ಕೆ.ಜೆ.ಜಾರ್ಜ್ ಆಕ್ರೋಶ
ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಆರೋಪ ಮಾಡುವುದು ಸುಲಭ. ಕೃಷಿ ಸಚಿವ ಚಲುವರಾಯಸ್ವಾಮಿ ಅಸೆಂಬ್ಲಿಯಲ್ಲೇ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ. ಆರೋಪ ಮಾಡುವವರು ಸಾಕ್ಷಿ ನೀಡಬೇಕು. ಈಗಾಗಲೇ ಈ ಕುರಿತು ಸಿಎಂ ತನಿಖೆಗೆ ಆದೇಶ ಮಾಡಿದ್ದಾರೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತವೆ. ಸಿದ್ದರಾಮಯ್ಯ ಅಲ್ಲದೇ ಯಾವುದೇ ಮುಖ್ಯಮಂತ್ರಿಗಳ ಮೇಲೆ ಲಜ್ಜೆಗೆಟ್ಟ ಎಂಬ ಪದ ಬಳಸಬಾರದು. ಅದರಲ್ಲೂ ಮಾಜಿ ಮುಖ್ಯಮಂತ್ರಿಗಳು ಇಂತಹ ಪದ ಬಳಸಲೇಬಾರದು ಎಂದು ವಾಗ್ದಾಳಿ ನಡೆಸಿದರು.
ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ವಿರುದ್ಧ ಲಂಚದ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಸಿಎಂ ಸಹ ಉತ್ತರ ನೀಡಿದ್ದಾರೆ. ಇದನ್ನು ಅವರನ್ನೇ ಕೇಳಿ.
ಬರೀ ಆರೋಪಗಳನ್ನು ಮಾಡುತ್ತಾರೆ. ಆದರೆ ಅದನ್ನು ಯಾರಾದ್ರೂ ಸಾಬೀತು ಮಾಡಿದ್ದರಾ?. ಪೆನ್ ಡ್ರೈವ್‌ನಲ್ಲಿ ಏನಿದೆ ಎಂಬುದನ್ನು ಅವರು ತೋರಿಸಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಶೇಕಡಾ 40ರಷ್ಟು ಸರ್ಕಾರ ಎಂದು ಹೇಳಿದ್ದು ನಾವಲ್ಲ. ಅದನ್ನು ಹೇಳಿದ್ದು ಗುತ್ತಿಗೆದಾರರು. ಬಿಜೆಪಿ ಅವರದ್ದೇ ಸರ್ಕಾರ ಇದ್ದಾಗ ತನಿಖೆ ಮಾಡಬಹುದಾಗಿತ್ತು.
ಯಾಕೆ ಅವರು ತನಿಖೆ ಮಾಡಲಿಲ್ಲ. ನಮ್ಮ ಸರಕಾರ ಈಗಾಗಲೇ ನಿರ್ಣಯ ಕೈಗೊಂಡಿದೆ. ತನಿಖೆ ನಡೆಸಿ ಲೀಗಲ್ ಆಗಿ ಕ್ರಮತೆಗೆದುಕೊಳ್ಳುತ್ತೇವೆ ಎಂದು ಬಿಡದಿಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.












Click it and Unblock the Notifications