Kidnap Case: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ವಿದ್ಯಾರ್ಥಿನಿ ಕಿಡ್ನಾಪ್
ರಾಮನಗರ, ಆಗಸ್ಟ್ 28: ಹಾಡಹಗಲೇ ಯುವತಿಗೆ ಚಾಕು ಇರಿದು ಅಪಹರಣ ಮಾಡಿರುವ ಘಟನೆ ರಾಮನಗರದ ಸರ್ಕಾರಿ ಮಹಿಳಾ ಕಾಲೇಜು ಬಳಿ ನಡೆದಿದೆ.
ಇನ್ನೋವಾ ಕಾರಿನಲ್ಲಿ ರಾಮನಗರದ ಸರ್ಕಾರಿ ಮಹಿಳಾ ಕಾಲೇಜು ಬಳಿ ಬಂದ ಆರೋಪಿಗಳು ಮೊದಲು ಯುವತಿಯ ಕೈ ಹಾಗೂ ಭುಜದ ಭಾಗಕ್ಕೆ ಚಾಕುವಿನಿಂದ ಇರಿದಿದ್ದು, ಆಕೆಗೆ ತಪ್ಪಿಸಿಕೊಳ್ಳಲಾಗದಂತೆ ಮಾಡಿದ್ದಾರೆ. ಬಳಿಕ ಸಿನಿಮೀಯ ಶೈಲಿಯಲ್ಲಿ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಾಲೇಜು ವಿದ್ಯಾರ್ಥಿನಿಯ ಅಪಹರಣ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ರಾಮನಗರ ಟೌನ್ ಪೊಲೀಸರು ಸ್ಥಳೀಯರಿಂದ ಹಾಗೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹಾಡಹಗಲೇ ಕಿಡಿಗೇಡಿಗಳು ಸಾರ್ವಜನಿಕ ಸ್ಥಳದಲ್ಲೇ ಕಾಲೇಜು ವಿದ್ಯಾರ್ಥಿನಿಯನ್ನು ಅಪರಿಸಿದ್ದು, ಸ್ಥಳೀಯರಲ್ಲಿ ಹಾಗೂ ರಾಮನಗರದ ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಇನ್ನು ಪೊಲೀಸ್ ತನಿಖೆಯಿಂದ ವಿದ್ಯಾರ್ಥಿನಿ ಅಪಹರಣ ಹಿಂದಿನ ಉದ್ದೇಶ, ಆರೋಪಿಗಳು ಯಾರು ಹಾಗೂ ಅಪಹರಣಕಾರರ ಬೇಡಿಕೆ ಸೇರಿದಂತೆ ಇನ್ನುವುಳಿದ ಮಾಹಿತಿ ತಿಳಿದು ಬರಬೇಕಿದೆ.
ಇನ್ನು ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣ ಸಂಬಂಧ ರಾಮನಗರ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಚೇತನ್ ಬಂಧಿತ ಆರೋಪಿ. ಘಟನೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ರಾಮನಗರದ ರಾಮಕೃಷ್ಣ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.












Click it and Unblock the Notifications