ರಾಮನಗರ ಪ್ರವಾಹ ಪೀಡಿತ ಪ್ರದೇಶಕ್ಕೆ ಸಿಎಂ ಭೇಟಿ: ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ
ರಾಮನಗರ, ಆಗಸ್ಟ್ 29: ಜಿಲ್ಲೆಯಲ್ಲಿ ಸೋಮವಾರ ವರುಣನ ಅಬ್ಬರಕ್ಕೆ ರಾಮನಗರ ಜಿಲ್ಲೆ ನಲುಗಿ ಹೋಗಿದೆ. ಹಲವು ಕಡೆ ರಸ್ತೆ ಸಂಚಾರ ಅಸ್ತವ್ಯಸ್ತವಾದರೆ, ಮೈಸೂರು -ಬೆಂಗಳೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಜಲಾವೃತಗೊಂಡು ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದರು.
ರಾಮನಗರ ಮತ್ತು ಚನ್ನಪಟ್ಟಣದ ಹಲವು ಕಡೆ ಮಳೆ ನೀರು ಮನೆಗಳಿಗೆ ಹಾಗೂ ಜಮೀನಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ, ಕಂದಾಯ ಸಚಿವ ಆರ್ ಅಶೋಕ್ , ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದರು.
ಮಳೆ ಹಾನಿ ವೀಕ್ಷಣೆ ಬಳಿಕ ಮಾತನಾಡಿ ಸಿಎಂ ಬೊಮ್ಮಾಯಿ, ಅಕಾಲಿಕ ಮಳೆಯಿಂದ 16 ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟಾಗಿದೆ. ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಕ್ರಮಕ್ಕೆ ಆದೇಶಿಸಿದ್ದೇನೆ ಎಂದರು.

ಪರಿಹಾರ:
ದಶಪಥ ಹೆದ್ದಾರಿ ಬಳಿ ಅನೇಕ ಕಡೆ ಜಮೀನಿಗೆ, ಮನೆಗೆ ಮಳೆ ನೀರು ನುಗ್ಗಿದೆ. ಮಳೆಯಿಂದ ಹಾನಿಗಳೊಗಾಗಿರುವ ಮನೆಗಳಿಗೆ ತಕ್ಷಣ ಒಂದು ಲಕ್ಷ ರೂ ಹಾಗೂ ಹಂತ ಹಂತವಾಗಿ ಒಟ್ಟು 5 ಲಕ್ಷ ರೂ ಪರಿಹಾರ ನೀಡಲಾಗುವುದು. ಮಳೆ ನೀರು ನುಗ್ಗಿ ಹಾನಿಯಾಗಿರುವ ಮನೆಗಳಿಗೆ ತಲಾ 10 ಸಾವಿರ ಹಾಗೂ ಅಲ್ಪ ಹಾನಿಗೊಳಗಾಗಿರುವ ಮನೆಗಳಿಗೆ 3 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಚಾಮರಾಜ ಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್, " ಈ ವಿಚಾರದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಎರಡು ಬಾರಿ ಮಾತನಾಡಿದ್ದೇನೆ. ಅದು ಕಂದಾಯ ಇಲಾಖೆಗೆ ಸೇರಿದ ಜಾಗ. ಈಗಾಗಲೇ ನ್ಯಾಯಾಲಯ ಯಥಾಸ್ಥಿತಿಗೆ ಆದೇಶಿಸಿದೆ. ಅದರ ಬಗ್ಗೆಯೂ ಕೆಲವರು ಮೇಲ್ಮನವಿ ಸಲ್ಲಿಸಿದ್ದಾರೆ ಎಂದರು.

ಆ ಜಾಗದಲ್ಲಿ ದಿನಕ್ಕೆ ಎರಡು ಬಾರಿ ನಮಾಜ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಆ ಜಾಗವನ್ನು ಅವರಿಗೆ ಎಂದು ಬಿಟ್ಟುಕೊಟ್ಟಿಲ್ಲ. ಅದು 7 ಕೋಟಿ ಕನ್ನಡಿಗರ ಆಸ್ತಿ. ಆಗಸ್ಟ್ 31ರ ಒಳಗೆ ಈ ಬಗ್ಗೆ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತೇವೆ ಎಂದರು ಅಶೋಕ್ ತಿಳಿಸಿದರು.
ಗಣೇಶೋತ್ಸವಕ್ಕೆ ಎಸ್‌ಡಿಪಿಐ ವಿರೋಧಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಸ್‌ಡಿಪಿಐ ಯಾರು, ಅವರಿಗೆ ಏನು ಅಧಿಕಾರವಿದೆ? ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಸರಕಾರ. ಸ್ವಾತಂತ್ರ್ಯ ಬಂದು 75 ವರ್ಷಗಳಾಗುವವರೆಗೂ ಅಲ್ಲಿ ತ್ರಿವರ್ಣ ಧ್ವಜ ಮತ್ತು ಕನ್ನಡ ಧ್ವಜ ಹಾರಿಸಲು ಅವಕಾಶ ಇರಲಿಲ್ಲ. ಈಗಾಗಲೇ ಆಗಸ್ಟ್ 15 ರಂದು ರಾಷ್ಟ್ರಧ್ವಜವನ್ನು ಹಾರಿಸಿದ್ದೇವೆ. ಇಷ್ಟು ದಿನ ಎಲ್ಲಿ ಹೋಗಿದ್ದವರು ಎಂದು ಕಿಡಿಕಾರಿದರು.












Click it and Unblock the Notifications