Chennai-Bengaluru-Mysuru Bullet Train: ಯೋಜನೆಯಿಂದ ರಾಮನಗರ ರೈತರಿಗೆ ಸಂಕಷ್ಟ: ಕಾರಣವೇನು?
ಬೆಂಗಳೂರು, ಮಾರ್ಚ್ 06: ರೈತಾಪಿ ಸಮುದಾಯಗಳೇ ತುಂಬಿರುವ ಹಳೇ ಮೈಸೂರು ಭಾಗದ ರಾಮನಗರ ಜಿಲ್ಲೆ ಮಾರ್ಗವಾಗಿ ಚೆನ್ನೈ-ಬೆಂಗಳೂರು-ಮೈಸೂರು ಬುಲೆಟ್ ರೈಲು ಯೋಜನೆ (Chennai-Bengaluru-Mysuru Bullet Train Project) ರೂಪಿಸಲಾಗುತ್ತಿದೆ. ಇದು ಜಿಲ್ಲೆಯ ರೈತರನ್ನು ಚಿಂತೆಗೆ ದೂಡಿದೆ.
ರಾಷ್ಟ್ರಿಯ ಹೈಸ್ಪೀಡ್ ರೈಲು ನಿಗಮ ನಿಯಮಿತ (NHSRCL) ವು ಯೋಜನೆ ರೂಪಿಸುತ್ತಿದೆ. ಯೋಜನೆಗೆ ಮೊದಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಬೇಕಿದೆ. ಹೀಗಾಗಿ ಈ ಡಿಪಿಆರ್‌ಗೆ ಯಾವೆಲ್ಲ ಭೂಮಿಗಳು ಹಾನಿಯಾಗುತ್ತವೆ ಎಂಬುದನ್ನು ತಿಳಿಸಬೇಕು. ಹಾನಿಯಾಗುವ ಸಾಧ್ಯತೆ ಇರುವ 28 ಕಂದಾಯ ಭೂಮಿಗಳ ವರದಿ ನೀಡುವಂತೆ NHSRCL ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಈ ನಿರ್ದೇಶನ ಮೇರೆಗೆ ಜಿಲ್ಲಾಧಿಕಾರಿಗಳ ತಂಡವು ರಾಮನಗರದಲ್ಲಿ ಕ್ರಮ ಕೈಗೊಳ್ಳುತ್ತಿವೆ. ಯೋಜನೆಗೆ ಒಳಗಾಗಲಿರುವ ಜಮೀನುಗಳು, ಸರ್ವೇ ಪರಿಶೀಲನೆ, ಭೂಮಿ ಮಾಲೀಕರ ಜತೆ ಚರ್ಚಿಸಲು ಆಯಾ ಗ್ರಾಮ ಪಂಚಾಯತಿಗೆ ಪತ್ರ ಬರೆದು ಕ್ರಮ ಕೈಗೊಳ್ಳುತ್ತಿದೆ.
ಜಿಲ್ಲಾಡಳಿತದಿಂದ ಕ್ರಮ: ರೈತರಿಗೆ ಭೂಮಿ ಆತಂಕ
ಇದರಿಂದ ಫಲವತ್ತಾದ ಜಮೀನಿನಲ್ಲಿ ತೋಟಗಾರಿಕೆ, ರೇಷ್ಮೆ, ಹೈನುಗಾರಿಗೆ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರಿಗೆ ತಮ್ಮ ಬಂಗಾರದಂತಹ ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ರೈತರು ಆತಂಕದಲ್ಲಿದ್ದಾರೆ.
ಇನ್ನು ಬುಲೆಟ್ ಟ್ರೈನ್ ಯೋಜನೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಲಾಗಿದೆ. ಇವರಿಗೆ ಜಿಲ್ಲಾಡಳಿತ ಅಗತ್ಯ ಸಹಾಯ, ಸಹಕಾರ ನೀಡಬೇಕು ಎಂದು NHSRCL ಕಟ್ಟುನಿಟ್ಟಿನ ಸೂಚನೆ ನೀಡಿದೆ.

ರೈತರಿಂದ ಮಾಹಿತಿ ಸಂಗ್ರಹ
ಇದರ ಭಾಗವಾಗಿ ಜಿಲ್ಲಾಡಳಿತವು, ಏಜೆನ್ಸಿ ಸಿಬ್ಬಂದಿಯು ರಾಮನಗರ ಜಿಲ್ಲೆಯ ಕಂದಾಯ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಯೋಜನೆಗೆ ಒಳಗಾಗುವ ಭೂಮಿಯ ಮಾಲೀಕರನ್ನು ಸಂಪರ್ಕಿಸಿದ್ದಾರೆ. ಅವರ ಆಧಾರ್ ಕಾರ್ಡ್ ನೀಡುತ್ತಿದ್ದಾರೆ. ಅಲ್ಲದೇ ಆಯಾ ಗ್ರಾಮಸ್ಥರಿಗೆ ನಿಮ್ಮ ಹೊಲ, ಜಮೀನುಗಳಲ್ಲಿ ಬುಲೆಟ್ ರೈಲು ಯೋಜನೆ ಬರಬಹುದು ಎಂಬ ಪ್ರಾಥಮಿಕ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆರಂಭಿಕ ಹಂತದಲ್ಲಿರುವ ಚೆನ್ನೈ-ಬೆಂಗಳೂರು-ಮೈಸೂರು ಬುಲೆಟ್ ರೈಲು ಯೋಜನೆಯು, ಸಮಗ್ರ ಯೋಜನಾ ವರದಿ (DPR) ಸಿದ್ಧವಾದ ಬಳಿಕ ಯೋಜನೆ ಸಾಕಾರಕ್ಕೆ ಅಗತ್ಯ ರೈತರ ಜಮೀನು ಸ್ವಾಧೀನದ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಇದರಿಂದ ರೈತರಿಗೆ ತೊಂದರೆ ಆಗಲಿದೆ.
ಯೋಜನೆಯಿಂದ ರೈತರಿಂದ ನಷ್ಟ
ಯೋಜನೆಗಾಗಿ ಸರ್ವೇ ಮಾಡುವಾಗ ಜಮೀನಿನಲ್ಲಿ ಗುರುತು ಮಾಡಿದ್ದನ್ನು ನೋಡಿದ್ದೇವೆ. ಆದರೆ ಇದೇ ಅಂತಿಮವಾಗುತ್ತದೆ ಎಂಬ ಮಾಹಿತಿ ತಿಳಿದಾಗ ಜಮೀನು ಕಳೆದುಕೊಳ್ಳುವ ಭಯ ಶುರುವಾಗಿದೆ. ವಾರ್ಷಿಕವಾಗಿ ಎರಡು- ಮೂರು ಬೆಳೆ ಬೆಳೆದು ಜೀವನ ನಡೆಸುತ್ತಿರುವ ರೈತರಿಗೆ ಇದರಿಂದ ನಷ್ಟವಾಗಲಿದೆ ಎಂದು ರೈತರೊಬ್ಬರು ಅಳಲು ತೊಡಿಕೊಂಡರು.
ರಾಮನಗರ ಜಿಲ್ಲೆಯ ರೈತರು ಇಂತಹ ಬರಗಾಲದಲ್ಲೂ ವಿಶ್ವಾಸದಿಂದ ಇದ್ದರು. ಕೆರೆ ತುಂಬಿಸುವ ಯೋಜನೆಯಿಂದ ಅಂತರ್ಜಲ ಹೆಚ್ಚಾಗಿದೆ. ಇದರಿಂದ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸಬಹುದು ಎಂದುಕೊಂಡಿದ್ದವರಿಗೆ ಬುಲೆಟ್ ರೈಲು ಯೋಜನೆ ಬರೇ ಬಿದ್ದಿದೆ.












Click it and Unblock the Notifications